Advertisement

ಕದ್ರಿ ಬಳಿಯ ಶೌಚಾಲಯದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

11:08 AM May 24, 2022 | Team Udayavani |

ಕದ್ರಿ: ಬೇಸಿನ್‌ ಇದೆ ಟ್ಯಾಪ್‌ ಇಲ್ಲ, ಸುತ್ತಲೂ ಹರಡಿದ ಪ್ಲಾಸ್ಟಿಕ್‌, ಗಾಜಿನ ಚೂರು, ನೆಲದಲ್ಲಿ ಮಣ್ಣು, ಕೊಳಚೆ ನೀರು, ಗಬ್ಬು ವಾಸನೆ… ಇದು ನಗರದ ಕದ್ರಿ ದಕ್ಷಿಣ ವಾರ್ಡ್‌ನ ಬಯಲು ರಂಗಮಂದಿರ ಬಳಿ ಇರುವ ಮಹಾನಗರ ಪಾಲಿಕೆ ಅಧೀನದ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆ.

Advertisement

ಕಳೆದ ವರ್ಷ ಉದ್ಘಾಟನೆಗೊಂಡ ಈ ಶೌಚಾಲಯದಲ್ಲಿ ನಿಗದಿತ ಶುಲ್ಕ ಪಾವತಿಸಿ ಶೌಚಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಶುಲ್ಕ ಸಂಗ್ರಹ ಕಡಿಮೆ ಆದ ಕಾರಣ ಸಮರ್ಪಕ ನಿರ್ವಹಣೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಟೆಂಡರ್‌ ವಹಿಸಿದವರೂ ಆಸಕ್ತಿ ತೋರುತ್ತಿರಲಿಲ್ಲ. ಇದರಿಂದಾಗಿ ಕೆಲವು ದಿನಗಳಿಂದ ಶೌಚಾಲಯಕ್ಕೆ ಬೀಗ ಜಡಿಯಲಾಗಿತ್ತು. ಆದರೆ ಕೆಲವು ಮಂದಿ ಈ ಬೀಗ ಒಡೆದು ಶೌಚಾಲಯ ಪ್ರವೇಶಿಸುತ್ತಿದ್ದಾರೆ. ಸದ್ಯ ಶೌಚಾಲಯ ಗಬ್ಬು ನಾರುತ್ತಿದೆ.

ನಗರ, ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡಬೇಕು ಎಂಬ ಸೂಚನೆ ನೀಡುತ್ತಿ ರುವ ಪಾಲಿಕೆಯು ತನ್ನ ಅಧೀನದ ಶೌಚಾಲಯವನ್ನು ನಿರ್ವಹಣೆ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಈ ನೂತನ ಶೌಚಾಲಯವನ್ನು ಉದ್ಘಾಟಿಸಲಾಗಿತ್ತು. ಕೆಲವು ತಿಂಗಳ ಕಾಲ ಶೌಚಾಲಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತೇ ವಿನಾ ಬಳಿಕ ಸುತ್ತಲೂ ಗಲೀಜಿನಿಂದ ಕೂಡಿದೆ. ಪಕ್ಕದಲ್ಲಿಯೇ ಬಯಲು ರಂಗ ಮಂದಿರ ಇರುವ ಕಾರಣ ಮತ್ತು ಸುತ್ತಲಿನ ಮಂದಿಗೆ ಈ ಶೌಚಾಲಯ ಉಪಯೋಗ ವಾಗುತ್ತಿದೆ. ಆದರೆ ಉದ್ಘಾಟನೆಗೊಂಡ ಕೆಲವೇ ತಿಂಗಳಿನಲ್ಲಿ ಈ ಶೌಚಾಲಯ ಅವ್ಯವಸ್ಥೆಗೆ ಕಾರಣವಾಗಿದೆ. ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ನೌಕರರು, ರಿಕ್ಷಾ ಚಾಲಕರು ಸಹಿತ ಹಲವು ಮಂದಿ ಈ ಶೌಚಾಲಯವನ್ನು ಬಳಕೆ ಮಾಡುತ್ತಿದ್ದರು.

ಕದ್ರಿ, ಮಲ್ಲಿಕಟ್ಟೆ, ಕದ್ರಿ ಕಂಬಳ ಸಹಿತ ಸುತ್ತಮುತ್ತಲು ಯಾವುದೇ ಶೌಚಾಲಯ ಇಲ್ಲದ ಕಾರಣ ಇದು ಉಪಯೋಗಿ ಆಗಿತ್ತು. ಸ್ಥಳೀಯರಾದ ರಮೇಶ್‌ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕೆಲವು ತಿಂಗಳುಗಳಿಂದ ಈ ಶೌಚಾಲಯ ನಿರ್ವಹಣೆಯಿಲ್ಲದೆ ಗಲೀಜಾಗಿದೆ. ಶೌಚಾಲಯದಿಂದ ಬರುವ ವಾಸನೆಗೆ ಪಕ್ಕದ ರಸ್ತೆಯಲ್ಲಿಯೂ ನಡೆಯಲು ಸಾಧ್ಯವಾಗುತ್ತಿಲ್ಲ. ಸ್ಥಳೀಯಾಡಳಿಯ ಕೂಡಲೇ ಇತ್ತ ಗಮನಹರಿಸಿ ಶೌಚಾಲಯದ ನಿರ್ವಹಣೆಗೆ ಸೂಚನೆ ನೀಡಬೇಕು ಎನ್ನುತ್ತಾರೆ.

ನಿರ್ವಹಣೆಗೆ ಆದ್ಯತೆ ಸ್ಥಳೀಯ ಮನಪಾ ಸದಸ್ಯ ಕದ್ರಿ ಮನೋಹರ ಶೆಟ್ಟಿ ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕದ್ರಿ ಬಳಿಯ ಶೌಚಾಲಯ ಪ್ರವೇಶಕ್ಕೆ ಶುಲ್ಕ ನಿಗದಿ ಪಡಿಸಲಾಗಿದ್ದು, ಹೆಚ್ಚಿನ ಶುಲ್ಕ ಸಂಗ್ರಹವಾಗುತ್ತಿರಲಿಲ್ಲ. ಇದರಿಂದ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿರಲಿಲ್ಲ. ಅದೇ ಕಾರಣಕ್ಕೆ ಕೆಲವು ದಿನಗಳ ಹಿಂದೆ ಶೌಚಾಲಯಕ್ಕೆ ಬೀಗ ಹಾಕಿದ್ದೆವು. ಕೆಲವರು ಬೀಗ ಒಡೆದು ಶೌಚಾಲಯ ಪ್ರವೇಶಿಸುತ್ತಿದ್ದಾರೆ. ಸದ್ಯದಲ್ಲೇ ಓರ್ವ ಸಿಬಂದಿ ನೇಮಿಸಿ, ಶೌಚಾಲಯ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ.

Advertisement

ನಿರ್ವಹಣೆಗೆ ಸೂಚನೆ

ಕದ್ರಿ ಬಯಲು ರಂಗಮಂದಿರ ಬಳಿ ಕಳೆದ ವರ್ಷ ನೂತನ ಶೌಚಾಲಯ ಉದ್ಘಾಟಿಸಲಾಗಿತ್ತು. ಸದ್ಯ ಈ ಶೌಚಾಲಯ ಯಾವ ಸ್ಥಿತಿಯಲ್ಲಿದೆ, ಅವ್ಯವಸ್ಥೆಗೆ ಕಾರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದು, ಶೌಚಾಲಯದ ಸೂಕ್ತ ನಿರ್ವಹಣೆಗೆ ಸೂಚಿಸಲಾಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next