ಚನ್ನಪಟ್ಟಣ: ಪಟ್ಟಣದ ಎಲೆಕೇರಿಯ ಅರ್ಧ ಭಾಗವನ್ನು ಹೊಂದಿರುವ 15ನೇ ವಾರ್ಡ್ ಸಹ ಚುನಾವಣೆ ನಡೆಯದೇ ಅವಿರೋಧವಾಗಿ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡು ಗಮನ ಸೆಳೆದಿತ್ತು. ಈ ಎಲೆಕೇರಿಯಲ್ಲಿ ರಸ್ತೆ, ಚರಂಡಿ, ಕಸದ ಸಮಸ್ಯೆ ಸಾಕಷ್ಟು ಇದೆ.
ಚರಂಡಿಗಳಲ್ಲಿ ತುಂಬಿಕೊಂಡಿದೆ ಹೂಳು: ರಾಂಪುರ ಅಡ್ಡರಸ್ತೆಯಲ್ಲಿ ಡಾಂಬರೀಕರಣಗೊಂಡಿರುವ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಗುಂಡಿಗಳು ಬಿದ್ದಿದೆ. ರಸ್ತೆಯ ಎರಡೂ ಬದಿಯ ಚರಂಡಿಗಳು ಹೂಳು ತುಂಬಿಕೊಂಡು ಎಲೆಕೇರಿಯ ಕೊಳಚೆ ನೀರು ರಸ್ತೆಗೇ ಹರಿಯುತ್ತಿದೆ. ಮೊರಾರ್ಜಿ ದೇಸಾಯಿ ಶಾಲೆಯ ಪಕ್ಕದ ರಸ್ತೆಯ ಪರಿಸ್ಥಿತಿಯೂ ಹೀಗೆಯೇ ಇದೆ. ಈ ರಸ್ತೆಯಲ್ಲಿ ಎರಡೂ ಬದಿಯಲ್ಲಿ ಚರಂಡಿ ಸುಸ್ಥಿತಿಯಲ್ಲಿಲ್ಲ. ಚರಂಡಿಗಳು ಮುಚ್ಚಿಕೊಂಡು ಕೊಳಚೆ ನೀರು ಹರಿಯದೇ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಳೆ ಬಂದಾಗ ರಸ್ತೆ ಗದ್ದೆ: ಇನ್ನು ನ್ಯೂ ಎಕ್ಸ್‌ಟೆನ್ಷನ್‌ನಲ್ಲಿ ರಸ್ತೆ ಅಭಿವೃದ್ಧಿಯೇ ಆಗಿಲ್ಲ, ಮಣ್ಣಿನ ರಸ್ತೆಯನ್ನೇ ನಿವಾಸಿಗಳು ಬಳಸುತ್ತಿದ್ದಾರೆ. ಮಳೆ ಬಂದಾಗ ರಸ್ತೆ ಗದ್ದೆಯಂತಾಗಿ ಓಡಾಡಲು ಆಗದಂತಾಗುತ್ತದೆ. ರಸ್ತೆಯೇ ಇಲ್ಲವೆಂದ ಮೇಲೆ ಚರಂಡಿ ಸ್ಥಿತಿ ಹೇಳಬೇಕಿಲ್ಲ. ಚರಂಡಿಗಳ ಅಸ್ತಿತ್ವವೇ ಇಲ್ಲವಾಗಿದೆ. ಇರುವ ಚರಂಡಿಗಳು ಹಳೆಯದಾಗಿದ್ದು, ಅವುಗಳು ಹೂಳು ತುಂಬಿಕೊಂಡು ಅಲ್ಲಲ್ಲಿ ಕೊಳಚೆ ನೀರು ಹರಿಯುತ್ತಿಲ್ಲ.
ಕಸದ ಸಮಸ್ಯೆಯೂ ಹೆಚ್ಚಿದೆ: ಕಸದ ಸಮಸ್ಯೆ ಎಲೆಕೇರಿಯಲ್ಲಿ ಹೆಚ್ಚಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರಿಗೇ ಕಸದ ಗುಡ್ಡೆ ಬಿದ್ದಿದ್ದು, ಮಕ್ಕಳು ಆ ವಾಸನೆ ಸಹಿಸಿಕೊಂಡು ವಿದ್ಯಾರ್ಜನೆ ಮಾಡಬೇಕಿದೆ. ಶಾಲೆಯ ಎದುರಿಗೇ ಬಿದ್ದಿದ್ದರೂ ಅದನ್ನು ತೆರವು ಮಾಡಲು ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ. ಅಥವಾ ಬೇರೆಡೆಗೆ ಕಸ ಹಾಕುವ ಸ್ಥಳವನ್ನು ನಿಗದಿಪಡಿಸುವ ಕೆಲಸ ಮಾಡಿಲ್ಲ, ಮೂರ್‍ನಾಲ್ಕು ದಿನ ಕಸ ಎತ್ತದಿದ್ದರೆ ಕಸದ ರಾಶಿಯೇ ನಿರ್ಮಾಣವಾಗುತ್ತದೆ. ಬೀದಿನಾಯಿ, ಹಂದಿಗಳು ಕಸವನ್ನು ತಿನ್ನಲು ಆಗಮಿಸುತ್ತವೆ. ಮಕ್ಕಳು ಸಮಸ್ಯೆ ಎದುರಿಸಿಕೊಂಡೇ ಶಾಲಾ ಆವರಣದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
Advertisement
ದೇವರಹೊಸಹಳ್ಳಿ ರಸ್ತೆಯ ಬಲಭಾಗದಲ್ಲಿ ವಾರ್ಡ್ ಕೊಂಚ ಸಮಸ್ಯೆಗಳನ್ನು ನೀಗಿಸಿಕೊಂಡಿದೆ. ಆದರೆ, ಎಡಭಾಗದಲ್ಲಿ ಮೂಲಭೂತ ಸಮಸ್ಯೆಗಳು ಕಾಡುತ್ತಿವೆ. ಮಣ್ಣಿನ ರಸ್ತೆ, ಚರಂಡಿ ಇಲ್ಲದ ಕಾರಣ ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಕಿತ್ತುಹೋಗಿರುವ ಡಾಂಬರು, ಕಾಂಕ್ರೀಟ್ ರಸ್ತೆಗಳು ಆಡಳಿತದ ನಿರ್ಲಕ್ಷ್ಯವನ್ನು ಸಾರುತ್ತಿವೆ.
Related Articles
Advertisement
ನೀರು, ಬೀದಿದೀಪ ಸಮಸ್ಯೆ ಇಲ್ಲ: ಉಳಿದಂತೆ ದೇವರಹೊಸಹಳ್ಳಿ ರಸ್ತೆ ಬಲಭಾಗದಲ್ಲಿ ರಸ್ತೆ ಕಾಂಕ್ರೀಟೀಕರಣಗೊಂಡಿವೆ. ಅಲ್ಲಲ್ಲಿ ಆ ರಸ್ತೆಗಳೂ ಗುಂಡಿಬಿದ್ದಿವೆ. ಕೆಲವು ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ. ಕುಡಿಯುವ ನೀರು, ಬೀದಿದೀಪ ಸಮಸ್ಯೆ ಎಲೆಕೇರಿಯಲ್ಲಿ ಇಲ್ಲ. ಕಾವೇರಿ, ಬೋರ್‌ವೆಲ್ ನೀರು ಸರಬರಾಜಾಗುವುದರಿಂದ ಈ ಸಮಸ್ಯೆಯಿಂದ ಎಲೆಕೇರಿ ಮುಕ್ತವಾಗಿದೆ. ಎಲೆಕೇರಿಯಲ್ಲಿ ಬಹುತೇಕ ಕಾಮಗಾರಿಗಳು ಆಗಬೇಕಿದೆ.
ಒಟ್ಟಾರೆ ಎಲೆಕೇರಿಯಲ್ಲಿ ಅಭಿವೃದ್ಧಿಯಾಗಿರುವುದಕ್ಕಿಂತ ಸಾಕಷ್ಟು ಅಭಿವೃದ್ಧಿ ಇನ್ನಷ್ಟು ಆಗಬೇಕಿದೆ. ಪ್ರಮುಖವಾಗಿ ರಸ್ತೆ, ಚರಂಡಿ ಕಾಮಗಾರಿಗಳು ಇಲ್ಲಿ ಆಗಬೇಕಿದ್ದು, ಆಗ ಮಾತ್ರ ನಿವಾಸಿಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.
ಪ್ರತಿನಿತ್ಯ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲು ಆಗ್ರಹ:
ಬಹುತೇಕ ರಸ್ತೆಗಳ ಬದಿಗಳಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲ. ಚರಂಡಿಯಲ್ಲಿ ನೀರು ಹರಿಯದೇ ರಸ್ತೆಗೆ ಬರುವ ಸ್ಥಿತಿ ಇದೆ. ಮೊರಾರ್ಜಿ ದೇಸಾಯಿ ಶಾಲೆಯ ಎದುರೇ ಕಸವನ್ನು ರಾಶಿ ಹಾಕಲಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ವಸತಿ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳು ದಿನವಿಡೀ ಕಸದ ವಾಸನೆ ಸಹಿಸಿಕೊಳ್ಳಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರತಿನಿತ್ಯ ಕಸ ವಿಲೇವಾರಿ ಮಾಡುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯ ನಿವಾಸಿ ರಾಜಶೇಖರ್ ಆಗ್ರಹಿಸಿದ್ದಾರೆ.
● ಎಂ.ಶಿವಮಾದು