ಸಿಂಧನೂರು: ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಸಮರ್ಪಕ ಬಸ್ ಸೌಲಭ್ಯ ಕೊರತೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬಸ್‌ನ ಬಾಗಿಲಿಗೆ ಜೋತುಬಿದ್ದು ಸಂಚರಿಸುವುದು ಸಾಮಾನ್ಯವಾಗಿದೆ.
ಸಿಂಧನೂರು ತಾಲೂಕು ಸೇರಿ ನೆರೆಯ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಸಿಂಧನೂರಿಗೆ ಆಗಮಿಸುತ್ತಾರೆ. ಆದರೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಸ್‌ನ ಬಾಗಿಲಿಗೆ ಜೋತುಬಿದ್ದು ಸಂಚರಿಸುವುದು ಸಾಮಾನ್ಯವಾಗಿದೆ.
ಸಿಂಧನೂರು ನಗರದಲ್ಲಿ 41 ಪ.ಪೂ. ಕಾಲೇಜುಗಳು, 19 ಪದವಿ ಕಾಲೇಜು, 100ಕ್ಕೂ ಹೆಚ್ಚು ಶಾಲೆಗಳಿವೆ. ತಾಲೂಕಿನ ಆಯನೂರು, ರಾಮತ್ನಾಳ, ತುರ್ವಿಹಾಳ, ಯದ್ದಲದೊಡ್ಡಿ, ಗಾಂಧಿನಗರ, ದಢೇಸುಗೂರು, ಒಳಬಳ್ಳಾರಿ, ಬಪ್ಪೂರು ಸೇರಿ ಸುಮಾರು 20, 30 ಕಿ.ಮೀ. ದೂರದ ಗ್ರಾಮಗಳ ವಿದ್ಯಾರ್ಥಿಗಳು ಸಿಂಧನೂರಿಗೆ ಶಾಲಾ-ಕಾಲೇಜಿಗೆ ಬರುತ್ತಾರೆ. ಗ್ರಾಮಗಳಿಗೆ ಶಾಲಾ-ಕಾಲೇಜು ಸಮಯಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಆಯಾ ಮಾರ್ಗವಾಗಿ ಸಂಚರಿಸುವ ಒಂದೋ, ಎರಡು ಬಸ್‌ಗಳಲ್ಲಿ ನಾಲ್ಕೈದು ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಚರಿಸಬೇಕಿದೆ. ಬಸ್ ತುಂಬಿ, ಬಾಗಿಲ ಬಳಿ ಜೋತುಬಿದ್ದು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ಸಮರ್ಪಕ ಬಸ್ ಸೌಕರ್ಯ ಕಲ್ಪಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಮತ್ತು ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತು ಪ್ರಯಾಣಿಸುವುದನ್ನು ತಡೆಯಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.