ಬೀದರ: “ಮೈತ್ರಿ ಪಕ್ಷಗಳಲ್ಲಿ ಸಮನ್ವಯ ಕೊರತೆ ಇದ್ದು, ಸರ್ಕಾರ ಯಾರ ಕೈಯಲ್ಲಿದೆ ಎಂಬ ಬಗ್ಗೆ ಗೊಂದಲಗಳಿವೆ’ ಎಂದು ನಿವೃತ್ತ ಸಿಎಸ್ ಕೆ.ರತ್ನಪ್ರಭಾ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ಯಾವುದೇ ವಿಷಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರಿಲ್ಲ. ಈ ಹಿಂದೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಖುದ್ದು, ಮುಖ್ಯಮಂತ್ರಿ ನನ್ನ ಮಾತು ಕೇಳುತ್ತಿಲ್ಲ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ. ಮುಖ್ಯಮಂತ್ರಿಗಳು ಮಾತು ಮಾತಿಗೂ ತಮ್ಮ ತಂದೆ ದೇವೇಗೌಡ ಅವರೊಂದಿಗೆ ಚರ್ಚೆ ಮಾಡಬೇಕು ಎಂದು ಹೇಳುತ್ತಾರೆ. ಡಾ| ಜಿ.ಪರಮೇಶ್ವರ್ ಅವರು ಕೂಡ ಮೈತ್ರಿ ಸರ್ಕಾರದಲ್ಲಿ ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಮೈತ್ರಿ ಸರ್ಕಾರವನ್ನು ನಿಜವಾಗಿಯೂ ಯಾರು ನಡೆಸುತ್ತಿದ್ದಾರೆ. ಇಷ್ಟೊಂದು
ಗೊಂದಲಗಳಿರುವ ಸರ್ಕಾರ ಉತ್ತಮ ಆಡಳಿತ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಯಾವ ಸರ್ಕಾರ ಉತ್ತಮ ಆಡಳಿತ ಹಾಗೂ ಗೌರವ ನೀಡುತ್ತದೋ ಆ ಪಕ್ಷವನ್ನು ಬೆಂಬಲಿಸುವ ಉದ್ದೇಶದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನನಗೆ ಅನ್ಯಾಯವಾಗಿದ್ದು, 2016ರಲ್ಲೇ ನನಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ನೀಡಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಅಧಿಕಾರ ನೀಡಿಲ್ಲ. ಅಹಿಂದ ಪರ ಎಂದು ಹೇಳುವ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಕೆಲಸ ಮಾಡದ ಅಧಿ ಕಾರಿಯನ್ನು ಕರೆತಂದು ಆ ಹುದ್ದೆಗೆ ಕೂರಿಸಿ ಹಿಂದುಳಿದ ಮಹಿಳೆಗೆ ಅನ್ಯಾಯ ಮಾಡಿದರು. ಆ ಸಮಯದಲ್ಲಿ ನಾನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದೆ. ಅವರು ಕೂಡ ಸರ್ಕಾರದಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎಂದು ಕೈ ಚೆಲ್ಲಿದರು ಎಂದರು.