Advertisement

ಕಳಕಾಪುರಕ್ಕೆ ಅಭಿವೃದ್ಧಿ ಮರೀಚಿಕೆ

12:44 PM Nov 29, 2019 | Team Udayavani |

ನರೇಗಲ್ಲ: ಕೇಂದ್ರ-ರಾಜ್ಯ ಸರ್ಕಾರಗಳು ಗ್ರಾಮಗಳಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದರೂ ಗುರಿ ಮಾತ್ರ ಅಂದುಕೊಂಡಂತೆ ಆಗುತ್ತಿಲ್ಲ. ಇದಕ್ಕೆ ಕಳಕಾಪುರ ಗ್ರಾಮ ಉತ್ತಮ ನಿದರ್ಶನ. ಕಳಕಾಪುರ ಗ್ರಾಮ ಅಭಿವೃದ್ಧಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಸ್ಥಳೀಯ ಜನಪ್ರತಿನಿಧಿ ಗಳು ಹಾಗೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎನ್ನುತ್ತಾರೆ ನಿವಾಸಿಗಳು.

Advertisement

ಕಳಕಾಪುರ ಗ್ರಾಮ ಹೊಸಳ್ಳಿ ಗ್ರಾಪಂ ವ್ಯಾಪ್ತಿಗೊಳಪಡುತ್ತಿದ್ದು, ಮೂರು ಸಾವಿರ ಜನಸಂಖ್ಯೆ ಹೊಂದಿದೆ. ಸುಮಾರು 400 ಮನೆ ಇವೆ. ಗ್ರಾಮದಲ್ಲಿ ಬಸ್‌ ನಿಲ್ದಾಣವಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹದಗೆಟ್ಟಿವೆ. ಸಾಮೂಹಿಕ ಶೌಚಾಲಯ ದುರಸ್ತಿಯಲ್ಲಿವೆ. ಒಂದೇ ಅಂಗನವಾಡಿ ಇದೆ. ಒಂದು ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳಾಗಿದೆ. ಕುಡಿಯುವ ನೀರು ಪೂರೈಸುವ ಪೈಪ್‌ ಲೈನ್‌ ದುರಸ್ತಿಯಲ್ಲಿರುವುದರಿಂದ ಮನೆಗಳ ಒಳಗೆ ನೀರು ಸಂಗ್ರಹವಾಗುತ್ತಿದೆ. ಇಂತಹ ಹಲವು ಸಮಸ್ಯೆಗಳಿಂದ ನರಳುತ್ತಿದೆ ಕಳಕಾಪುರ ಗ್ರಾಮ.

ಎಚ್ಚೆತ್ತುಕೊಳ್ಳದ ಆಡಳಿತ ವರ್ಗ: ಹೊಸಳ್ಳಿ ಗ್ರಾಪಂಗೆ ಕಳಕಾಪುರ ಗ್ರಾಮದ ಅಧ್ಯಕ್ಷರಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿಯೊಂದು ಚರಂಡಿಗಳು ಕೊಳಚೆ ಹಾಗೂ ತ್ಯಾಜ್ಯದಿಂದ ತುಂಬಿ ಹರಿಯುತ್ತಿವೆ. ಇದರಿಂದ ಜನ ಸಾಂಕ್ರಾಮಿಕ ರೋಗದ ಭಯದಲ್ಲಿದ್ದು, ವಾರದ ಹಿಂದೆ ಒಬ್ಬ ಬಾಲಕ ಡೆಂಘೀ ಜ್ವರದಿಂದ ಮೃತಪಟ್ಟಿದ್ದಾನೆ.ಇಷ್ಟಾದರೂ ಆಡಳಿತ ವರ್ಗ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ. ಕೆಲವೊಂದು ಓಣಿಗಳಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ಉತ್ತಮ ರಸ್ತೆ ಇಲ್ಲ. ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳಕೊರತೆಯಿಂದ ಗ್ರಾಮ ಅಸ್ವತ್ಛತೆಯ ಆಗರವಾಗಿದೆ.

ಚುನಾವಣೆಗೆ ಬಂದಾಗ ಮಾತ್ರ ನೆನಪು: ವಿಧಾನಸಭೆ, ಲೋಕಸಭೆ, ಜಿಪಂ-ತಾಪಂ- ಗ್ರಾಪಂ ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿ ಗಳು ಮನೆ ಮನೆಗೆ ಬರುತ್ತಾರೆ. ಚುನಾವಣೆ ಮುಗಿದ ಬಳಿಕ ಮತ್ತೆ ಗ್ರಾಮಕ್ಕೆ ಸುಳಿಯುವುದಿಲ್ಲ ಎನ್ನುವುದು ಜನರ ಆರೋಪ.

ಎರಡೇ ಗ್ರಾಮ ಸಭೆ: ಈಗಿನ ಗ್ರಾಪಂ ಅಧಿ ಕಾರವಧಿ ಮುಗಿಯುವ ಹಂತ ತಲುಪಿದರೂ ಕೇವಲ ಎರಡು ಗ್ರಾಮ ಸಭೆಗಳು ಜರುಗಿವೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಗ್ರಾಮಸಭೆಗಳು ಇಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಕಳೆದ ನಾಲ್ಕೂವರೆ ವರ್ಷದಲ್ಲಿ ಎರಡು ಸಭೆ ಮಾಡಿ ಕೈತೊಳೆದುಕೊಂಡಿದೆ ಇಲ್ಲಿನ ಆಡಳಿತ ವ್ಯವಸ್ಥೆ.

Advertisement

ಸೇತುವೆ ನಿರ್ಮಾಣ: ಗ್ರಾಮದಿಂದ ಸೂಡಿಗೆ ಹೋಗುವ ಮಾರ್ಗದಲ್ಲಿ ಬರುವ ಸೇತುವೆ ಸಂಪೂರ್ಣ ಕೆಟ್ಟಿದ್ದರೂ ಹಿಡಿ ಮಣ್ಣು ಹಾಕಿಲ್ಲ. ನಿತ್ಯ ಇಲ್ಲಿ ಸಂಚರಿಸುವ ಜನ-ರೈತರು ಈ ಹದಗೆಟ್ಟ ಸೇತುವೆ ಮೂಲಕವೇ ಸಂಚರಿಸುತ್ತಿದ್ದಾರೆ. ಸೇತುವೆ ಹದಗೆಟ್ಟಿದ್ದರಿಂದ ರೈತರೇ ಮಣ್ಣು ಹಾಕಿಕೊಂಡು ಸಂಚರಿಸುತ್ತಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿ.

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next