Advertisement

ಬೇಕೆಂದಲ್ಲಿ ತಂಗುದಾಣವೇ ಇಲ್ಲ

03:58 PM Feb 24, 2020 | Suhan S |

ಕುಮಟಾ: ತಾಲೂಕಿನ ದಿವಗಿ ಗ್ರಾಮದಿಂದ ಕುಮಟಾ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಬಸ್‌ ನಿಲುಗಡೆಯ ಸ್ಥಳಗಳಿದ್ದು, ಎಲ್ಲಿಯೂ ಪ್ರಯಾಣಿಕರ ತಂಗುದಾಣವಿಲ್ಲದ ಕಾರಣ ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಂತು ಪರದಾಡುವಂತಾಗಿದೆ.

Advertisement

ಈ ಭಾಗಗಳಿಂದ ನೂರಾರು ಸಾರ್ವಜನಿಕರು ದಿನನಿತ್ಯ ವಿವಿಧ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ತೆರಳುವವರಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿದ್ದಾರೆ. ಆದರೆ ಪ್ರಯಾಣಿಕರ ತಂಗುದಾಣವಿಲ್ಲದ ಕಾರಣ ರಸ್ತೆ ಬದಿಯಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿಯಿದೆ. ಹೆಗಡೆ ಕ್ರಾಸ್‌ ಬಳಿ ಹೆಗಡೆ ಭಾಗಕ್ಕೆ ತೆರಳುವವರಿಗೆ ಮಾತ್ರ ಹಿಂದೊಮ್ಮೆ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ, ಅಂಕೋಲಾ ಅಥವಾ ಶಿರಸಿ ಮಾರ್ಗದಲ್ಲಿರುವ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. ರಿಕ್ಷಾ ನಿಲ್ದಾಣದ ಪಕ್ಕವೇ ಒಂದು ಸುಸಜ್ಜಿತ ಪ್ರಯಾಣಿಕರ ನಿಲ್ದಾಣ ನಿರ್ಮಿಸಿದರೆ ಸಾರ್ವಜನಿಕರಿಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂಬುದು ಹಲವರ ಅಭಿಪ್ರಾಯ.

ಅಲ್ಲದೇ, ಮಣಕಿಯ ಆಸ್ಪತ್ರೆಯ ಎದುರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪ್ರಯಾಣಿಕರು, ರೋಗಿಗಳು ಹಾಗೂ ವಯೋವೃದ್ಧರು ಉರಿಬಿಸಿಲಿನಲ್ಲಿಯೇ ನಿಲ್ಲಬೇಕಾದ ಅನಿವಾರ್ಯತೆಯಿದೆ. ಜನಪ್ರತಿನಿ ಧಿಗಳು ಹಾಗೂ ಸಂಬಂಧಪಟ್ಟ ಅ ಧಿಕಾರಿಗಳು ಶೀಘ್ರದಲ್ಲೇ ಅನಿವಾರ್ಯವಿರುವ ಸ್ಥಳಗಳಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

ವಿವಿಧೆಡೆ ಅಗತ್ಯ ಇಲ್ಲದಿದ್ದರೂ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ದಿನನಿತ್ಯ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುವ ಹಲವು ಸ್ಥಳಗಳಲ್ಲಿ ತಂಗುದಾಣವಿಲ್ಲ. ಇದರಿಂದಾಗಿ ಕೆಲವು ಬಸ್‌ನವರು ಪ್ರಯಾಣಿಕರಿದ್ದರೂ ಬಸ್ಸನ್ನು ನಿಲ್ಲಿಸದೇ ಹಾಗೇ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ನಿತೀಶ ಅಂಬಿಗ, ಕಾಲೇಜು ವಿದ್ಯಾರ್ಥಿ

 

Advertisement

-ಕೆ. ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next