ಕೊಟ್ಟೂರು: ಇತಿಹಾಸ ಪ್ರಸಿದ್ಧ ಬ್ರಿಟಿಷ್ ಆಡಳಿತಾವಧಿಯಲ್ಲಿ ಸ್ಥಾಪನೆಯಾದ ಬಾಲಕರ ಪ್ರೌಢಶಾಲೆ ಕಾಂಪೌಂಡ್ ಸುತ್ತಲೂ ಬರೀ ಅಂಗಡಿಗಳೇ ತಲೆ ಎತ್ತಿದ್ದು ಸ್ವಚ್ಛತೆ-ಶಾಂತತೆ ಮರೀಚಿಕೆಯಾಗಿದೆ!
ಪಟ್ಟಣದ ಏಕೈಕ ಪ್ರೌಢಶಾಲೆ ಇದಾಗಿದ್ದು ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಕಲಿತು ಉನ್ನತ ಪದವಿಯಲ್ಲಿದ್ದಾರೆ. ಇಂಥ ಅತ್ಯುನ್ನತ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರೌಢಶಾಲೆ ಸ್ವಚ್ಛತೆ ಕಾಣದೆ ಹಾಳು ಕೊಂಪೆಯಂತೆ ಕಾಣುತ್ತಿದೆ.
ಶಾಲೆಯಿಂದ ಕನಿಷ್ಟ 100 ಮೀಟರ್ ಅಂತರದಲ್ಲಿ ಪಾನ್‌ಬೀಡಾ-ಗುಟಕಾ-ತಂಬಾಕು ಮಾರಾಟ ಮಾಡುವಂತೆ ಕಾನೂನಿದ್ದರೂ ಅ ಕಾನೂನು ಇಲ್ಲಿ ಉಲ್ಲಂಘನೆಯಾಗಿದೆ. ಮಾಂಸದ ವ್ಯಾಪಾರವೂ ಜೋರಾಗಿದ್ದು ಮಕ್ಕಳು-ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಮಾಂಸದ ಅಂಗಡಿ-ಎಗ್‌ರೈಸ್ ಅಂಗಡಿಗಳಿರುವುದರಿಂದ ಕಾಗೆಗಳ ಕಾಟ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳ ಮೇಲೂ ಎರಗಿ ಬಂದಿವೆ. ಇದರಿಂದ ಮಕ್ಕಳು-ಸಾರ್ವಜನಿಕರು ಭೀತಿಯಿಂದಲೇ ಓಡಾಡುವ ಸ್ಥಿತಿ ಇದೆ.
ಎಗ್‌ರೈಸ್ ಮಾಡುವಾಗ ಎಷ್ಟೋ ಸಲ ಖಾರದ ಪುಡಿ ಸವಾರರ ಕಣ್ಣಿಗೆ ಬಿದ್ದು ಅಂಗಡಿಕಾರರೊಂದಿಗೆ ವಾಗ್ಧಾದ ನಡೆದ ಉದಾಹರಣೆಗಳು ಇದೆ. ಅಂಗಡಿ ಮಾಲೀಕರು ಮಾಂಸ ತೊಳೆದ ನೀರನ್ನು ಚರಂಡಿಗೆ ಸುರಿಯುತ್ತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ರೋಗ ಹರಡುವ ಭೀತಿ ಎದುರಾಗಿದೆ. ಸಂಜೆ 5ರ ನಂತರ ಇನ್ನೂ ಜನಜಂಗುಳಿ ಹೆಚ್ಚಾಗಿ ಕುಡುಕರ ಹಾವಳಿಯಿಂದಾಗಿ ಸಾರ್ವಜನಿಕರು ಓಡಾಟಕ್ಕೆ ತೊಂದರೆಯಾಗುತ್ತಿದೆ. ವಿದ್ಯಾರ್ಜನೆಗೆ ಬೇಕಾಗುವ ಪರಿಸರ ಇಲ್ಲದಂತಾಗಿದೆ. ಈ ಸಂಬಂಧ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಸರದ ನಿರ್ಮಾಣವು ಇಲ್ಲಿನ ಪಟ್ಟಣ ಪಂಚಾಯಿತಿ ಮತ್ತು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿರುವುದರಿಂದ ಕೂಡಲೇ ಶಾಲೆ ಕಾಂಪೌಂಡ್‌ನ ಸುತ್ತಲಿರುವ ಎಲ್ಲ ವ್ಯಾಪಾರ ವಹಿವಾಟಿನ ಅಂಗಡಿಗಳನ್ನು ನಿಗದಿತ ಸ್ಥಳಕ್ಕೆ ತೆರವುಗೊಳಿಸಿ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾವೆಲ್ಲಾ ಇದೇ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ನಾವು ಓದುವಾಗ ಉತ್ತಮ ಪರಿಸರವಿತ್ತು. ಶಾಲೆಗೆ ಬಂದರೆ ಖುಷಿಯಾಗುತ್ತಿತ್ತು. ಇಂಥ ಶಾಲೆ ಈಗ ಬರೀ ಅಂಗಡಿಗಳಿಂದ ಸುತ್ತುವರಿದು ಸ್ವತ್ಛತೆ ಇಲ್ಲದೆ ಶಾಲೆಯೇ ಇಲ್ಲದಂತಾಗಿದೆ. ಬರೀ ಬೀಡಿ ಸಿಗರೇಟ್, ಮಾಂಸ ವ್ಯಾಪಾರಗಳೇ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಯಾವುದೇ ಆಸಕ್ತಿ ಇಲ್ಲದಂತಾಗಿದೆ. ಕೂಡಲೇ ಅಧಿಕಾರಿಗಳು ಈ ಅಂಗಡಿಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿ ಇತಿಹಾಸ ಪ್ರಸಿದ್ಧ ಶಾಲೆಯಲ್ಲಿ ಮತ್ತೆ ಸ್ವತ್ಛತೆ ಕಾಪಾಡಿ ಜ್ಞಾನಾರ್ಜನೆಗೆ ಬೇಕಾಗುವ ಪರಿಸರ ನಿರ್ಮಾಣ ಮಾಡಬೇಕು.
–ಹೆಸರು ಹೇಳಲಿಚ್ಛಿಸದ ಶಾಲೆ ಹಳೆ ವಿದ್ಯಾರ್ಥಿ
ತಂಬಾಕು-ಬೀಡಿ-ಸಿಗರೇಟ್ ಇತರೆ ವ್ಯಾಪಾರಿಗಳು ಶಾಲೆಯಿಂದ ದೂರವಿರಲು ಸರ್ಕಾರದ ಆದೇಶವಿದೆ. ಆದರೂ ವ್ಯಾಪಾರ ಮಾಡುತ್ತಿರುವವರನ್ನೂ ಬೀದಿಬದಿಯ ವ್ಯಾಪಾರಗಳ ವಲಯ ಜಾಗವನ್ನು ಗುರುತಿಸಿ ಕೂಡಲೇ ಒಂದೇ ಜಾಗದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಶಾಲಾ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲು ಸ್ಥಳೀಯ ಆಡಳಿತಕ್ಕೆ ಸೂಚಿಸುತ್ತೇವೆ.
–ಜಿ. ಅನಿಲ್‌ಕುಮಾರ. ದಂಡಾಧಿಕಾರಿ ಕೊಟ್ಟೂರು
ಎಂ. ರವಿಕುಮಾರ