Advertisement

3 ನದಿಗಳ ಮಡಿಲಲ್ಲಿದ್ದರೂ ಶುದ್ಧ ನೀರಿಲ್ಲ

01:14 PM Mar 21, 2020 | Suhan S |

ಹುನಗುಂದ: ಕೃಷ್ಣೆ, ಮಲಪ್ರಭೆ ಸಂಗಮಗೊಳ್ಳುವ ಹುನಗುಂದ ತಾಲೂಕು ಮೂರು ನದಿಗಳ ಮಡಿಲಿನಲ್ಲಿದೆ. ಆದರೂ, ಇಲ್ಲಿನ ಜನರಿಗೆ ಕುಡಿಯಲು ಶುದ್ಧ ನೀರಿಲ್ಲ. ಸರ್ಕಾರ ಕೋಟ್ಯಂತರ ಖರ್ಚು ಮಾಡಿದರೂ ಅದು ಸದ್ಭಳಕೆಯಾಗುತ್ತಿಲ್ಲ ಎಂಬ ಅಸಮಾಧಾನ ತಾಲೂಕಿನಲ್ಲಿ ಕೇಳಿ ಬರುತ್ತಿದೆ.

Advertisement

ಲಕ್ಷಾಂತರ ಖರ್ಚು ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕದ ವಸ್ತುಗಳು ತುಕ್ಕು ಹಿಡಿದಿವೆ. ಘಟಕದ ಸುತ್ತಲೂ ಮುಳ್ಳು-ಕಂಟಿ ಬೆಳೆದಿವೆ. ಆದರೂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನನಗೆ ಸಂಬಂಧವಿಲ್ಲ ಎಂಬಂತೆ ಗಾಢ ನಿದ್ರೆಯಲ್ಲಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಲೂಕಿನ ಚಿತ್ತರಗಿ ಗ್ರಾಪಂ ವ್ಯಾಪ್ತಿಯ ಗಂಗೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಲಕ್ಷಾಂತರ ಹಣವನ್ನು ಖರ್ಚು ಮಾಡಿ, ನಿರ್ಮಾಣ ಮಾಡಿದ ಘಟಕ ಮಾತ್ರ ನಾಲ್ಕೈದು ವರ್ಷ ಕಳೆದರೂ ಘಟಕ ಆರಂಭಿಸಿಲ್ಲ. ಹೀಗಾಗಿ ಈ ಗ್ರಾಮದ ಜನತೆಗೆ ಒಂದು ತೊಟ್ಟು ನೀರು ಕಂಡಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದಾಗ ಗ್ರಾಮಸ್ಥರು ನಮ್ಮೂರಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಾಗುತ್ತದೆ. ಬೋರ್‌ವೆಲ್‌ ನೀರು ಕುಡಿಯೋದು ತಪ್ಪುತ್ತದೆ, ಪ್ಲೋರೈಡ್‌ಯುಕ್ತ ನೀರಿನಿಂದ ಬರುವ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ ಎಂದುಕೊಂಡಿದ್ದ ಗ್ರಾಮಸ್ಥರ ಬಹುದೊಡ್ಡ ಆಸೆಗೆ ಅಧಿಕಾರಿಗಳು ಎಳ್ಳು ನೀರು ಬಿಟ್ಟಿದ್ದಾರೆ.

ಘಟಕದ ಸುತ್ತ ಮುಳ್ಳು-ಕಂಟಿ: ಶುದ್ಧ ನೀರಿನ ಘಟಕ ನಿರ್ಮಾಣವಾಗಿ ನಾಲ್ಕೈದು ವರ್ಷವಾಗಿವೆ. ಅದರ ಸುತ್ತಮುತ್ತ ಮುಳ್ಳು ಕಂಟಿಗಳು ಬೆಳೆದು ಹಂದಿ, ನಾಯಿಗಳ ವಾಸದ ತಾಣವಾಗಿದೆ. ಈ ಸ್ಥಳವಂತೂ ಮದ್ಯ ವ್ಯಸನಿಗಳಿಗೆ ಆಶ್ರಯವೂ ಆಗಿದೆ. ಈ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅಳವಡಿಸಿದ ಸುಮಾರು 250 ಲೀಟರ್‌ ಹೆಚ್ಚಿನ ಸಾಮರ್ಥ್ಯದ ನೀರಿನ ಟ್ಯಾಂಕ್‌ ಮತ್ತು ಶುದ್ಧೀಕರಣದ ಯಂತ್ರಗಳು ಧೂಳ ತುಂಬಿ ಸಂಪೂರ್ಣ ತುಕ್ಕು ಹಿಡಿದಿದೆ. ಘಟಕದ ಸುತ್ತಲಿನ ನಿರ್ಮಾಣದ ಕ್ಯಾಬಿನ್‌ದ ಬಾಗಿಲು ಕಿಟಕಿಗಳ ಗಾಜುಗಳು ಪುಂಡರ ಹಾವಳಿಗೆ ಪುಡಿ-ಪುಡಿಯಾಗಿ ಹೋಗಿವೆ.

Advertisement

ನೀರಿಗಾಗಿ ಹಾಹಾಕಾರ: ಬೇಸಿಗೆಯಲ್ಲಿ ಗ್ರಾಮೀಣ ಜನರು ನೀರಿಗಾಗಿ ಹಾಹಾಕಾರ ಪಡಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಗ್ರಾಮೀಣ ಜನರ ಕುಡಿಯುವ ನೀರಿಗಾಗಿ ಕೋಟಿ-ಕೋಟಿ ಹಣ ವ್ಯಯ ಮಾಡಿ ಒಂದು ಹಳ್ಳಿಗೆ ಇಲ್ಲವೇ ಎರಡು ಮೂರು ಹಳ್ಳಿಗೆ ಸೇರಿಸಿ ಒಂದೊಂದು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವಂತೆ ಅನುದಾನ ನೀಡಲಾಗಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಘಟಕಗಳು ಆರಂಭವಾಗದೇ ಸ್ಥಗಿತಗೊಂಡಿವೆ. ಸದ್ಯ ಬೇಸಿಗೆ ಆರಂಭವಾಗಿದ್ದು ಗ್ರಾಮೀಣ ಜನರು ಮತ್ತೆ ನೀರಿಗಾಗಿ ಪರದಾಡುವ ಸ್ಥಿತಿ ಮಾತ್ರ ತಪ್ಪುತ್ತಿಲ್ಲ. ಕಣ್ಣಿದ್ದು ಕುರುಡಾದ ಅಧಿಕಾರಿಗಳು: ಗಂಗೂರ ಗ್ರಾಮದಲ್ಲಿ ನೀರಿನ ಘಟಕದ ಆರಂಭಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಗ್ರಾಪಂ ಪಿಡಿಒ ಕೇಳಿದರೇಅದು ನನಗೆ ಸಂಬಂಧಿಸಿಲ್ಲ. ಭೂ ಸೇನಾ ನಿಗಮಕ್ಕೆ ಸೇರಿದೆ. ಅದನ್ನು ಇಲ್ಲಿವರಿಗೆ ಗ್ರಾಪಂಗೆ ಹಸ್ತಾಂತರಿಸಿಲ್ಲ. ಅದರ ಬಗ್ಗೆ ನನ್ನನ್ನು ಏನು ಕೇಳಬೇಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಒಟ್ಟಾರೆಯಾಗಿ ನಾಲ್ಕೈದು ವರ್ಷದಿಂದ ಆರಂಭವಾಗದೇ ತುಕ್ಕು ಹಿಡಿದು ಹಾಳಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಆರಂಭಿಸಿ ಗ್ರಾಮದ ಜನತೆ ಶುದ್ಧ ಜೀವ ಜಲ ಒದಗಿಸಬೇಕಿದೆ.

ಗಂಗೂರ ಗ್ರಾಮದಲ್ಲಿ ನಾಲ್ಕೈದು ವರ್ಷದ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಅದು ಸದ್ಯ ಪ್ರಾರಂಭವಿಲ್ಲದೇ ಯಂತ್ರಗಳು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿದ್ದು. ಹಂದಿ-ನಾಯಿಗಳ ವಾಸ ಸ್ಥಾನವಾಗಿದ್ದಲ್ಲದೇ ಅದು ಮದ್ಯ ವ್ಯಸನಿಗಳ ಅಡ್ಡೆಯಾಗಿದೆ. -ಸೋಮು ಚಲವಾದಿ, ಗಂಗೂರ ಗ್ರಾಮಸ್ಥ

 

ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next