Advertisement

ಪರವಾನಿಗೆ ಹಲವು; ಗ್ರಾಮಕ್ಕೆ ಬರುವುದು ಮಾತ್ರ ಒಂದೇ ಬಸ್‌!

10:44 PM Mar 21, 2021 | Team Udayavani |

ಅಜೆಕಾರು: ಮರ್ಣೆ ಗ್ರಾ.ಪಂ.  ವ್ಯಾಪ್ತಿಯ ಹೆರ್ಮುಂಡೆ ಗ್ರಾಮಸ್ಥರು  ಬಸ್‌ ಬಾರದೆ  ಹೈರಾಣರಾಗಿದ್ದಾರೆ. ಹೆರ್ಮುಂಡೆ ಸುತ್ತಲಿನ ಅಜೆಕಾರು, ಕೆರ್ವಾಶೆ, ಶಿರ್ಲಾಲು ಗ್ರಾಮಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ ಸಂಚಾರ ನಡೆಸಿದರೆ ಹೆರ್ಮುಂಡೆ ಗ್ರಾಮಕ್ಕೆ ಸಂಚಾರದ ಪರವಾನಿಗೆ ಪಡೆದ ಬಸ್‌ಗಳು ಬಾರದೆ ಜನರು ಸಂಕಷ್ಟ ಪಡುವಂತಾಗಿದೆ. ದಶಕಗಳ ಹಿಂದೆಯೇ ಸುಮಾರು 10 ಬಸ್‌ಗಳ ಪರವಾನಿಗೆ ಪಡೆದಿರುವ ಮಾಲಕರು ಬಸ್‌  ಓಡಿಸುತ್ತಿಲ್ಲ  ಎಂದು ಸ್ಥಳೀಯರು ದೂರಿದ್ದಾರೆ.

Advertisement

ಸಂಚಾರಕ್ಕೆ ಸಂಕಷ್ಟ ;

ಕಳೆದ ಕೆಲ ವರ್ಷಗಳ ಹಿಂದೆ ಬೆರಳೆಣಿಕೆಯ ಬಸ್‌ಗಳು ಸಂಚಾರ ನಡೆಸುತ್ತಿದ್ದವಾದರೂ ಈಗ ಕೇವಲ ಒಂದು ಬಸ್ಸು ದಿನಕ್ಕೆ ಒಂದೆರಡು ಬಾರಿ ಸಂಚಾರ ನಡೆಸುತ್ತಿದೆ. ಸುವ್ಯವಸ್ಥಿತವಾಗಿ ಬಸ್‌ ಸಂಚಾರ ವ್ಯವಸ್ಥೆ ಗ್ರಾಮಕ್ಕಿಲ್ಲದೆ ಇರುವುದರಿಂದ ಜನರು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

ಹೆರ್ಮುಂಡೆ  ಗ್ರಾಮವು ಪಂಚಾಯತ್‌ ಕಚೇರಿಯಿಂದ ಸುಮಾರು 7 ಕಿ.ಮೀ.  ದೂರದಲ್ಲಿದೆ. ಅಲ್ಲದೆ ಹತ್ತಿರದ ಗ್ರಾಮಗಳಾದ ಶಿರ್ಲಾಲ್‌ನಿಂದ ಸುಮಾರು 10 ಕಿ.ಮೀ., ಮುಂಡ್ಲಿಯಿಂದ 5 ಕಿ.ಮೀ.,  ಅಜೆಕಾರಿನಿಂದ  7 ಕಿ.ಮೀ., ಎಣ್ಣೆಹೊಳೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿದ್ದು ಆ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ. ಅನಂತರ ಈ ಭಾಗಗಳಿಂದ ಬಸ್‌ ಹಿಡಿದು ನಗರ ಪ್ರದೇಶ‌ಗಳಿಗೆ ತೆರಳಬೇಕಾಗಿದೆ.  ಗ್ರಾಮದ ಜನತೆ ದೂರದ ಪ್ರದೇಶಗಳಿಗೆ ತೆರಳಬೇಕಾದರೆ ಕನಿಷ್ಠ 7 ಕಿ.ಮೀ.  ನಡೆದುಕೊಂಡೇ ಹೋಗಿ ಅನಂತರ ಬಸ್‌ ಹಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಹೆರ್ಮುಂಡೆ ಗ್ರಾಮದಲ್ಲಿ ಕೇವಲ ಪ್ರಾಥಮಿಕ ಶಾಲೆಯಿದ್ದು  ಪ್ರೌಢ, ಕಾಲೇಜು ಶಿಕ್ಷಣಕ್ಕೆ ನಗರ ಪ್ರದೇಶಗಳಿಗೆ ತೆರಳಬೇಕಾಗಿದೆ. ಆದರೆ ಗ್ರಾಮದಲ್ಲಿ ಪರವಾನಿಗೆ ಪಡೆದ ಬಸ್‌ಗಳು ಓಡಾಟ ನಡೆಸದೆ ಇರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣಕ್ಕೆ ವಿದಾಯ ಹೇಳುತ್ತಿದ್ದಾರೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಕೃಷಿಕರೇ ಹೆಚ್ಚಾಗಿ ಇರುವುದರಿಂದ ಖಾಸಗಿ ವಾಹನ ಮಾಡಿ ಮಕ್ಕಳನ್ನು ಶಿಕ್ಷಣಕ್ಕೆ ಕಳುಹಿಸುವ ಪರಿಸ್ಥಿತಿ ಹೆಚ್ಚಿನ ಗ್ರಾಮಸ್ಥರಿಗಿಲ್ಲ. ಅಲ್ಲದೆ ನಿತ್ಯ ಉದ್ಯೋಗಕ್ಕೆ ತೆರಳುವವರು, ಮಹಿಳೆಯರು ಬಸ್‌ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಖಾಸಗಿ ವಾಹನಗಳಲ್ಲಿ ದುಬಾರಿ ಬಾಡಿಗೆ ಕೊಟ್ಟು ಅಗತ್ಯ ಸಂದರ್ಭಗಳಲ್ಲಿ ಸಂಚರಿಸಬೇಕಾದ ಅನಿವಾರ್ಯ  ಇಲ್ಲಿಯವರದ್ದಾಗಿದೆ.

Advertisement

ಗಿಡಗಂಟಿಗಳಿಂದ ಆವೃತ‌  ಬಸ್‌ ತಂಗುದಾಣ :

ಹಿಂದೆ ಸ್ಥಳೀಯಾಡಳಿತದಿಂದ ನಿರ್ಮಾಣವಾಗಿದ್ದ  ಬಸ್‌ ತಂಗುದಾಣಗಳು ಇಂದು ಗಿಡಗಂಟಿಗಳಿಂದ ಆವೃತವಾಗಿವೆ. ಗ್ರಾಮಕ್ಕೆ ಬಸ್‌ ಬಾರದೆ ಇರುವುದರಿಂದ ಜನತೆಗೂ ತಂಗುದಾಣದ ಆವಶ್ಯಕತೆ ಇಲ್ಲವಾಗಿದೆ. ಇದರಿಂದಾಗಿ ಬಸ್‌ ತಂಗುದಾಣ ಪಾಳು ಬೀಳುವಂತಾಗಿದೆ. ಹೆರ್ಮುಂಡೆ ಗ್ರಾಮದಲ್ಲಿ ಸುಮಾರು 500

ರಷ್ಟು ಮನೆಗಳಿದ್ದು ಸುಮಾರು 2,000 ಜನಸಂಖ್ಯೆ ಹೊಂದಿದೆ. ಇವರಲ್ಲಿ ಬಹುತೇಕರು ಸ್ವಂತ ವಾಹನಗಳಿಲ್ಲದೆ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿರುವವರು.

ನಿರಂತರ ಮನವಿ :

ಹೆರ್ಮುಂಡೆ ಗ್ರಾಮಕ್ಕೆ  ಪರವಾನಿಗೆ ಪಡೆದ ಬಸ್‌ಗಳು ಪ್ರತಿನಿತ್ಯ ಸಂಚಾರ ನಡೆಸುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಾರಿಗೆ ಅಧಿಕಾರಿಗಳು,  ಶಾಸಕರು,  ಸ್ಥಳೀಯ ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡಿದರೂ  ಬಸ್‌ ಸಂಚಾರ ಇನ್ನೂ  ಆರಂಭವಾಗಿಲ್ಲ.

ಸರಕಾರಿ ಬಸ್‌ಗೆ ಮನವಿ :  

ಪರವಾನಿಗೆ ಪಡೆದುಕೊಂಡು ಹಲವು ವರ್ಷಗಳಾದರೂ ಬಸ್‌ ಓಡಾಟ ನಡೆಸದ ಖಾಸಗಿ  ಬಸ್‌ ಮಾಲಕರ ಪರವಾನಿಗೆ ರದ್ದುಪಡಿಸಿ ಸರಕಾರಿ ಬಸ್‌  ಸಂಚಾರ ಏರ್ಪಡಿ ಸಲು ಸೂಕ್ತ ಕ್ರಮ ಕೈಗೊಳ್ಳುವ ಆವಶ್ಯಕತೆ ಇದೆ ಎಂದು ಸ್ಥಳೀಯರು  ಆಗ್ರಹಿಸಿದ್ದಾರೆ.

ಕೋವಿಡ್ -19ರಿಂದಾಗಿ  ಕೆಲವು  ಬಸ್‌ಗಳು ಸಂಚಾರ ಸ್ಥಗಿತಗೊಳಿಸಿರಬಹುದು. ಆದರೆ ಪರವಾನಿಗೆ ಪಡೆದು ಈ ವರೆಗೆ ಗ್ರಾಮಕ್ಕೆ ಬಸ್‌ ಸಂಚಾರ ನಡೆಸದೆ ಇದ್ದರೆ ಅಂತಹ ಬಸ್‌ಗಳ ಬಗ್ಗೆ ಮಾಹಿತಿಯನ್ನು ಗ್ರಾಮಸ್ಥರು ತಿಳಿಸಿದಲ್ಲಿ  ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. -ಎ.ಪಿ. ಗಂಗಾಧರ್‌,  ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ಹೆರ್ಮುಂಡೆ ಗ್ರಾಮಕ್ಕೆ ಹಲವು ಖಾಸಗಿ ಬಸ್‌ಗಳ ಮಾಲಕರು  ಪರವಾನಿಗೆ ಪಡೆದಿದ್ದರೂ  ಗ್ರಾಮಕ್ಕೆ ಬಸ್‌ ಬರುತ್ತಿಲ್ಲ. ಇಂತಹ ಬಸ್‌ ಪರವಾನಿಗೆ ರದ್ದುಪಡಿಸಿ ಸರಕಾರಿ ಬಸ್‌ ವ್ಯವಸ್ಥೆ ಗ್ರಾಮಕ್ಕೆ ದೊರೆಯುವಂತೆ ಮಾಡಬೇಕು. ಇದರಿಂದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ.  -ರಾಘವೇಂದ್ರ ಭಟ್‌, ಹೆರ್ಮುಂಡೆ

 

ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next