Advertisement

ಜಿಲ್ಲಾಭಿಮಾನದ ಕೊರತೆ-ಸೋತ ಘಟನೆ-ಸಂಘಟನೆ

12:23 PM Jun 20, 2019 | Suhan S |

ಹೊನ್ನಾವರ: ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಅಭೂತಪೂರ್ವ ಮಾನವ ಸಂಪನ್ಮೂಲ ಕೊಟ್ಟ ಉ.ಕ. ಜಿಲ್ಲೆಯ ಹಿಂದಿನ ತಲೆಮಾರಿನವರಲ್ಲಿ ಜಿಲ್ಲಾಭಿಮಾನದ ಒರತೆ ಚಿಮ್ಮುತ್ತಿತ್ತು. ಇಂದು ಅದರ ಕೊರತೆಯಿಂದ ಹಲವು ಸಂಘಟನೆಗಳು ಸೋತು, ನಡೆಯಬಾರದ ಘಟನೆಗಳು ನಡೆಯುತ್ತಿವೆ.

Advertisement

ಯಕ್ಷಗಾನ ಲೋಕಕ್ಕೆ ನೂರಾರು ಕಲಾವಿದರನ್ನು ಕೊಟ್ಟ ಜಿಲ್ಲೆ ಒಂದು ಮೇಳವನ್ನು ಉಳಿಸಿಕೊಳ್ಳಲಾರದೇ ಹೋಯಿತು. ಲಕ್ಷಾಂತರ ಜನ ಯಕ್ಷಾಭಿಮಾನಿಗಳು ಎಂದುಕೊಳ್ಳುತ್ತಾರೆ. ವರ್ಷಕ್ಕೆ ತಲಾ ನೂರು ರೂ. ಕೊಟ್ಟಿದ್ದರೆ ಮೇಳಗಳು ಉಚಿತ ಆಟ ಪ್ರದರ್ಶಿಸುತ್ತಿತ್ತು. ಬಾಯ್ತುಂಬ ಹೊಗಳುವ, ತೆಗಳುವ, ದಿನವಿಡೀ ಚರ್ಚಿಸುವ ಅಭಿಮಾನಿಗಳೆಂದುಕೊಂಡವರು ಕೈಯೆತ್ತಿ ಸಣ್ಣ ಮೊತ್ತ ಕೊಡಲಾರದಾದರು. ದುಡ್ಡು ಕೊಟ್ಟು ನಾಲ್ಕು ಆಟವನ್ನೂ ನೋಡಲಿಲ್ಲ, ಆದರೆ ಅಭಿಮಾನದ ಒಣಮಾತಿಗೆ ಬರ ಬರಲಿಲ್ಲ.

ಜಿಲ್ಲೆಯಲ್ಲಿ ಹಲವರು ಮೇಳ ನಡೆಸಿದರು. ಕೆರೆಮನೆ ಶಂಭು ಹೆಗಡೆ ಅವರ ಮಹಾತ್ವಾಕಾಂಕ್ಷೆಯ ವೃತ್ತಿಮೇಳ ನಿಂತು ಹೋಯಿತು. ಶಿವಾನಂದ ಹಲವು ರಗಳೆಗಳಿಂದ ಬಿಡಿಸಿಕೊಳ್ಳುತ್ತ ಕಷ್ಟದಿಂದ ಮುಂದುವರಿದಿದ್ದಾನೆ. ಜಲವಳ್ಳಿಯವರ ಮಗ ವಿದ್ಯಾಧರ ಆ ಸಾಹಸಕ್ಕಿಳಿದಾಗ ವೆಂಕಟೇಶರಾವ್‌ ಸೋತು ಗೆದ್ದ ಮಗ ಎಂದು ಖುಷಿಪಟ್ಟಿದ್ದರು. ಮತ್ತೆ ಮಗ ಸೋಲುವಾಗ ಅವರಿರಲಿಲ್ಲ ಎಂಬುದು ಸಮಾಧಾನದ ಸಂಗತಿ. ಹಿಂದೆ ಒಂದು ಮೇಳಕ್ಕೆ ಇಬ್ಬರು ಪ್ರಮುಖ ಕಲಾವಿದರು, ಉಳಿದವರು ಸಾಮಾನ್ಯ ಕಲಾವಿದರು. ಒಂದು ಮೇಳದಿಂದ ಅಡ್ವಾನ್ಸ್‌ ಪಡೆದ ಮೇಲೆ ಸೀಜನ್‌ ಮುಗಿಯುವವರೆಗೆ ಬೇರೆ ಮೇಳಕ್ಕೆ ಹೋಗುವಂತಿಲ್ಲ. ವಿದ್ಯಾಧರ ಮೇಳಕ್ಕೆ ಕಲಾವಿದರು ಹೆಚ್ಚಾದರು. ರಾತ್ರಿ 2-3ಕಡೆ ಬಣ್ಣಹಚ್ಚಿದರು. ಶಿಸ್ತಿರಲಿಲ್ಲ. ಜನಕ್ಕೂ ನಮ್ಮದು, ಉಳಿಸಿಕೊಳ್ಳಬೇಕು ಎಂಬ ಅಭಿಮಾನ ಇರಲಿಲ್ಲ. ಮೇಳ ಸಂಘಟನೆ, ಪಾತ್ರ ನಿರ್ವಹಣೆ ಎರಡನ್ನೂ ಮಾಡಲು ಹೊರಟರೆ ಒಂದು ಖಂಡಿತ ಸೋಲುತ್ತದೆ. ಹಲವರು ಸೋತಲ್ಲಿ ವಿದ್ಯಾಧರ ಗೆಲ್ಲಬಹುದು ಎಂಬ ಸಣ್ಣ ಆಸೆ ಸುಳ್ಳಾಗಿದೆ.

ಜಿಲ್ಲೆಯಲ್ಲಿ ಲಕ್ಷಾಂತರ ಜನ ಚಿಟ್ಟಾಣಿ ಅಭಿಮಾನಿಗಳಿದ್ದಾರೆ. ಅವರು ನಿಧನರಾದಾಗ ಮೈಸೂರಿನ ಅಭಿಮಾನಿಯೊಬ್ಬರು ಎರಡು ಪುಸ್ತಕ ಸಿದ್ಧಪಡಿಸಿ, ಪ್ರಕಾಶಕರನ್ನು ಹುಡುಕಿ ಪ್ರಕಟಿಸಿದರು. ಚಿಟ್ಟಾಣಿ ಜೀವಿತ ಕಾಲದ ಮತ್ತು ನಂತರದ ಹಲವು ಮಹತ್ವದ ಲೇಖನಗಳಿದ್ದವು. ಮಂಕಿ ಅಭಿಮಾನಿಯೊಬ್ಬರು 60ಕ್ಕೂ ಹೆಚ್ಚು ಚಿಟ್ಟಾಣಿಯವರ ಡಿವಿಡಿ ಸಿದ್ಧಪಡಿಸಿದ್ದರು. ಕವಲಕ್ಕಿ ಛಾಯಾ ಗ್ರಾಹಕರೊಬ್ಬರು ಸಾವಿರಾರು ಅಪೂರ್ವ ಚಿತ್ರಗಳನ್ನು ಮುದ್ರಿಸಿದ್ದರು. ಜನರಲ್ಲಿ ನಿಜವಾಗಿ ಚಿಟ್ಟಾಣಿ ಅಭಿಮಾನ ಇದ್ದಿದ್ದರೆ ಚಿಟ್ಟಾಣಿಯವರನ್ನು ನೆನಪಿಸುವ ಈ ಪುಸ್ತಕ, ಸಿಡಿ, ಛಾಯಾಚಿತ್ರ ನಾಲ್ಕು ಮುದ್ರಣವಾಗಬೇಕಿತ್ತು. ಜಿಲ್ಲೆಯಲ್ಲಿ 100 ಪುಸ್ತಕ, ಡಿವಿಡಿ, ಫೋಟೋ ಮಾರಾಟವಾಗಲಿಲ್ಲ.

ಕೆಲವು ಕಲಾಪ್ರೇಮಿಗಳು ಸಂಗೀತ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಉಚಿತವಾಗಿ ಕೇಳಲು, ನೊಡಲು ಸಾವಿರಾರು ಕಲಾಭಿಮಾನಿಗಳು ಬರುತ್ತಾರೆ. ಇವರ್ಯಾರು ಬಡವರಲ್ಲ. ಇವರಲ್ಲಿ ಶೇ. 90ರಷ್ಟು ಜನ 1ಪೈಸೆ ದೇಣಿಗೆಯನ್ನೂ ಕೊಡುವುದಿಲ್ಲ. ಹೊಟ್ಟೆಬಟ್ಟೆ ಕಟ್ಟಿ ಕಲಾಸಂಪತ್ತನ್ನು ಹಿಂದಿನವರು ಉಳಿಸಿಕೊಟ್ಟು ಹೋಗಿದ್ದಾರೆ. ನಾವು ಕೈಲಾದ ನೆರವು ನೀಡಿ, ನಿಜವಾದ ಅಭಿಮಾನ ತೋರಿಸಿ, ಉಳಿಸಿಕೊಳ್ಳಬೇಕು ಎಂಬ ಭಾವನೆ ಜನಕ್ಕಿಲ್ಲ.

Advertisement

ಮುರ್ಡೇಶ್ವರದ ಬಗ್ಗೆ ಹೆಮ್ಮೆ ಪಡುತ್ತೇವೆ. ಗೋಕರ್ಣದ ಬಗ್ಗೆ ಗೋಕರ್ಣದವರಿಗೇ ಅಭಿಮಾನವಿಲ್ಲ. 500ಕ್ಕೂ ಹೆಚ್ಚು ದೇವಸ್ಥಾನಗಳಿರುವ ಮಹಾಬಲೇಶ್ವರ ಗುಡಿಯ ಆಸುಪಾಸಿನಲ್ಲಿ ಹೆಂಡ ಜೋರಾಗಿದೆ ಎಂದು ಪ್ರತಿಭಟನೆ ನಡೆಯಿತು. ಸ್ವಚ್ಛತೆ ಕೊರತೆ, ನೀರಿನ ಸಮಸ್ಯೆ, ಸಂಚಾರದ ಅಸ್ತವ್ಯಸ್ಥತೆ ಗೋಕರ್ಣದ ಅಂದಗೆಡಿಸಿದೆ. ಜನಕ್ಕೆ ಸ್ವಾಭಿಮಾನವಿದ್ದಿದ್ದರೆ ಕೇಂದ್ರ ಮತ್ತು ರಾಜ್ಯದಿಂದ ವಿಶೇಷ ಸಹಾಯಧನ ಪಡೆದು ಗೋಕರ್ಣದ ಕುರಿತು ಹೆಮ್ಮೆಪಡುವಂತೆ ಮಾಡುತ್ತಿದ್ದರು. ಜಿಲ್ಲೆಯ ಜನಪ್ರತಿನಿಧಿಗಳಿಗೆ ಗೋಕರ್ಣದ ಕುರಿತು ಅಭಿಮಾನ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಬಾಯ್ಮಾತಿನ ಅಭಿಮಾನ, ಶುಷ್ಕ ಉಪದೇಶ, ಕ್ಷುದ್ರ ರಾಜಕೀಯ, ಸಮಾಜದಲ್ಲಿ ವಿಜೃಂಭಿಸಿದರೆ ಜನಪರ ಯಾವುದೂ ನಿಲ್ಲುವುದಿಲ್ಲ. ತ್ರಿಕರಣ ಪೂರ್ವಕವಾಗಿ ನಾವು, ನಮ್ಮ ಜಿಲ್ಲೆ, ನಮಗಾಗಿ ಅಭಿವೃದ್ಧಿ ಎಂಬ ಭಾವನೆಗಳು ಸಮಾಜದಲ್ಲಿದ್ದರೆ ಜಿಲ್ಲೆ ಉದ್ಧಾರವಾಗುತ್ತದೆ.

ಹೋರಾಟಕ್ಕಿಲ್ಲ ಪುರುಸೋತ್ತು:

ಆಸ್ಪತ್ರೆಗಾಗಿ, ಚಿಕಿತ್ಸಾ ಸೌಲಭ್ಯಕ್ಕಾಗಿ ಕೆಲವರು ಹೋರಾಡುತ್ತಿದ್ದಾರೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲಿ ಲೈಕ್‌ ಕೊಡುವುದನ್ನು ಬಿಟ್ಟು ಇನ್ನೇನೂ ಮಾಡದವರಿಂದ ಆಸ್ಪತ್ರೆ ಆಗುವುದಿಲ್ಲ. ಫಲಾನುಭವಿಗಳಾಗಲು ಎಲ್ಲರೂ ಸಿದ್ಧ, ಹೋರಾಟಕ್ಕೆ ಪುರುಸೊತ್ತಿಲ್ಲ. ತಾಲೂಕು ಕೇಂದ್ರದಲ್ಲಿರುವ ಮಾರ್ಕೆಟಿಂಗ್‌ ಸೊಸೈಟಿ, ಎಪಿಎಂಸಿ ಮುಂತಾದವು ಎಲ್ಲ ರೈತರ ಉದ್ಧಾರಕ್ಕೆ ಹುಟ್ಟಿಕೊಂಡವು. ಶಿರಸಿಯ ಟಿಎಸ್‌ಎಸ್‌ ಹೊರತಾಗಿ ಉಳಿದ ತಾಲೂಕುಗಳಲ್ಲಿರುವ ಸಂಸ್ಥೆ ಸ್ವಂತಕ್ಕೆ ಸೊರಗುವಾಗ ಉಪಕಾರ ಮಾಡುವ ಪ್ರಶ್ನೆ ಎಲ್ಲಿ ಬಂತು. ಜನಕ್ಕೆ ಇದು ನಮ್ಮದು ಎಂಬ ಅಭಿಮಾನ ಇದ್ದರೆ ಟಿಎಸ್‌ಎಸ್‌ನಂತೆ ಎಲ್ಲ ತಾಲೂಕುಗಳಲ್ಲೂ ದೊಡ್ಡ ಸಂಸ್ಥೆ ತಲೆ ಎತ್ತುತ್ತಿತ್ತು.
•ಜೀಯು ಹೊನ್ನಾವರ
Advertisement

Udayavani is now on Telegram. Click here to join our channel and stay updated with the latest news.

Next