ಗುಂಡ್ಲುಪೇಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಗುಂಡ್ಲುಪೇಟೆ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಅಧಿಕವಾಗಿ ಮೈಸೂರಿಗೆ ಬಿಟ್ಟಿದ್ದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾರಿಗೆ ಬಸ್ ಇಲ್ಲದೆ ಹೈರಾಣಾಗಿದ್ದಾರೆ.
ತಾಲೂಕಿನ ಶಿವಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಈ ವೇಳೆ ಬಸ್ ಕಂಡೆಕ್ಟರ್ ಪಾಸ್ ಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿ, ಕೇವಲ ಸಾರ್ವಜನಿಕರು ಮಾತ್ರ ಬಸ್ ಹತ್ತುವಂತೆ ತಿಳಿಸಿ ವಿದ್ಯಾರ್ಥಿಗಳು ಬಸ್ ಏರದಂತೆ ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ನಿಂತು ಸಾರಿಗೆ ಬಸ್ ಪ್ರತಿಭಟನೆ ನಡೆಸಿದರು. ನಂತರ ವಿಧಿಯಿಲ್ಲದೆ ಖಾಸಗಿ ವಾಹನ ಹಾಗೂ ಆಟೋಗಳಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಿದರು. ಘಟನೆ ಹಿನ್ನೆಲೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಕ್ಕೆ ಬೆರಳೆಣಿಕೆ ಬಸ್ ಸಂಚಾರ: ಗುಂಡ್ಲುಪೇಟೆ ಡಿಪೋ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕೇವಲ ಬೆರಳೆಣಿಕೆ ಬಸ್‌ಗಳು ಸಂಚಾರ ಮಾಡಿದ ಹಿನ್ನೆಲೆ ಅಧಿಕ ಕಡೆ ಸಾರ್ವಜನಿಕು ಪರದಾಡುವಂತಾಯಿತು. ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಜನರು ದುಪ್ಪಟ್ಟು ಹಣನೀಡಿ ಖಾಸಗೀ ಬಸ್ ತೆರಳುವಂತಾಗಿದೆ.
ಖಾಸಗಿ ವಾಹನಗಳಿಗೆ ಬೇಡಿಕೆ: ಅಧಿಕ ಸಾರಿಗೆ ಬಸ್‌ಗಳು ಮೋದಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಹೋಗಿದ್ದ ಹಿನ್ನೆಲೆ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಿಗೆ ಆಟೋ ಸೇರಿದಂತೆ ಇನ್ನಿತರ ಹಲವು ಖಾಸಗಿ ವಾಹನಗಳು ಸಂಚಾರ ಮಾಡಿದವು. ಇದರಿಂದ ಖಾಸಗೀಯವರಿಗೆ ಬೇಡಿಕೆ ಹೆಚ್ಚಿನ ರೀತಿಯಲ್ಲಿತ್ತು.