ನರೇಗಲ್ಲ: ಪಟ್ಟಣದಲ್ಲಿ 2 ಪದವಿ ಕಾಲೇಜು, 3 ಪಿಯುಸಿ ಕಾಲೇಜು ಸೇರಿದಂತೆ 5 ಪ್ರೌಢ ಶಾಲೆ ಸೇರಿದಂತೆ 1 ಸಿಬಿಎಸ್‌ಸಿ ಶಾಲೆ ಸೇರಿದಂತೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಪಟ್ಟಣಕ್ಕೆ ಶಿಕ್ಷಣ ಕಲಿಯಲು ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ.
ನಿತ್ಯ ಕೊತಬಾಳ, ಹಿರೇಹಾಳ, ರೋಣ, ಸೂಡಿ, ಇಟಗಿ, ಹೊಸಳ್ಳಿ, ಗುಜಮಾಗಡಿ, ಯರೇಬೇಲೇರಿ, ಕುರಡಗಿ, ನಾಗರಾಳ, ಅಬ್ಬಿಗೇರಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಗಜೇಂದ್ರಗಡ, ಕೋಟುಮಚಗಿ, ನಾರಾಯಣಪುರ,ಯಲಬುರ್ಗಾ, ಕರಮುಡಿ, ಮುಧೋಳ, ಬಂಡಿಹಾಳ, ತೊಂಡಿಹಾಳ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಕಾಲೇಜು ಮತ್ತು ಪ್ರೌಢ ಶಾಲೆಗಳಿಗೆ ಬರುತ್ತಾರೆ. ಇನ್ನೂ ಸಾರ್ವಜನಿಕರು ಉದ್ಯೋಗ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ಹೋಬಳಿ ಕೇಂದ್ರಕ್ಕೆ ಸಾರ್ವಜನಿಕರು ಸರ್ಕಾರಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ವೇಳೆ ಬೆಳಗ್ಗೆ 7 ರಿಂದ 9.30 ರವರೆಗೆ ಹೆಚ್ಚಾಗಿ ವಾಕರಸಾ ಸಂಸ್ಥೆಯ ಬಸ್‌ಗಳು ಸಂಚರಿಸದ ಕಾರಣ ಬಸ್‌ಗೆ ಕಾಯುವುದೇ ಒಂದು ಕೆಲಸವಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ: ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 1365, ಅಭಿನವ ಅನ್ನದಾನ ಪದವಿ ಕಾಲೇಜಿನಲ್ಲಿ ಒಟ್ಟು 260, ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಒಟ್ಟು 45. ಸರ್ಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 365, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 350 ಇನ್ನೂ ಕಾಲೇಜು, ಪ್ರೌಢ ಶಾಲೆ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳು ಸೇರಿದಂತೆ ವಿವಿಧ ಇಲಾಖೆ ಹಾಗೂ ಶಿಕ್ಷಕರನ್ನು ಒಳಗೊಂಡಂತೆ ಒಟ್ಟು ನಿತ್ಯ ಪಟ್ಟಣಕ್ಕೆ ಬರುವವರ ಸಂಖ್ಯೆ 6 ಸಾವಿರಕ್ಕೂ ಅ ಧಿಕ. ಇವರಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಬೆಳಗಿನ ಸಮಯ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸರ್ಕಾರಿ ಬಸ್‌ಗಳು ಸಂಚರಿಸುತ್ತಿರುವುದರಿಂದ ಅವರ ಗೋಳು ಕೇಳುವವರು ಇಲ್ಲವಾಗಿದೆ.
ವಿದ್ಯಾರ್ಥಿಗಳ ಅಳಲು: ವಿದ್ಯಾರ್ಥಿಗಳು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಲು, ಸರ್ಕಾರಿ ನೌಕರರು ತಿಂಗಳವರೆಗೆ ಮುಂಗಡ ಹಣ ನೀಡಿ ಬಸ್ ಪಾಸ್ ಪಡೆದುಕೊಂಡರೂ ಸಾರಿಗೆ ವಾಹನಗಳು ಇಲ್ಲದಿರುವುದರಿಂದ ಬಸ್ ಪಾಸ್ ಪ್ರಯೋಜನವಾಗುತ್ತಿಲ್ಲ. ಸಾರಿಗೆ ಬಸ್‌ಗಳು ಸರಿಯಾದ ಸಮಯಕ್ಕೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಸ್ ನಿಲ್ದಾಣದಿಂದ ಶಾಲಾ ಕಾಲೇಜಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಮತ್ತಷ್ಟು ಕಾಲ ವಿಳಂಬವಾಗಿ ಪ್ರಾರ್ಥನೆಯ ಜತಗೆ ಮೊದಲ ಅವ ಧಿ (ಕ್ಲಾಸ್) ಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.
ಬಸ್‌ನಲ್ಲಿ ಜಾತ್ರೆಯ ಅನುಭವ: ವಿವಿಧ ಗ್ರಾಮಗಳಿಂದ ಬೆಳಗ್ಗೆ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗುವ ಸಮಯದಲ್ಲಿ ಸಮರ್ಪಕ ವಾಹನಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ಮಾರ್ಗವಾಗಿ ಬಸ್ ಸಂಚರಿಸುವುದರಿಂದ ಅಲ್ಲಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಲವರೆಗೂ ಕುರಿ ಮಂದೆಯಂತೆ ತುಂಬಿಕೊಂಡು ಬರಲಾಗುತ್ತಿದೆ. ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಲು ಹೋಬಳಿ ಕೇಂದ್ರಕ್ಕೆ ಬರುತ್ತಾರೆ. ಬಸ್ ತುಂಬ ಒಬ್ಬರ ಮೇಲೆ ಒಬ್ಬರು ಎದ್ದು ಬಿದ್ದು ಹತ್ತುವುದರಿಂದ ಯಾವುದೋ ಜಾತ್ರೆಗೆ ತೆರಳಿದ ಅನುಭವ ಉಂಟಾಗುತ್ತಿದೆ. ಆದ್ದರಿಂದ ಇಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗಿದೆ.
ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಲು ಹಣ ನೀಡಿ ಬಸ್ ಪಾಸ್ ಪಡೆದುಕೊಂಡಿದ್ದೇವೆ. ಬೆಳಗ್ಗೆ 7ರಿಂದ 9.30ರವರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸದ ಕಾರಣ ಇಲ್ಲೇ ಸಮಯ ವಿಳಂಬವಾಗಲಿದೆ. ನಂತರ ಬಸ್ ನಿಲ್ದಾಣದಿಂದ ಶಾಲಾ ಕಾಲೇಜಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಮತ್ತಷ್ಟು ಕಾಲ ವಿಳಂಬವಾಗಿ ಪ್ರಾರ್ಥನೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಾಲೇಜಿನಿಂದ ಹೊರಗೆ ಹಾಕುತ್ತಾರೆ.
-ನೊಂದ ವಿದ್ಯಾರ್ಥಿಗಳು
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚುವರಿ ಬಸ್ ಸೌಲಭ್ಯವಿದೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಲಾಗುತ್ತದೆ.
-ವಿಜಯಕುಮಾರ ಕಾಗವಾಡೆ ,ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು, ರೋಣ.
-ಸಿಕಂದರ ಎಂ. ಆರಿ