Advertisement

Devanahalli: ಜಿಲ್ಲೆಯಲ್ಲಿ ಡಯಾಲಿಸಿಸ್‌ ಯಂತ್ರ ಸಾಲುತ್ತಿಲ್ಲ

12:23 PM Dec 02, 2023 | Team Udayavani |

ದೇವನಹಳ್ಳಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳಿಗೆ ತಾಂತ್ರಿಕ ಸಿಬ್ಬಂದಿ ಜತೆಗೆ ಯಂತ್ರಗಳ ಕೊರತೆ ಇದ್ದು, ರೋಗಿಗಳಿಗೆ ತೊಂದರೆಯಾಗುತ್ತಿದೆ. ಡಯಾಲಿಸಿಸ್‌ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ನೀಡಿ ಬಡವರಿಗೆ ಅನುಕೂಲ ಮಾಡಿಕೊಡಬೇಕು.

Advertisement

ಇತ್ತೀಚಿನ ದಿನಗಳಲ್ಲಿ ಕಿಡ್ನಿ ವೈಫ‌ಲ್ಯದಿಂದ ಸಾಕಷ್ಟು ಜನ ಬಳಲುತ್ತಿದ್ದು, ಅವರು ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯಲ್ಲಿ ವಿಳಂಬ ಆಗುತ್ತಿದೆ. ಇದರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ವೆಚ್ಚದಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿದರೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವುದು ತಪ್ಪಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹೆಚ್ಚು ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಬೇಕು. ಯಂತ್ರಕ್ಕೆ ತಕ್ಕಂತೆ ವೈದ್ಯಕೀಯ ಸಲಕರಣೆಗಳು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು. ಡಯಾಲಿಸಿಸ್‌ಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಬೇಕು ಎಂದು ಡಯಾಲಿಸಿಸ್‌ ರೋಗಿಗಳು ಹೇಳುತ್ತಾರೆ.

ಒಬ್ಬರಿಗೆ ಡಯಾಲಿಸಿಸ್‌ ಮಾಡಬೇಕಾದರೆ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ದಿನಕ್ಕೆ ಇಬ್ಬರಿಂದ ಮೂವರಿಗೆ ಮಾತ್ರ ಡಯಾಲಿಸಿಸ್‌ ಮಾಡಿಸಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15 ಡಯಾಲಿಸಿಸ್‌ ಯಂತ್ರಗಳಿದ್ದು, ಅದರಲ್ಲಿ ದೇವನಹಳ್ಳಿಯಲ್ಲಿ 2 ಯಂತ್ರಗಳ ಪೈಕಿ ಒಂದು ಯಂತ್ರ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೊಸಕೋಟೆ ಮತ್ತು ನೆಲಮಂಗಲಗಳಲ್ಲಿ ದಾನಿಗಳ ಸಹಕಾರದಿಂದ ಡಯಾಲಿಸಿಸ್‌ ಯಂತ್ರಗಳನ್ನು ನೀಡಲಾಗಿದೆ. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಆರು ಡಯಾಲಿಸಿಸ್‌ ಯಂತ್ರಗಳನ್ನು ಕೊಡಿಸಲು ಮುಂದೆ ಬಂದಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ 5 ಯಂತ್ರಗಳು ನಿರ್ವಹಿಸುತ್ತಿದೆ. ಹೆಚ್ಚಿನ ಯಂತ್ರಗಳನ್ನು ಅಳವಡಿಸಿದರೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಜಿಲ್ಲೆಯಲ್ಲಿ 15 ಡಯಾಲಿಸಿಸ್‌ ಯಂತ್ರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರಗಳಲ್ಲಿ ಡಯಾಲಿಸಿಸ್‌ ತಜ್ಞರು, ಡಯಾಲಿಸಿಸ್‌ ತಾಂತ್ರಿಕ ತಜ್ಞರು, ನರ್ಸ್‌ಗಳು, ಹಾಗೂ ಹೆಚ್ಚುವರಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ದೊಡ್ಡಬಳ್ಳಾಫ‌ುರದಲ್ಲಿ 5 ಯಂತ್ರ, ನೆಲಮಂಗಲ-3, ಹೊಸಕೋಟೆ-5 ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15 ಡಯಾಲಿಸಿಸ್‌ ಯಂತ್ರಗಳಿವೆ. ದೇವನಹಳ್ಳಿ 2 ಯಂತ್ರಗಳ ಪೈಕಿ ಒಂದು ಯಂತ್ರ ಮಾತ್ರ ಕಾಲ ನಿರ್ವಹಿಸುತ್ತಿದೆ.

Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾಕಷ್ಟು ವಿಳಂಬ ಆಗಲಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ಕಟ್ಟಿ, ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಡಯಾಲಿಸಿಸ್‌ ಯಂತ್ರ ಅಳವಡಿಸಿ, ಸಿಬ್ಬಂದಿ ನೇಮಿಸಬೇಕು. ●ರವಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿರುವ ರೋಗಿ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿದೆ. ನಾಲ್ಕು ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ 15 ಡಯಾಲಿಸಿಸ್‌ ಯಂತ್ರಗಳು ಇವೆ. ಜಿಲ್ಲೆಯಲ್ಲಿ ಎಲ್ಲಿಯೂ ಸಮಸ್ಯೆ ಇಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮತ್ತಷ್ಟು ಯಂತ್ರ ಅಳವಡಿಸಲು ಚಿಂತಿಸಲಾಗುತ್ತಿದೆ. -ಡಾ| ಸುನಿಲ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next