Advertisement

ಹುಸಿಯಾದ ‘ಸ್ವಚ್ಛ ಚಿಕ್ಕಮಗಳೂರು’ಮಂತ್ರ

04:03 PM May 23, 2022 | Team Udayavani |

ಚಿಕ್ಕಮಗಳೂರು: ನಗರಸಭೆ ಸ್ವಚ್ಛ ಚಿಕ್ಕಮಗಳೂರು ನಿರ್ಮಾಣದ ಮಂತ್ರ ಜಪಿಸುತ್ತಿದೆ. ನಗರದಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಚರಂಡಿಗಳು ಕೊಳಚೆ ನೀರು ತುಂಬಿ ಸೊಳ್ಳೆ ಉತ್ಪಾದನೆ ಮಾಡುವ ಕಾರ್ಖಾನೆಯಂತಾಗಿದ್ದಲ್ಲದೆ ದುರ್ವಾಸನೆ ಬೀರುತ್ತಿವೆ.

Advertisement

ನಗರದ ಹೃದಯ ಭಾಗದಲ್ಲಿರುವ ಕೆ.ಎಂ. ರಸ್ತೆಯ ಚರಂಡಿಗಳ ಸ್ಥಿತಿ ಹೀಗಾದರೆ ನಗರದ ಬೇರೆ ಬೇರೆ ಬಡಾವಣೆಗಳ ಚರಂಡಿಗಳ ಸ್ಥಿತಿ ಏನು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡು ತ್ತಿದೆ. ಸಣ್ಣ ಪ್ರಮಾಣದ ಮಳೆಯಾದರೂ ನಗರದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಅವೈಜ್ಞಾನಿಕ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಕೆಲವು ಕಡೆಗಳಲ್ಲಿ ನೀರು ನಿಂತು ದುರ್ವಾಸನೆ ಬೀರುವುದಲ್ಲದೆ ಸೊಳ್ಳೆಗಳ ಉತ್ಪತಿ ಕೇಂದ್ರಗಳಾಗಿವೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡುವ ಜಪ ಮಾಡುತ್ತಿದ್ದಾರೆ. ಆದರೆ, ನಗರದ ಸೌಂದರ್ಯ ಹೆಚ್ಚಿಸಲು ಅವೈಜ್ಞಾನಿಕ ಚರಂಡಿಗಳು ಮಾರಕವಾಗಿವೆ.

ನಗರದ ಹನುಮಂತಪ್ಪ ವೃತ್ತದಿಂದ ಬೋಳರಾಮೇಶ್ವರ ದೇವಸ್ಥಾನದವರೆಗೂ ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಿರುವ ರಸ್ತೆ ಚರಂಡಿ ಅವೈಜ್ಞಾನಿಕವಾಗಿದ್ದು, ಚರಂಡಿ ಮೇಲೆ ಅಳವಡಿಸಿದ್ದ ಸ್ಲ್ಯಾಬ್‌ಗಳು ಕಿತ್ತು ಬಂದಿವೆ. ಅಲ್ಲಲ್ಲಿ ಸ್ಲ್ಯಾಬ್‌ಗಳು ಮುರಿದು ಚರಂಡಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿ ನೀರು ನಿಂತು ದುರ್ವಾಸನೆ ಬೀರುತ್ತಿವೆ.

ಚರಂಡಿ ಮೇಲೆ ಅಳವಡಿಸಿದ್ದ ಸ್ಲ್ಯಾಬ್‌ಗಳು ಕಿತ್ತು ಬಂದಿದ್ದು, ಪಾದಚಾರಿಗಳಿಗೆ ಪ್ರತೀ ನಿತ್ಯ ತೊಂದರೆಯಾಗುತ್ತಿದೆ. ಕಡೂರು ಮತ್ತು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಗಳ ಮೇಲೆ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಈ ಸ್ಲ್ಯಾಬ್‌ಗಳು ಕಾಮಗಾರಿ ಮುಗಿಯುವುದರೊಳಗೆ ಮುರಿದು ಬಿದ್ದಿವೆ. ಇಲ್ಲಿ ದೊಡ್ಡ ಗುಂಡಿಗಳು ಇದ್ದು ಇವು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

Advertisement

ಈ ರಸ್ತೆಯ ಎರಡು ಇಕ್ಕೆಲಗಳಲ್ಲಿ ಬೀದಿದೀಪಗಳನ್ನು ಅಳವಡಿಸದಿರುವುದರಿಂದ ರಾತ್ರಿ ವೇಳೆ ಸಂಚರಿಸುವಾಗ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಆಪತ್ತು ತರುವಂತಿದೆ. ಈ ನಿಟ್ಟಿನಲ್ಲಿ ಮುರಿದು ಬಿದ್ದ ಸ್ಲ್ಯಾಬ್‌ಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಗರದಲ್ಲಿ ಮುಖ್ಯರಸ್ತೆಯ ಚರಂಡಿ ವ್ಯವಸ್ಥೆ ಇದಾಗಿದ್ದರೆ, ನಗರದ ಬಹುತೇಕ ಬಡಾವಣೆಗಳ ಚರಂಡಿ ಸಮಸ್ಯೆ ನಿತ್ಯ ಅಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. ಸಣ್ಣ ಮಳೆ ಬಂದರೂ ಚರಂಡಿ ನೀರು ರಸ್ತೆ ಮೇಲೆ ಹರಿದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.

ನಗರದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಚರಂಡಿಯಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆ ಕೇಂದ್ರಗಳಾಗಿ ಮಾರ್ಪಟ್ಟಿವೆ. ದುರ್ವಾಸನೆ ಬೀರುವ ತಾಣಗಳಾಗಿದ್ದು, ಬಡಾವಣೆಗಳ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸ್ವಚ್ಛ ನಗರದ ಕನಸು ಕಾಣುತ್ತಿರುವ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ಇತ್ತ ಗಮನ ಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next