ಸುಳ್ಯ: ತರಕಾರಿ, ಹಣ್ಣು- ಹಂಪಲು, ದಿನಸಿ ವಸ್ತುಗಳನ್ನು ಸಂತೆಯಲ್ಲೇ ಖರೀದಿ ಸುವ ಕಾಲವೊಂದಿತ್ತು. ಆರ್ಥಿಕ ಸ್ಥಿತ್ಯಂತರದ ಪರಿಸ್ಥಿತಿಯಲ್ಲಿ ಗ್ರಾಹಕರ ಜೀವನ ಪದ್ಧತಿ ಬದಲಾಗಿದೆ. ಸಂತೆಯಲ್ಲಿ ಸಿಗುವ ವಸ್ತುಗಳನ್ನು ಮಾಲ್‌ಗಳಲ್ಲಿ ಖರೀದಿಸುವ ಅಭ್ಯಾಸ ವಾಗಿದೆ. ಗ್ರಾಹಕರ ಕೊರತೆಯಿಂದ ಸಂತೆಗಳು ಜನಾಕರ್ಷಣೆ ಕಳೆದುಕೊಳ್ಳುತ್ತಿವೆ.
ವಾರಕ್ಕೆ ಸಾಲುವಷ್ಟು ತರಕಾರಿ, ದಿನಸಿಯನ್ನು ಸಂತೆಯಿಂದ ಖರೀದಿಸುವ ಪದ್ಧತಿ ಇತ್ತು. ಕೂಡು ಕುಟುಂಬಗಳಿದ್ದ ಕಾರಣ ವಸ್ತುಗಳು ಜಾಸ್ತಿ ಪ್ರಮಾಣದಲ್ಲಿ ಬೇಕಾಗುತ್ತಿದ್ದವು. ಆದರೆ, ಇತ್ತೀಚೆಗೆ ಸಂತೆಯ ಸರಕಿನ ಗುಣಮಟ್ಟದ ಕುರಿತು ಜನರಲ್ಲಿ ಹಗುರ ಭಾವನೆ ಬೇರೂರಿದ್ದು ಹಾಗೂ ಆಧುನಿಕ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿರುವುದೂ ಕಾರಣ. ಆರ್ಥಿಕ ಅಭಿವೃದ್ಧಿ ಜನರ ಜೀವನ ಶೈಲಿಯನ್ನು ಬದಲಿಸುತ್ತಿದೆ. ಮಾರಾಟ ಮತ್ತು ಖರೀದಿಯ ಆಧುನಿಕ ವ್ಯವಸ್ಥೆಗೆ ಜನ ವೇಗವಾಗಿ ಹೊಂದಿಕೊಳ್ಳುತ್ತಿದ್ದಾರೆ.
ಹೀಗಾಗಿ, ಜಿಲ್ಲೆಯ ಯಾವುದೇ ಊರಿನಲ್ಲಿ ನಡೆಯುವ ವಾರದ ಸಂತೆಯಲ್ಲಿ ಗ್ರಾಹಕರ ಕೊರತೆ ಕಂಡು ಬರುತ್ತಿದ್ದು, ವ್ಯವಹಾರವೂ ಕುಂಠಿತಗೊಳ್ಳುತ್ತಿದೆ. ವಾರದ ಸಂತೆಗಳಿಗೆ ಗ್ರಾಹಕರ ಕೊರತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚು. ಕೊಡಗು, ಹಾಸನ, ಚಿಕ್ಕಮಗಳೂರು, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ವಾರದ ಸಂತೆಗಳಲ್ಲಿ ಜನ ಜಂಗುಳಿ ತುಂಬಿರುತ್ತದೆ. ತರಕಾರಿ, ಹಣ್ಣು-ಹಂಪಲು, ಬಟ್ಟೆ, ನಿತ್ಯೋಪಯೋಗಿ ವಸ್ತುಗಳು, ಹೆಚ್ಚೇಕೆ ಜಾನುವಾರುಗಳು ಕೂಡ ಸಂತೆಯಲ್ಲಿ ಖರೀದಿ ಹಾಗೂ ಮಾರಾಟ ಆಗುತ್ತಿವೆ. ಅಲ್ಲಿನ ಎಪಿಎಂಸಿ ಗಳು ಪ್ರಮುಖ ಪ್ರದೇಶಗಳಲ್ಲಿ ಸಂತೆ ಮಾರುಕಟ್ಟೆಯನ್ನು ಕಟ್ಟಿಸಿ ಅನುಕೂಲ ಮಾಡಿಕೊಟ್ಟಿವೆ. ವಾರದ ಸಂತೆಗಳು ಅಲ್ಲೆಲ್ಲ ಮಿನಿ ಜಾತ್ರೆಯಂತೆ ನಡೆಯುತ್ತವೆ. ಸುತ್ತಲ ಹಳ್ಳಿಗ ಳಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಕೃಷಿಕರು ಸಂತೆಗೆ ಬರುತ್ತಾರೆ.
ದ.ಕ. ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಎಪಿಎಂಸಿ ವತಿಯಿಂದ ಸಂತೆ ಮಾರುಕಟ್ಟೆ ನಿರ್ಮಿಸಿಕೊಟ್ಟಿದ್ದರೆ ಬಹುತೇಕ ಕಡೆ ಸಂತೆ ಮಾರುಕಟ್ಟೆಗೆ ಸೂಕ್ತ ಸ್ಥಳವನ್ನೂ ಗುರುತಿಸಿಲ್ಲ. ಪುತ್ತೂರು ನಗರದಲ್ಲಿ ಸಂತೆ ಮಾರುಕಟ್ಟೆ ವಿಚಾರದಲ್ಲಿ ಗೊಂದಲವಿದೆ. ಸುಳ್ಯದ ಎಪಿಎಂಸಿ ಕಟ್ಟಡದಲ್ಲಿ ವಾರದ ಸಂತೆ ನಡೆಯುತ್ತದೆ. ಅದು ಮುಖ್ಯ ಪೇಟೆಯಿಂದ ದೂರದಲ್ಲಿ ಇರುವುದರಿಂದ ಅಲ್ಲಿಗೆ ಖರೀದಿಗೆ ತೆರಳುತ್ತಿಲ್ಲ. ಅಟೋ ರಿಕ್ಷಾ ಗೊತ್ತು ಮಾಡಿದರೆ 60 ರೂ. ನೀಡಬೇಕು. ಬಹುತೇಕ ಹಳ್ಳಿಗಳಲ್ಲಿ ಇನ್ನೂ ರಸ್ತೆ ಬದಿಯಲ್ಲೇ ಸಂತೆ ನಡೆಯುತ್ತಿದೆ. ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಲೇ ಇದೆ.
ಹೊಟೇಲ್‌ಗಳಿಗೂ ಮೊದಲು ಸಂತೆಯಿಂದಲೇ ತರಕಾರಿ ಪೂರೈಕೆ ಆಗುತ್ತಿತ್ತು. ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದರೆ ರಖಂ ಬೆಲೆಯಲ್ಲಿ ತರಕಾರಿ ಖರೀದಿಸುತ್ತಿದ್ದರು. ಈಗ ರಖಂ ವರ್ತಕರೇ ಘಟ್ಟದ ಮೇಲಿಂದ ತರಕಾರಿ ತಂದು ಹೊಟೇಲ್ ಗಳಿಗೆ ಸರಬರಾಜು ಮಾಡುತ್ತಾರೆ. ಸಭೆ- ಸಮಾರಂಭಗಳು ನಡೆಯುವಲ್ಲಿಗೂ ಒದಗಿಸುತ್ತಾರೆ. ಬಟ್ಟೆ- ಬರೆಗಳನ್ನು ಕಂಪನಿಗಳ ಅಧಿಕೃತ ಶೋರೂಮ್ ಗಳಲ್ಲಿ ಖರೀದಿಸಿದಂತೆ ತರಕಾರಿ ಹಾಗೂ ಹಣ್ಣುಗಳನ್ನು ಕೊಳ್ಳಲೂ ಜನ ಮಾಲ್ ಗಳಿಗೆ ಹೋಗುತ್ತಿದ್ದಾರೆ. ಆನ್-ಲೈನ್‌ನಲ್ಲಿ ಖರೀದಿಸಿದರೆ ಮನೆ ಬಾಗಿಲಿಗೆ ತಂದು ಕೊಡುವ ವ್ಯವಸ್ಥೆಯೂ ಕೆಲವು ಕಡೆ ಇದೆ. ಹೀಗಾಗಿ, ವಾರದ ಸಂತೆ ಜನಾಕರ್ಷಣೆ ಕಳೆದುಕೊಳ್ಳುತ್ತಿದೆ.
ವಹಿವಾಟು ಕುಂಠಿತ
ಪೇಟೆಗೆ ಹತ್ತಿರ ಜನಸಮೂಹ ಇರಬೇಕಿದ್ದ ಸ್ಥಳಗಳಲ್ಲಿ ಸಂತೆ ಮಾರುಕಟ್ಟೆ ತೆರೆದಲ್ಲಿ ಸಂತೆಗೆ ಖರೀದಿದಾರರು ಬರುತ್ತಾರೆ. ಸಂತೆಗೆಂದೇ ಬರುವ ಜನರ ಸಂಖ್ಯೆ ಕಡಿಮೆಯಿದೆ. ಇದರಿಂದಾಗಿ ವಾರದ ಸಂತೆಯಲ್ಲಿ ವ್ಯಾಪರ ವಹಿವಾಟು ಕುಂಠಿತವಾಗುತ್ತಿದೆ.
– ಶೇಖರ ಬೀರಮಂಗಲ
ಸಂತೆ ವ್ಯಾಪಾರಿ-ಸುಳ್ಯ
ಬಾಲಕೃಷ್ಣ ಭೀಮಗುಳಿ