Advertisement

ಬಸ್‌ ಇಲ್ಲದೇ ವಿದ್ಯಾರ್ಥಿಗಳ ನಿತ್ಯ ಪರದಾಟ

02:56 PM Jul 04, 2022 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಆರಂಭವಾಗಿವೆ. ಆದರೆ, ನಿಗದಿತ ಸಮಯಕ್ಕೆ ಬಸ್‌ ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

Advertisement

ಶಾಲಾ-ಕಾಲೇಜು ಆರಂಭವಾಗುವ ಬೆಳಗ್ಗೆ 7.30ರಿಂದ 9ರವರೆಗೆ ನಿಗದಿತ ಸಮಯದಲ್ಲಿ ಜಿಲ್ಲೆಯ ವಿವಿಧೆಡೆ ಬಸ್‌ಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಕೆಎಸ್‌ಆರ್‌ಟಿಸಿಯಿಂದ ಅಗತ್ಯ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಹಾಕುವಂತೆ ಆಗ್ರಹ, ವಿದ್ಯಾರ್ಥಿಗಳ ಪ್ರತಿಭಟನೆಗಳೂ ನಡೆದಿವೆ. ತುಂಬಿ ತುಳುಕುವ ಬಸ್‌ಗಳು: ನಗರದ ಬಸ್‌ ನಿಲ್ದಾಣದಲ್ಲೇ ಪ್ರತಿನಿತ್ಯ ಬಸ್‌ ತುಂಬಿ ತುಳುಕುತ್ತಿವೆ. ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಲಾಗುತ್ತಿದೆ.

ಬೆಳಗ್ಗೆ 10 ಗಂಟೆಯೊಳಗೆ ನಿಲ್ದಾಣಕ್ಕೆ ಬರುವ ಬಸ್‌, ಸಂಪೂರ್ಣ ಭರ್ತಿಯಾಗಿರುತ್ತವೆ. ನಂತರ, ಮಧ್ಯಾಹ್ನ 3.30ರಿಂದ ಬಸ್‌ಗಳಿಗೆ ಹತ್ತಲು ಪ್ರಯಾಣಿಕರ ನೂಕು ನುಗ್ಗಲು ಕಂಡು ಬರುತ್ತದೆ. ಕಾರ್ಮಿಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಗಳಿಗೆ ತೆರಳಲು ಸಾಕಷ್ಟು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚುವರಿ ಬಸ್‌ ನಿಯೋಜನೆಗೆ ಆಗ್ರಹ: ಮಂಡ್ಯ ತಾಲೂಕಿನ ಬಸರಾಳು, ಶ್ರೀರಂಗಪಟ್ಟಣ ವ್ಯಾಪ್ತಿಯ ತಗ್ಗಹಳ್ಳಿ, ಉರಮಾರಕಸಲಗೆರೆ, ಪಾಂಡವಪುರ ಹಾಗೂ ಮಳವಳ್ಳಿಯ ಮಾರ್ಗದ ಬಸ್‌ಗಳಲ್ಲಿ ಪ್ರಯಾಣಿಕರು ನೇತಾಡಿಕೊಂಡು ಸಂಚರಿಸುತ್ತವೆ. ಅಲ್ಲದೆ, ಬಸ್‌ ನಿಲ್ದಾಣದಲ್ಲಿ ಬಸ್‌ ಬರುತ್ತಿದ್ದಂತೆ ಹತ್ತಲು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಬಸ್‌ ಹಿಂದೆ ಓಡುವಂಥ ದೃಶ್ಯ ನಿತ್ಯ ಸಾಮಾನ್ಯವಾಗಿದೆ. ಇದರಿಂದ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂಬಂತಾಗಿದೆ.

422 ಮಾರ್ಗ: ಜಿಲ್ಲೆಯಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವ ಪುರ ಹಾಗೂ ಕೆ.ಆರ್‌.ಪೇಟೆ ಸೇರಿದಂತೆ ಒಟ್ಟು 422 ಮಾರ್ಗಗಳಿಗೆ ಬಸ್‌ ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರು ಹೆಚ್ಚು ಇರುವ ಸಮಯದಲ್ಲಿ ಹೆಚ್ಚುವರಿ ಬಸ್‌ ನಿಯೋಜಿಸದಿರುವುದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಹೆಚ್ಚುವರಿ ಬಸ್‌ ನಿಯೋಜಿಸುವುದು ಅಗತ್ಯವಿದೆ.

Advertisement

ಒಟ್ಟು 447 ಬಸ್‌: ಜಿಲ್ಲೆಯ ಎಲ್ಲಾ 7 ತಾಲೂಕುಗಳ ಘಟಕಗಳಿಂದ ಒಟ್ಟು 447 ಬಸ್‌ಗಳಿದ್ದು, 422 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹೆಚ್ಚುವರಿ ಬಸ್‌ಗಳ ಅಗತ್ಯವಿದೆ. ಇದಕ್ಕೆ ಬಸ್‌ಗಳ ಕೊರತೆಯೂ ಇದೆ. ಸದ್ಯ ಲಭ್ಯವಿರುವ ಬಸ್‌ಗಳಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ ವೇಳೆಗೆ ಮತ್ತಷ್ಟು ಬಸ್‌ ಬರುವ ನಿರೀಕ್ಷೆ ಇದೆ. ಆಗ ಸಮಸ್ಯೆ ಸ್ವಲ್ಪಮಟ್ಟಿಗೆ ಸುಧಾರಿಸಬಹುದು ಎಂದು ಸಾರಿಗೆ ಅಧಿ ಕಾರಿಯೊಬ್ಬರು ತಿಳಿಸಿದರು.

ಕೆಡಿಪಿ ಸಭೆಯಲ್ಲೂ ಜನಪ್ರತಿನಿಧಿಗಳು ಗರಂ: ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿತಗೊಳಿಸಿದ್ದರಿಂದ ಕೆಲವು ಮಾರ್ಗಗಳ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಈಗ ಕೊರೊನಾ ಕಡಿಮೆಯಾಗಿದ್ದರೂ ನಿಗದಿತ ಬಸ್‌ ನಿಯೋಜಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್‌ ಗರಂ ಆಗಿದ್ದರು. ಕೂಡಲೇ ಅಗತ್ಯವಿರುವ ಕಡೆ ಹೆಚ್ಚುವರಿ ಬಸ್‌ ನಿಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿದ್ದರು. ಇದಕ್ಕೆ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡರೂ ಬಸ್‌ಗಳ ನಿಯೋಜನೆಗೆ ಸೂಚಿಸಿದ್ದರು.

ಕಾಣದಂತಿರುವ ಅಧಿಕಾರಿಗಳು : ನಗರದ ಬಸ್‌ ನಿಲ್ದಾಣದಲ್ಲೇ ಬಸ್‌ಗಳಿಗೆ ಪ್ರಯಾಣಿಕರು ಅಗತ್ಯಕ್ಕಿಂತ ಹೆಚ್ಚು ತುಂಬಿ ಕೊಂಡು ಹೋಗುತ್ತವೆ. ನಿಲ್ದಾಣದಲ್ಲಿಯೇ ಸಾರಿಗೆ ಅಧಿಕಾರಿಗಳಿದ್ದರೂ ಕ್ರಮ ವಹಿಸುವುದಿಲ್ಲ. ಅಲ್ಲದೆ, ಬಸರಾಳು ಮಾರ್ಗದಲ್ಲಿ ಮಾರ್ಗದ ಅಧಿಕಾರಿಗಳ ಮುಂದೆಯೇ ನೇತಾಡಿಕೊಂಡು ಹೋಗುತ್ತಿದ್ದನ್ನು ಕಂಡು ದಂಗಾದರು. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಆರೋಪವಾಗಿದೆ.

ಕೊರೊನಾದಿಂದ ಬಸ್‌ಗಳ ಸಂಖ್ಯೆ ಇಳಿಸಲಾಗಿತ್ತು. ಈಗ ಅಗತ್ಯವಿರುವ ಕಡೆ ಹೆಚ್ಚುವರಿ ಬಸ್‌ ನಿಯೋಜಿಸಲಾಗುತ್ತಿದೆ. ಮೇಲುಕೋಟೆ ಮಾರ್ಗಕ್ಕೆ ಶನಿವಾರ ಒಂದು ಬಸ್‌ ಅನ್ನು 7.30ಕ್ಕೆ ಸಂಚರಿಸಲು ನಿಯೋಜಿಸಲಾಗಿದೆ. ಇರುವ ಬಸ್‌ಗಳಲ್ಲೇ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುತ್ತಿದೆ. -ನಾಗರಾಜು, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಡ್ಯ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next