Advertisement

ಸಮನ್ವಯ ಕೊರತೆ

01:27 PM Aug 04, 2019 | Suhan S |

ವಿಜಯಪುರ: ವಿಶ್ವದ ಗಮನ ಪಾರಂಪರಿಕ ತಾಣಗಳಲ್ಲಿ ಅಧಿಕೃತ ಮಾನ್ಯತೆ ಪಡೆಯದಿದ್ದರೂ ವಿಜಯಪುರ ಜಿಲ್ಲೆ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ಸ್ಮಾರಕಗಳಿಂದ ದೇಶ-ವಿದೇಶಿ ಪ್ರವಾಸಿ ಪ್ರಿಯರ ಗಮನ ಸೆಳೆದಿದೆ. ಆದರೆ ಪ್ರವಾಸಿಗರಿಗೆ ತಕ್ಕ ಅನುಕೂಲ ಕಲ್ಪಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಪುರಾತತ್ವ-ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆ ಅನುದಾನ ಇದ್ದರೂ ಅಭಿವೃದ್ಧಿ ಹೀನತೆಯಿಂದ ಬಳಲುವಂತೆ ಮಾಡಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಪಿಸುಗುಟ್ಟುವ ಅಪರೂಪದ ಗೋಲಗುಮ್ಮಟ ಮಾತ್ರವಲ್ಲ ಇಬ್ರಾಹಿಂ ರೋಜಾ, ಬಾರಾಕಮಾನ್‌, ಉಪ್ಲಿ ಬುರುಜ್‌, ಜೋಡಗುಮ್ಮಟ ಹೀಗೆ ಐತಿಹಾಸಿಕ ಹಿರಿಮೆ ಸಾರುವ ನೂರಾರು ಸ್ಮಾರಕಗಳು ಐತಿಹಾಸಿಕ ಚಿತ್ರಣವನ್ನು ಕಣ್ಣಿಗೆ ಕಟ್ಟಿಸುತ್ತಿವೆ. ಇಂಥ ವಿಶ್ವಖ್ಯಾತಿಯ ಸ್ಮಾರಕ ವೀಕ್ಷಣೆಗೆ ನಿತ್ಯವೂ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಆದಿಲ್ ಶಾಹಿ ಅರಸರ ಸಾಮ್ರಾಜ್ಯದ ರಾಜಧಾನಿ ವಿಜಯಪುರಕ್ಕೆ ಬರುತ್ತಾರೆ.

ಆದರೆ ವಿಜಯಪುರ ಜಿಲ್ಲೆಯಲ್ಲಿ ವಿಶ್ವವೇ ಬೆರಗಾಗುವಂಥ ಸ್ಮಾರಕಗಳಿದ್ದರೂ ಪ್ರವಾಸಿಗರಿಗೆ ಆಗತ್ಯ ಹಾಗೂ ಮೂಲಭೂತ ಸೌಲಭ್ಯಗಳಿಲ್ಲ. ಮೂಲಭೂತ ಸೌಲಭ್ಯ ಮಾತು ಹಾಗಿರಲಿ, ಕನಿಷ್ಠ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಇರುವ ಸ್ಥಳಗಳು ಯಾವುದು, ಅವುಗಳ ವೈಶಿಷ್ಟ್ಯವೇನು ಎಂಬುದನ್ನು ಹೇಳಲು ಕನಿಷ್ಠ ಒಂದೇ ಒಂದು ಮಾಹಿತಿ ಕೇಂದ್ರ ಇಲ್ಲ. ಪ್ರವಾಸಿಗರು ಬಂದರೆ ವಿಜಯಪುರ ಜಿಲ್ಲೆಯಲ್ಲಿ ಏನಿದೆ ಎಂದು ಹೇಳುವುದಕ್ಕೇ ಯಾರೂ ಗತಿ ಇಲ್ಲ ಎನ್ನುವುದೇ ಗುಮ್ಮಟ ನಗರಿಯ ಪ್ರವಾಸೋದ್ಯಮ ಇಲಾಖೆ ದುಸ್ಥಿತಿ ಬಿಚ್ಚಿಡುತ್ತದೆ.

ಆದರೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇದನ್ನು ಅಲ್ಲಗಳೆಯುತ್ತದೆ. ರಾಜ್ಯ ಸರ್ಕಾರ ವಿಜಯಪುರ ಪ್ರವಾಸೋದ್ಯಮಕ್ಕೆ ಆಗತ್ಯ ಇರುವ ಯೋಜನೆ ರೂಪಿಸಿ, ಕೋಟಿ ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ ಐತಿಹಾಸಿಕ ಸ್ಮಾರಕಗಳ ಬಳಿ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಲು ಪುರಾತತ್ವ ಇಲಾಖೆ ಸಹಕಾರ ನೀಡುತ್ತಿಲ್ಲ. ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪರವಾನಗಿ ನೆಪದಲ್ಲಿ ತಕಾರು ಮಾಡುತ್ತದೆ. ಪುರಾತತ್ವ ಇಲಾಖೆಯ ಧಾರವಾಡ ವಲಯ ಕಚೇರಿಗೆ ಪತ್ರ ಬರೆದರೂ ದೆಹಲಿಯಲ್ಲಿರುವ ಕೇಂದ್ರ ಕಚೇರಿಯ ಪ್ರಧಾನ ನಿರ್ದೇಶಕರ ಪರವಾನಗಿ ಬೇಕು ಎಂಬ ನೆಪ ಮುಂದಿಡುವ ಮೂಲಕ ಅಭಿವೃದ್ಧಿಗೆ ತೊಡಕಾಗಿದ್ದಾರೆ ಎಂದು ರಾಜ್ಯದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ರಾಜ್ಯ ಸರ್ಕಾರ 2016-17ರಲ್ಲಿ ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ಸ್ಮಾರಕ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಜಯಪುರ ಜಿಲ್ಲೆಗೆ 10 ಕೋಟಿ ರೂ. ಅನುದಾನ ನೀಡಿತ್ತು. ಈ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಕ್ರಿಯಾಯೋಜನೆ ಸಹಿತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪುರಾತತ್ವ ಇಲಾಖೆ ಯಾವುದಕ್ಕೂ ಅವಕಾಶ ನೀಡಲಿಲ್ಲ. ಬಾರಾಕಮಾನ್‌ ಸ್ಮಾರಕ ಪ್ರದೇಶದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ನಮ್ಮ ಇಲಾಖೆಯಿಂದ ನಿರ್ಮಿಸಿರುವ ಶೌಚಾಲಯ ಪ್ರದೇಶಕ್ಕೆ ಹೋಗಲು ಕೇವಲ ನೂರಾರು ಅಡಿ ರಸ್ತೆ ನಿರ್ಮಿಸುವಂಥ ಸಣ್ಣ ಸೌಲಭ್ಯಕ್ಕೂ ತಕರಾರು ಮಾಡಿದೆ. ಪರಿಣಾಮ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗೆ ತೊಡಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

Advertisement

ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಈ ಆರೋಪವನ್ನು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಒಪ್ಪುವುದಿಲ್ಲ. ಪ್ರತಿಯೊಂದಕ್ಕೂ ಕಾನೂನು, ನೀತಿ-ನಿಯಮ ಅಂತೆಲ್ಲ ಇದ್ದೇ ಇದೆ. ಐತಿಹಾಸಿಕ ಸ್ಮಾರಕ ಪ್ರದೇಶದಲ್ಲಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ನಿಯಮದ ಪ್ರಕಾರ ದೆಹಲಿಯಲ್ಲಿರುವ ನಮ್ಮ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ, ಪರವಾನಿಗೆ ಪಡೆಯಬೇಕು.

ದೇಶದ ಎಲ್ಲ ರಾಜ್ಯಗಳಲ್ಲಿ ಪುರಾತತ್ವ ನಿಯಮಗಳ ಪ್ರಕಾರ ಪ್ರಸ್ತಾವನೆ ಸಲ್ಲಿಸಿ, ನೀತಿಗಳ ಆನುಸಾರ ಅನುಮತಿ ಪಡೆದು ಅಭಿವೃದ್ಧಿ ಮಾಡುತ್ತಿದ್ದಾರೆ. ನಮ್ಮದು ತಕರಾರು ಅಲ್ಲ, ಕೋರಿಕೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತಿಲ್ಲ. ವಿಜಯಪುರ ಜಿಲ್ಲೆಯ ಮಟ್ಟಿಗೆ ನಿಯಮ ಪಾಲಿಸದೇ ನಮ್ಮ ಕಡೆಗೆ ಅಭಿವೃದ್ಧಿಗೆ ಹಿನ್ನಡೆ ಎಂದು ದೂರಲಾಗುತ್ತದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಕೇಂದ್ರ ಸರ್ಕಾರ ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯದ ದೊಡ್ಡ ಕಂದಕವೇ ಇದೆ. ಪರಸ್ಪರ ಇಲಾಖೆಯ ನೀತಿ-ನಿಮಯ ಅಂದೆಲ್ಲ ಆರೋಪ-ಪ್ರತ್ಯಾರೋಪದಲ್ಲೇ ಮುಳುಗಿದ್ದಾರೆ. ಈ ಎರಡೂ ಸರ್ಕಾರಗಳ ಎರಡು ಇಲಾಖೆಗಳ ಮಧ್ಯೆ ಇರುವ ಸಮನ್ವಯ ಕೊರತೆ ನೀಗಲು ಜಿಲ್ಲೆಯ ಆಡಳಿತಗಾರರು ಗಮನ ಹರಿಸಬೇಕಿದೆ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ, ಆಡಳಿತ ವ್ಯವಸ್ಥೆಯ ಕರ್ತವ್ಯ ಬದ್ಧತೆ ತೋರಬೇಕಿದೆ. ಸ್ಥಳೀಯರ ನಿರೀಕ್ಷೆ, ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸಲಿ ಇನ್ನಾದರೂ ಉಭಯ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ತೋರಬೇಕಿದೆ.

ಭಾರತೀಯ ಪುರಾತತ್ವ ಇಲಾಖೆ ನಿಯಮದಂತೆ ಕೇಂದ್ರ ಕಚೇರಿಯಿಂದ ಪರವಾನಿಗೆ ಪಡೆದು ಹಲವು ಇಲಾಖೆಗಳು ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ಪ್ರವಾಸೋದ್ಯಮ ಇಲಾಖೆ ಮಾತ್ರ ನಮ್ಮನ್ನು ತಕರಾರು ಇಲಾಖೆ ಎಂಬಂತೆ ಬಿಂಬಿಸುತ್ತಿರುವುದು ಏಕೆಂದು ಗೊತ್ತಿಲ್ಲ. ಸ್ಥಳೀವಾಗಿ ನಮ್ಮ ಇಲಾಖೆ ನಿಯಮ ಪಾಲನೆ ಮಾಡುವುದು ನಮ್ಮ ಕರ್ತವ್ಯ, ಅದನ್ನು ಮಾಡುತ್ತಿದ್ದೇವೆ. ಇದರ ಹೊರತಾಗಿ ಯಾವುದೇ ಆರೋಪಗಳಿಗೆ ಉತ್ತರಿಸಲಾರೆ.•ಮೌನೇಶ ಕುರವತ್ತಿ ಸಹಾಯಕ ಸಂರಕ್ಷಣಾಧಿಕಾರಿ ಭಾರತೀಯ ಪುರಾತತ್ವ ಇಲಾಖೆ ಗೋಲಗುಮ್ಮಟ-ವಿಜಯಪುರ

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕನಾಗಿ ಎರಡು ದಿನಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಹಿಂದಿನ ಅಧಿಕಾರಿಗಳು ಏನು ಮಾಡಿದ್ದಾರೆ, ಇಲಾಖೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಮಾಹಿತಿ ಪಡೆಯುತ್ತೇನೆ. ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮದಂತೆ ಪರವಾನಿಗೆ ಪಡೆದು ಆಭಿವೃದ್ಧಿಗೆ ಮುಂದಾಗುತ್ತೇನೆ.•ಸೋಮಲಿಂಗ ಗೆಣ್ಣೂರ ಉಪ ನಿರ್ದೇಶಕರು (ಪ್ರಭಾರ) ಪ್ರವಾಸೋದ್ಯಮ ಇಲಾಖೆ ವಿಜಯಪುರ

 

•ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next