ಹನಮಸಾಗರ: ಸಮೀಪದ ಜಹಗೀರಗುಡದೂರ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ವೀರಶೈವ ಲಿಂಗಾಯಿತ, ಉಪ್ಪಾರ, ಕುರುಬ, ಶೆಟ್ಟರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗ, ಮುಸ್ಲಿಂ ಹಾಗೂ ವಿವಿಧ ಸಮುದಾಯಗಳ 2500 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ ಸ್ಮಶಾನವಿಲ್ಲ. ಗ್ರಾಮದಲ್ಲಿ ಸ್ಮಶಾನ (ರುದ್ರಭೂಮಿ)ಭೂಮಿ ಇಲ್ಲದೇ ಇರುವುದರಿಂದ ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಜಮೀನು ಇಲ್ಲದವರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಜಮೀನು ಇದ್ದವರ ಮನವೊಲಿಸಬೇಕು. ಇಲ್ಲದಿದ್ದರೆ ಕೆರೆ ಜಾಗದಲ್ಲಿ ಸುತ್ತಲಿನ ರೈತರ ಕಣ್ತಪ್ಪಿಸಿ ಅಂತ್ಯಸಂಸ್ಕಾರ ಮಾಡಬೇಕು. ಇಲ್ಲಿ ಅಂತ್ಯಸಂಸ್ಕಾರ ಮಾಡಿದರೆ ನಮಗೆ ಹೆದರಿಕೆಯಾಗುತ್ತದೆ. ಇಲ್ಲಿ ಮಾಡಬೇಡಿ ಎಂದು ಕೆರೆ ಸುತ್ತಮುತ್ತಲಿನ ಹೊಲಗಳ ರೈತರು ತಡೆಯೊಡ್ಡುತ್ತಾರೆಂದು ಜಮೀನು ಇಲ್ಲದವರು ಅಳಲು ತೋಡಿಕೊಳ್ಳುತ್ತಾರೆ.
ಗ್ರಾಮದಲ್ಲಿ ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ ಯಾವುದೇ ಅಪೇಕ್ಷೆ ಇಲ್ಲದೇ 20 ವರ್ಷಗಳಿಂದ ಶವ ಸಂಸ್ಕಾರ ಮಾಡಲು ವ್ಯಕ್ತಿಯೊಬ್ಬರುತಮ್ಮ ಜಮೀನಿನ ಬದುವಿನಲ್ಲಿ ಅನುವು ಮಾಡಿಕೊಟ್ಟಿದ್ದರು. ಆದರೆ ಈಗ ಅದು ಸಹ ಸಿಗುತ್ತಿಲ್ಲ. ನಮ್ಮ ಮನೆಯಲ್ಲಿ ಸಾವು ಸಂಭವಿಸಿದರೆ ಒಂದೆಡೆ ದುಃಖ, ಮತ್ತೂಂದೆಡೆ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಎಂಬ ಚಿಂತೆ. ಜಮೀನು ಇರುವವರು ತಮ್ಮ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದ ನಮ್ಮಂತವರು ಜಮೀನು ಮಾಲೀಕ ಕೈ-ಕಾಲು ಹಿಡಿದು ಅಂತ್ಯಸಂಸ್ಕಾರಕ್ಕೆ ಒಪ್ಪಿಸಬೇಕು. ಒಪ್ಪದಿದ್ದರೆ ಗ್ರಾಮದ ಹೊರವಲಯದಲ್ಲಿರುವ ಕೆರೆ ಪ್ರದೇಶದಲ್ಲಿ ಸುತ್ತಮುತ್ತ ಹೊಲಗಳ ರೈತರಿಗೆ ತಿಳಿಯದಂತೆ ರಾತ್ರಿ ವೇಳೆ ಶವಸಂಸ್ಕಾರ ಮಾಡಬೇಕು. ಕೆರೆ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಬೇಡಿ ನಮಗೆ ಭಯವಾಗುತ್ತದೆ, ಬೇರೆ ಎಲ್ಲಿಯಾದರೂ ಮಾಡಿ ಎಂದು ರೈತರು ಹೇಳುತ್ತಾರೆ. ಏನು ಮಾಡಬೇಕೆಂದು ತೋಚದೇ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಇದೆ. –
ಬಾಳಪ್ಪ ಭಜಂತ್ರಿ, ಜಮೀನು ಇಲ್ಲದವರು
ಗ್ರಾಮಸ್ಥರು ಗ್ರಾಮದ 2 ಎಕರೆ ಸರ್ಕಾರದ ಜಾಗವನ್ನು ಸೂಚಿಸಿದರೆ ಅಥವಾ ಗ್ರಾಮದ ಹತ್ತಿರವಿರುವ ಖಾಸಗಿಯವರು ಮಾರಾಟ ಮಾರಾಟ ಮಾಡಲು ಮುಂದಾದರೇ ಸರ್ಕಾರ ಅದನ್ನು ಸ್ಮಶಾನಕ್ಕೆ ನೀಡಲು ಸಿದ್ಧ.
-ಸಿದ್ದೇಶ ಎಂ., ತಹಶೀಲ್ದಾರ್ ಕುಷ್ಟಗಿ
-ವಸಂತಕುಮಾರ ವಿ ಸಿನ್ನೂರ