Advertisement

ಶಾಸಕರ ಪತ್ರಗಳಿಂದ ಅಭಿವೃದ್ಧಿಗೆ ತೊಡಕು

04:39 PM Jul 13, 2022 | Team Udayavani |

ನೆಲಮಂಗಲ: ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸ್‌ ಮೂರ್ತಿ ಪತ್ರಗಳು ಒಂದು ಗ್ರಾಮದ ಮೂಲಭೂತ ಸೌಕರ್ಯ ಮರೀಚಿಕೆಯನ್ನಾಗಿಸಿರುವ ಆರೋಪಗಳು ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಕೇಳಿ ಬಂದಿವೆ.

Advertisement

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಕೂಗಳತೆ ದೂರದಲ್ಲಿರುವ ಗೋವಿಂದಪುರದಲ್ಲಿಅತೀ ಹೆಚ್ಚಾಗಿ ಮುಸ್ಲಿಂ ಸಮುದಾಯವೇ ಹೆಚ್ಚಾಗಿದ್ದು, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಮರೀಚಿಕೆಯಾಗಿದ್ದು, ಗೋವಿಂದಪುರ ಗ್ರಾಮಅಕ್ಷರಶಃ ಕುಗ್ರಾಮದಂತೆ ಮಾರ್ಪಾಟಾಗಿದೆ. ಗ್ರಾಮದ ಮಹಿಳೆಯರು ಮಕ್ಕಳು ಸಮಸ್ಯೆಗಳ ಸುಳಿಯಲ್ಲಿನಲುಗುವಂತಾಗಿದ್ದು, ಕ್ಷೇತ್ರದ ಶಾಸಕರ ಪತ್ರವ್ಯವಹಾರದಿಂದ ಗ್ರಾಮಾಭಿವೃದ್ಧಿ ಮರೀಚಿಕೆಯಾಗಿಉಳಿದುಕೊಂಡಿದ್ದು, ಗ್ರಾಮ ಸ್ವರಾಜ್ಯದ ಕನಸುಕಂಡಿದ್ದ ಮಾಜಿ ಪ್ರಧಾನಿ ದೇವೆಗೌಡರ ಕನಸಿಗೆ ಸ್ವಪಕ್ಷದಶಾಸಕರೇ ನುಚ್ಚು ನೂರು ಮಾಡಿರುವಂತಾಗಿದೆ.

ಏನಿದು ಪತ್ರಗಳು: ತಾಲೂಕಿನ ಅತೀ ಹಿಂದುಳಿದ ಪಂಚಾಯಿತಿಯಾದ ಅರೇಬೊಮ್ಮನಹಳ್ಳಿ ಗ್ರಾಪಂವ್ಯಾಪ್ತಿಯ ಗೋವಿಂದಪುರ ಗ್ರಾಮ ಅತಿ ಹೆಚ್ಚು ಮುಸ್ಲಿಂ ಕುಟುಂಬಗಳಿರುವ ಗ್ರಾಮವಾಗಿದ್ದು,ಸುಮಾರು 150 ಮನೆಗಳಲ್ಲಿ 800 ಆಸುಪಾಸಿನ ಜನಸಂಖ್ಯೆಯಿದೆ. ಸಾಕಷ್ಟು  ಹಿಂದುಳಿದ ಗ್ರಾಮವಾಗಿರುವ ಕಾರಣಕ್ಕೆ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ30 ಲಕ್ಷ ರೂ.ಗಳನ್ನು ಗ್ರಾಮದ ಅಭಿವೃದ್ಧಿಗಾಗಿ ಅಂದಿನ ಆಡಳಿತ ಮಂಡಳಿ ಮಂಜೂರು ಮಾಡಿತ್ತು.

ಅನುದಾನ ಬೇರೆಡೆಗೆ ವಿನಿಯೋಗ: ಸಾಲದು ಎಂಬಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಗೋವಿಂದಪುರ ಗ್ರಾಮಕ್ಕೆ 15ಲಕ್ಷ ರೂ. ಅನುದಾನವನ್ನುಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಜೂರುಮಾಡಲಾಗಿತ್ತು. ಆದರೆ, ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಅವರು ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅನುದಾನದಲ್ಲಿ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನೆ.ಯೋ. ಪ್ರಾಧಿಕಾರದ ಅನುದಾನದಲ್ಲಿ ಗೋವಿಂದಪುರ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಪತ್ರ ಬರೆದು ಎರೆಡೂ ಸಕ್ಷಮ ಪ್ರಾಧಿಕಾರಗಳಿಗೂ ಗೋವಿಂದ  ಪುರದಲ್ಲಿ ಅಭಿವೃದ್ಧಿ ಕಾಮಗಾರಿ ಬದಲಾವಣೆ ಮಾಡಿಕೊಡುವಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಅನುದಾನ ಸದ್ಬಳಕೆಯಾಗದೆ ಬೇರೆಡೆಗೆ ವಿನಿಯೋಗಿಸಲಾಗಿದೆ. ಇದರಿಂದ ಗ್ರಾಮಾಭಿವೃದ್ಧಿಯಾಗದೆ ಗ್ರಾಮಸ್ಥರು ಸಮಸ್ಯೆಗಳ ಸುಳಿಯಲ್ಲಿ ಹೈರಾಣಾಗಿದ್ದಾರೆ.

ಕ್ಷೇತ್ರದ ಜೆಡಿಎಸ್‌ ಶಾಸಕರು ಮುಸ್ಲಿಂ ವಿರೋಧಿಯಂತೆ ವರ್ತಿಸುತಿದ್ದಾರೆಂದು ಪಂಚಾಯಿತಿ ಮಾಜಿ ಸದಸ್ಯ ಸೈಯದ್‌ ಅಬ್ದುಲ್‌ ಆರೋಪಿಸಿದ್ದಾರೆ.

Advertisement

ಎಚ್ಚರಿಕೆಯ ಆಕ್ರೋಶ: ಗ್ರಾಮದಲ್ಲಿ ಮಂಗಳವಾರ ಸಮಾವೇಶಗೊಂಡ ಗ್ರಾಮಸ್ಥರು ಮತ್ತು ಮಹಿಳೆಯರು ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಅವರ ನಡೆಯನ್ನು ಖಂಡಿಸಿ ವಿರೋಧ ವ್ಯಕ್ತಪಡಿಸಿದ್ದು, ಕ್ಷೇತ್ರದ ಹಾಲಿ ಶಾಸಕರ ವಿರುದ್ಧ ಧಿಕ್ಕಾರವನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸಾಂಕ್ರಾಮಿಕದ ಭೀತಿ: ಗೋವಿಂದಪುರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸುಸ್ಥಿತಿಯಲಿಲ್ಲದ ಕಾರಣಕ್ಕೆ ಮನೆಗಳಿಂದ ಹರಿದು ಬರುವ ಚರಂಡಿ ನೀರು ನಿಂತಲ್ಲೆ ನಿಂತು ಸೊಳ್ಳೆಗಳ ಉಗಮಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದ ಗ್ರಾಮದಲ್ಲಿ ಪ್ರತಿನಿತ್ಯ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು ದಿನ

ಕಳೆಯುವಂತಾಗಿದೆ. ಇತ್ತೀಚೆಗೆ ಭೂಮಂಡಲವನ್ನೆ ನಲುಗಿಸಿದ ಕೋವಿಡ್‌ ಭೀತಿ ಒಂದೆಡೆಯಿದ್ದರೆ, ಕೊಳಚೆ ಪ್ರದೇಶದಂತಿರುವ ಗ್ರಾಮಕ್ಕೆ ಸೂಕ್ತ ಅನುಕೂಲತೆಗಳಿಲ್ಲದೆ ಜನರು ಭೀತಿಯಲ್ಲಿ ಬದುಕುವಂತಾಗಿದೆ.

ಸಕ್ಷಮ ಪ್ರಾಧಿಕಾರಗಳ ದಿಕ್ಕು ತಪ್ಪಿಸಿ ಅನುದಾನ ಬೇರೆಡೆಗೆ ವರ್ಗಾಯಿಸಿದ ಶಾಸಕರು, ಮತ್ತೆ ಅರೇಬೊಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಗೋವಿಂದಪುರ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಮೂಲಕ ಗ್ರಾಮ ಸ್ಥರನ್ನು ಸಂತೈಸಿ ಮಾಜಿ ಪ್ರಧಾನಿ ದೇವೇಗೌಡರ ಕನಸನ್ನು ನನಸು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಗ್ರಾಮಕ್ಕೆ ಅನ್ಯಾಯ: ಆರೋಪ:  ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕಾದ ಕ್ಷೇತ್ರದ ಶಾಸಕರು ಮತ್ತು ಅರೆಬೊಮ್ಮನಹಳ್ಳಿ ಗ್ರಾಪಂ ಮಾಜಿಅಧ್ಯಕ್ಷರು ನಮ್ಮ ಗ್ರಾಮದ ಅಭಿವೃದ್ಧಿಗೆ ಬಂದಿದ್ದ ಹಣ ಬೇರೆಡೆಯಿರುವ ಗ್ರಾಮಕ್ಕೆ ವರ್ಗಾಯಿಸಿ ನಮ್ಮ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ. ಗ್ರಾಮದ ಸಮಸ್ಯೆಗಳಿಂದ ಗ್ರಾಮದಲ್ಲಿರುವ ಯುವಕ-ಯುವತಿಯರಿಗೆ ಮದುವೆಯ ಯೋಗವೂ ಕೂಡಿ ಬರುತ್ತಿಲ್ಲ. ಬೇರೆ ಗ್ರಾಮಗಳಿಂದ ಸಂಬಂಧ ಹುಡುಕಿಕೊಂಡು ಬಂದಿದ್ದಂತಹ ಸಂಬಂಧಿಕರು ಗೋವಿಂದಪುರಗ್ರಾಮ ಕೊಳಚೆ ಪ್ರದೇಶವಿದ್ದಂತೆಯಿದೆ ಎಂದು ಹೀಯಾಳಿಸಿ, ಹೆಣ್ಣು-ಗಂಡು ಕೊಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಹಿರಿಯ ಮಹಿಳೆ ನೂರ್‌ಜಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next