Advertisement

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

09:51 PM Mar 04, 2021 | Team Udayavani |

ಕಾರ್ಕಳ:  ಕೂಲಿಗೆ ಹೋದರೆ ನೀರಿಲ್ಲ. ನೀರು ಸಂಗ್ರಹಕ್ಕೆಂದು ಮನೆಯಲ್ಲಿ  ಉಳಿದರೆ ಹೊಟ್ಟೆಗೆ  ಹಿಟ್ಟಿಲ್ಲ. ಇಪ್ಪತ್ನಾಲ್ಕು ತಾಸು ಬರಬೇಕಿದ್ದ ನೀರು ದಿನಕ್ಕೆ  ಒಂದೆರಡು ತಾಸಷ್ಟೇ ಬರುತ್ತಿದೆ. ಇದು ಕುಕ್ಕುಂದೂರು  ಗ್ರಾಮ ಪಂಚಾಯತ್‌  ವ್ಯಾಪ್ತಿಯ ನಕ್ರೆ ದೇವರಗುಡ್ಡೆ ಕಾಲನಿ ನಿವಾಸಿಗಳ ಅಳಲು.

Advertisement

ನಕ್ರೆ ಭಾಗದ  5 ಸೆಂಟ್ಸ್‌  ಕಾಲನಿ,   ದೇವರಗುಡ್ಡೆ  ಕಾಲನಿ ಹೀಗೆ ನಕ್ರೆ ಪರಿಸರದ  ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ಪೂರೈಸಲು  ಇರುವುದು  1 ಕೊಳವೆ ಬಾವಿ, 1 ಪಂಪ್‌ಸೆಟ್‌,  1 ಟ್ಯಾಂಕ್‌ ಮಾತ್ರ. ನೀರು ಪೂರೈಕೆಯಲ್ಲಿ  ಅಡಚಣೆಯಾಗುತ್ತಿದೆ. ಶಿಥಿಲ ಟ್ಯಾಂಕ್‌ ಸೋರುತ್ತಿದೆ ಎಂದು ಪಂಪ್‌ನಿಂದ ನೇರ  ಪೈಪ್‌ಗ್ಳಿಗೆ  ಸಂಪರ್ಕ ನೀಡಲಾಗಿದೆ. 60ರಿಂದ 70 ಮನೆಗಳಿಗಷ್ಟೇ  ಟ್ಯಾಂಕ್‌ನಿಂದ  ನೀರು ಹರಿಸಲಾಗುತ್ತಿದೆ. ಉಳಿದೆಡೆಗೆ ಪಂಪ್‌ನಿಂದ  ನೇರ ಸಂಪರ್ಕವಿದೆ. ನಕ್ರೆ ಭಾಗದ ಶೇ.40ರಷ್ಟು ಕಡೆಯ ಭಾಗಕ್ಕೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು.  1 ಕೊಳವೆ ಬಾವಿ, ಕಡಿಮೆ ಸಾಮರ್ಥ್ಯದ ಪಂಪ್‌, ಪೈಪ್‌ ಒತ್ತಡಕ್ಕೆ ಒಡೆದು ಎಲ್ಲೆಡೆಗೆ ಪೂರೈಕೆಯಾಗುತ್ತಿಲ್ಲ.

ಟ್ಯಾಂಕ್‌ ತೊಳೆದೇ ಇಲ್ಲ!  ;

ಟ್ಯಾಂಕ್‌ ಶುದ್ಧಗೊಳಿಸದೆ ವರ್ಷಗಳೇ  ಹಿಡಿದಿವೆ. ಟ್ಯಾಂಕ್‌ ಸ್ವತ್ಛಗೊಳಿಸಲು  ಟ್ಯಾಂಕ್‌ನಿಂದ ನೀರು ತೊಳೆದು ಹೊರ ಬಿಡುವ ಪೈಪ್‌ ಬ್ಲಾಕ್‌ ಆಗಿ ನೀರು ಹೊರ ಹೋಗುತ್ತಿಲ್ಲ. ವರ್ಷಾನುಗಟ್ಟಲೆ ಟ್ಯಾಂಕ್‌ ತೊಳೆಯದೆ  ನೀರು ಹರಿಸುತ್ತಲೇ ಇರುವುದರಿಂದ  ಕೊಳಕು ನೀರು ಬಳಕೆಯೇ ಅನಿವಾರ್ಯವಾಗಿದೆ. ನೀರು ಕಿಲುಬು ವಾಸನೆ ಬರುತ್ತಿದೆ. ಕುಡಿಯಲು ಯೋಗ್ಯವಾಗಿಲ್ಲ ಎಂದು ಅಲ್ಲಿನವರು ಹೇಳುತ್ತಾರೆ. ಇನ್ನು ನೀರಿನ ಬಿಲ್‌ ಕೆಲವರು ಮಾತ್ರ  ಕಟ್ಟುತ್ತಿದ್ದು, ಕೆಲವರು ಕೃಷಿಗೂ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರಾದ ಜೈಶಂಕರ ನಕ್ರೆ ಆರೋಪಿಸಿದ್ದಾರೆ.

ಟ್ಯಾಂಕ್‌ ಬೀಳುವ ಭೀತಿ! :

Advertisement

ಟ್ಯಾಂಕ್‌ ಶಿಥಿಲಗೊಂಡಿರುವುದರಿಂದ ಬೀಳುವ ಭೀತಿ ಇದೆ. ಇದರ ಪಕ್ಕದಲ್ಲೇ ಆಟದ ಮೈದಾನವೂ ಇದ್ದು ಅಪಾಯದ ಭೀತಿ ಕಾಡಿದೆ. ಜತೆಗೆ ಮೈದಾನ ಪಕ್ಕ ಅಪಾಯದ ಸ್ಥಿತಿಯಲ್ಲಿ  ಚೇಂಬರ್‌ ಕೂಡ ಇದೆ. ಗೇಟ್‌ವಾಲ್‌ ಅಳವಡಿಸದೆ 2 ವರ್ಷಗಳು  ಕಳೆದಿವೆ.

ಶಿಥಿಲ ನೀರಿನ ಟ್ಯಾಂಕ್‌ , ಪಿಲ್ಲರ್‌ :

ನಕ್ರೆ ಭಾಗದ ನೀರಿನ ಸಮಸ್ಯೆ ನಿವಾರಿಸಲು 1990ರಲ್ಲಿ ದೇವರಗುಡ್ಡೆ ಎಂಬಲ್ಲಿ  ಅಂದಾಜು 40 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗಿತ್ತು. ಅದು ಸಂಪೂರ್ಣ ಶಿಥಿಲಗೊಂಡಿದೆ. ಪಿಲ್ಲರ್‌ಗಳು ಬಲ ಕಳೆದುಕೊಂಡಿವೆ. ಅಡ್ಡ  ಬೀಮ್‌ಗಳಲ್ಲಿ  ಕಾಂಕ್ರೀಟ್‌ ಕಿತ್ತು ಹೋಗಿ  ಸರಳುಗಳು ಹೊರ  ಬಂದಿವೆ. ಗ್ರಾ.ಪಂ. ಸಭೆಯಲ್ಲಿ ಚರ್ಚೆಗಳು ನಡೆದು  ಹೊಸ ಟ್ಯಾಂಕ್‌ ನಿರ್ಮಾಣಕ್ಕೆ  ಒತ್ತಾಯ ವ್ಯಕ್ತವಾಗಿತ್ತು. ಪಂಚಾಯತ್‌ನಲ್ಲೂ  2016ರಲ್ಲಿ  ನಿರ್ಣಯ  ಕೈಗೊಂಡು ಗ್ರಾಮೀಣ  ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ  ಪ್ರಸ್ತಾವ ಹೋಗಿದೆ.

31  ವರ್ಷಗಳ  ಹಿಂದಿನ  ನೀರಿನ ಟ್ಯಾಂಕ್‌

2016  ಗ್ರಾ.ಪಂ.ನಿಂದ ಹೊಸ ಟ್ಯಾಂಕ್‌ಗೆ ನಿರ್ಣಯ

1990 ರಲ್ಲಿ   ನೀರಿನ ಟ್ಯಾಂಕ್‌ ನಿರ್ಮಾಣ

200 ಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲ

1 ತಲಾ ಕೊಳವೆ ಬಾವಿ, ಪಂಪ್‌ಸೆಟ್‌, ತೊಟ್ಟಿ

ಹೊಸ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ  ನಿರಂತರ  ಹೋರಾಟ ನಡೆಸಿದ್ದೇವೆ. ಟ್ಯಾಂಕ್‌ ನಿರ್ಮಾಣ,  ನಕ್ರೆ ಭಾಗದ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ  ಪಂಚಾಯತ್‌ ಮುಂದೆ  ಶೀಘ್ರ  ಧರಣಿ ನಡೆಸಲಾಗುವುದು. –ಅಣ್ಣಪ್ಪ ನಕ್ರೆ,

ಸಾಮಾಜಿಕ ಕಾರ್ಯಕರ್ತ

ಒಂದೆರಡು ತಾಸು ಅಲ್ಲ;  ಹೆಚ್ಚಿನ ತಾಸು ನೀರು ಆ ಭಾಗದಲ್ಲಿ  ಪೂರೈಕೆಯಾಗುತ್ತಿದೆ. ಅಲ್ಲಿಂದ ದೂರುಗಳು ಕೂಡ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಮಾಧವ  ರಾವ್‌ ದೇಶ್‌ಪಾಂಡೆ ,  ಪಿಡಿಒ

 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next