Advertisement

ದಲಿತರ ಕುಂದು ಕೊರತೆ- ಮಾಸಿಕ ಸಭೆ 

09:56 AM Nov 27, 2017 | |

ಪಾಂಡೇಶ್ವರ: ಕೂಳೂರು- ಕಾವೂರು ರಸ್ತೆಯ ಶಾಂತಿನಗರದಲ್ಲಿ ಕಳೆದ ಅಕ್ಟೋಬರ್‌ 19ರಂದು ರಾತ್ರಿ ರಸ್ತೆ ಬದಿಯ ಮಣ್ಣಿನ ರಾಶಿಗೆ ಸ್ಕೂಟರ್‌ ಢಿಕ್ಕಿ ಹೊಡೆದು ಸವಾರ ಕುಂಜತ್ತಬೈಲ್‌ ದೇವಿನಗರದ ಪ್ರಕಾಶ್‌ (20) ಸಾವನ್ನಪ್ಪಿದ ಘಟನೆ ರವಿವಾರ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿ ಸಭಾಂಗಣದಲ್ಲಿ ನಡೆದ ದಲಿತರ ಕುಂದು ಕೊರತೆಯ ಮಾಸಿಕ ಸಭೆಯಲ್ಲಿ ಪ್ರಸ್ತಾವವಾಯಿತು. ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರಗಿಸಲು ಆಗ್ರಹಿಸಲಾಯಿತು.

Advertisement

ನೀರಿನ ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆದು ಮಣ್ಣನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಯಾವುದೇ ಸೂಚನ ಫಲಕ ಹಾಕದಿರುವುದು ಅಪಘಾತಕ್ಕೆ ಕಾರಣ. ಕಾಮಗಾರಿಯನ್ನು ಕೈಗೆತ್ತಿಗೊಂಡಿರುವ ಗುತ್ತಿಗೆದಾರರು ಮತ್ತು ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಇಲ್ಲಿ ಎದ್ದು ತೋರುತ್ತದೆ. ಅಪಘಾತ ಸಂಭವಿಸಿ ತಿಂಗಳು ಕಳೆದರೂ ಮಣ್ಣಿನ ರಾಶಿ ಮತ್ತು ಗುಂಡಿ ಹಾಗೆಯೇ ಇದೆ ಎಂದು ವಿಷಯವನ್ನು ಪ್ರಸ್ತಾವಿಸಿದ ದಲಿತ ನಾಯಕ ಆನಂದ ಎಸ್‌.ಪಿ. ಆರೋಪಿಸಿ, ಈ ಗುತ್ತಿಗೆದಾರರನ್ನು ಬಂಧಿಸಬೇಕು ಹಾಗೂ ಅವರನ್ನು ಕಪ್ಪುಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು. ಈ ಕುರಿತು ಮನವಿಯೊಂದನ್ನು ಅಧ್ಯಕ್ಷತೆ ವಹಿಸಿದ್ದ ಡಿಸಿಪಿ ಉಮಾ ಪ್ರಶಾಂತ್‌ ಅವರಿಗೆ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಡಿಸಿಪಿ, ರಸ್ತೆ, ಚರಂಡಿ, ಪೈಪ್‌ಲೈನ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸೂಕ್ತ ಸುರಕ್ಷಾ ಫಲಕಗಳನ್ನು ಹಾಕುವ ಬಗ್ಗೆ ಪಾಲಿಕೆಗೆ ಸೂಚಿಲಾಗುವುದು ಎಂದು ತಿಳಿಸಿದರು. ಮೃತ ಪ್ರಕಾಶ್‌ ಅವರ ತಾಯಿ ಜ್ಯೋತಿ ಮತ್ತು ಸೋದರ ಸತೀಶ್‌ ಅವರೂ ಉಪಸ್ಥಿತರಿದ್ದರು.

ಪೊಲೀಸ್‌ ಠಾಣೆಗಳಲ್ಲಿ ಜನ ಸಂಪರ್ಕ ಸಭೆಗಳು ಸಮರ್ಪಕವಾಗಿ ನಡೆಯುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಸಭೆಗಳನ್ನು ಸಕಾಲಿಕವಾಗಿ ನಡೆಸುವಂತೆ ಡಿಸಿಪಿ ಸೂಚಿಸಿದರು.

ಇತರ ಸಮಸ್ಯೆ
ಲೈಸನ್ಸ್‌ ಇಲ್ಲದೆ ವಾಹನ ಚಲಾಯಿಸುವುದು, ಮಸಾಜ್‌ ಸೆಂಟರ್‌ಗಳಲ್ಲಿ ಅವ್ಯವಹಾರ, ಮೀನಿನ ಲಾರಿಗಳು ರಸ್ತೆಯಲ್ಲಿ ನೀರು ಚೆಲ್ಲುತ್ತಾ ಸಂಚರಿಸುತ್ತಿರುವುದು, ಖಾಸಗಿ ಬಸ್ಸುಗಳು ಬೇಕಾಬಿಟ್ಟಿ ಸಂಚಾರ ನಡೆಸುತ್ತಿರುವ ಬಗ್ಗೆ, ಸ್ಕಿಲ್‌ ಗೇಮ್‌ ಬಗ್ಗೆ ದೂರು ಕೇಳಿ ಬಂತು. 2014ರಲ್ಲಿ ಮಹಿಳೆಯೊಬ್ಬರಿಗೆ ನೆರವು ಒದಗಿಸಿದ ಕಾರಣ ಅದನ್ನು ಸಹಿಸಲಾಗದವರು ತನ್ನ ಮೇಲೆ 7 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ದಲಿತ ಮಹಿಳೆ ಪಾರ್ವತಿ ಅವರು ತಮ್ಮ ಅಹವಾಲು ತೋಡಿಕೊಂಡರು.

Advertisement

ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಾರೆ. ಒಂದೊಮ್ಮೆ ಪೊಲೀಸ್‌ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದರೆ ಮೇಲಧಿಕಾರಿಗಳಿಗೆ ದೂರು ಕೊಡಬಹುದು. ಯಾವುದೇ ಪ್ರಕರಣದಲ್ಲಿ ಬಿ ರಿಪೋರ್ಟ್‌ ಹಾಕಲು ಠಾಣಾ ಮಟ್ಟದಲ್ಲಿ ಸಾಧ್ಯವಿಲ್ಲ. ಮೇಲಧಿಕಾರಿಗಳಿಂದಲೇ ತೀರ್ಮಾನ ಆಗಬೇಕಾಗಿದೆ ಎಂದು ಡಿಸಿಪಿ ಉಮಾ ಪ್ರಶಾಂತ್‌ ತಿಳಿಸಿದರು. ಎಸಿಪಿಗಳಾದ ಉದಯ ನಾಯಕ್‌ ಮತ್ತು ಮಂಜುನಾಥ ಶೆಟ್ಟಿ, ರಾಜೇಂದ್ರ ಡಿ.ಎಸ್‌.ಉಪಸ್ಥಿತರಿದ್ದರು.

ಹೀಗಾಗಬಾರದು
ಪ್ರಕಾಶ್‌ ನಗರದ ವಿ.ವಿ. ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ನೃತ್ಯ ಕಲಾವಿದನಾಗಿದ್ದ. ಅ. 19ರಂದು ಸುರತ್ಕಲ್‌ನಲ್ಲಿ ಡ್ಯಾನ್ಸ್‌ ತರಬೇತಿ ಮುಗಿಸಿ ರಾತ್ರಿ 10. 30 ವೇಳೆಗೆ ಮನೆಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಜೆಯ ದಿನಗಳಲ್ಲಿ ಕೆಟರಿಂಗ್‌ ಕೆಲಸಕ್ಕೆ ಹೋಗುತ್ತಿದ್ದು, ಕುಟುಂಬಕ್ಕೆ ಆದಾಯವನ್ನೂ ತಂದು ಕೊಡುತ್ತಿದ್ದ. ಆದಾಯವಿಲ್ಲದೆ ಪ್ರಕಾಶ್‌ ಸಹೋದರ ಸತೀಶನ (ಡಿಪ್ಲೊಮಾ ಓದುತ್ತಿದ್ದಾನೆ) ವಿದ್ಯಾಭ್ಯಾಸಕ್ಕೂ ಅಡ್ಡಿಯಾಗಿದೆ ಎಂದು ತಾಯಿ ಜ್ಯೋತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next