Advertisement

ರಕ್ತ ಕೊರತೆ ಸೃಷ್ಟಿಸಿದ ಕೋವಿಡ್ 19

06:33 PM Mar 24, 2020 | Suhan S |

ಹಾವೇರಿ: ಕೋವಿಡ್ 19 ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಜೀವ ರಕ್ಷಕ ರಕ್ತದ ಕೊರತೆಯೂ ಎದುರಾಗಿದ್ದು ರಕ್ತ ವಿದಳನ ಘಟಕಗಳಿಗೆ ರಕ್ತದ ಕೊರತೆ ಎದುರಾಗಿದೆ.

Advertisement

ಕೋವಿಡ್ 19  ವೈರಸ್‌ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರಗಳು ರದ್ದಾಗಿರುವುದೇ ರಕ್ತ ಕೊರತೆಗೆ ಪ್ರಮುಖ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ರಕ್ತದ ತೀವ್ರ ಅಭಾವ ಉಂಟಾಗುವ ಸಂಭವವಿದ್ದು, ರಕ್ತದ ತುರ್ತು ಅಗತ್ಯವಿದ್ದವರು ಸಕಾಲಕ್ಕೆ ರಕ್ತ ಸಿಗದೆ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ರಕ್ತ ವಿದಳನ ಘಟಕದಿಂದ 8-10 ರಕ್ತದಾನ ಶಿಬಿರಗಳನ್ನು ಮಾಡಿ ಸರಾಸರಿ 500 ಯುನಿಟ್‌ ರಕ್ತ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಿಸಿದ ರಕ್ತವನ್ನು 35 ದಿನಗಳಲ್ಲಿ ತುರ್ತು ಅಗತ್ಯವಿದ್ದ ರೋಗಿಗಳಿಗೆ ನೀಡಲಾಗುತ್ತಿತ್ತು. ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯಲ್ಲಿರುವ ಏಳು ಉಪರಕ್ತ ವಿದಳನ ಘಟಕಗಳಿಗೆ ಬೇಡಿಕೆಗನುಸಾರ ಕೊಡಲಾಗುತ್ತಿತ್ತು. ಈಗ ಜಿಲ್ಲಾಸ್ಪತ್ರೆಯ ಅಗತ್ಯತೆ ತೀರಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ಕಳೆದ ತಿಂಗಳು ಫೆಬ್ರುವರಿಯಲ್ಲಿ 515 ಯೂನಿಟ್‌ ರಕ್ತ ಸಂಗ್ರಹಿಸಲಾಗಿತ್ತು. ಮಾರ್ಚ್‌ನಲ್ಲಿ ಕೋವಿಡ್ 19 ವೈರಸ್‌ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲ ರಕ್ತದಾನ ಶಿಬಿರಗಳನ್ನು ನಿಲ್ಲಿಸಲಾಗಿದೆ. ಕಾಲೇಜುಗಳಿಗೆ ಹೋಗಿ ರಕ್ತ ಸಂಗ್ರಹಿಸೋಣ ಎಂದರೆ ಅವರಿಗೂ ರಜೆ ಘೋಷಣೆಯಾಗಿದೆ. ಹೀಗಾಗಿ ಜಿಲ್ಲಾ ರಕ್ತ ವಿದಳನ ಘಟಕದಲ್ಲಿ ರಕ್ತದ ದಾಸ್ತಾನು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಮಾರ್ಚ್‌ ತಿಂಗಳ ಆರಂಭದಲ್ಲಿ ನಡೆಸಿದ ಒಂದೆರಡು ರಕ್ತದಾನ ಶಿಬಿರಗಳಿಂದ ಸಂಗ್ರಹಿಸಿದ ರಕ್ತದಲ್ಲಿ ಈಗ ಕೇವಲ 124 ಯೂನಿಟ್‌ ರಕ್ತ ಮಾತ್ರ ಜಿಲ್ಲಾ ರಕ್ತನಿಧಿ  ಕೇಂದ್ರದಲ್ಲಿ ದಾಸ್ತಾನು ಇದೆ. ಇಷ್ಟು ರಕ್ತ ಕೇವಲ ಒಂದು ವಾರದ ಬೇಡಿಕೆ ಈಡೇರಿಸಲಿದ್ದು, ಮುಂದಿನ ದಿನಗಳಲ್ಲಿ ರಕ್ತದ ಅಗತ್ಯ ಇರುವ ರೋಗಿಗಳು ರಕ್ತ ಸಿಗದೆ ತೊಂದರೆಗೊಳಗಾಗುವ ಭೀತಿ ಎದುರಾಗಿದೆ.

Advertisement

ರಕ್ತ ಯಾರಿಗೆ ಬಳಕೆ?: ಜಿಲ್ಲಾ ರಕ್ತ ವಿದಳನ ಘಟಕ ಸಂಗ್ರಹಿಸುವ ರಕ್ತದಲ್ಲಿ ಬಹುಪಾಲು ರಕ್ತ ಹೆರಿಗೆ, ಗರ್ಭಿಣಿಯರಿಗೆ, ಅತಿಯಾದ ರಕ್ತಹೀನತೆಯಿಂದ ಬಳಲುವವರಿಗೆ ಬಳಕೆಯಾಗುತ್ತದೆ. ಇನ್ನು ಸ್ವಲ್ಪ ಪ್ರಮಾಣದಲ್ಲಿ ಶಸ್ತ್ರಚಿಕಿತ್ಸೆ, ಥಲಸೇಮಿಯಾ (ಮಕ್ಕಳ ಕಾಯಿಲೆ), ಡಯಾಲಿಸಿಸ್‌, ಎಆರ್‌ಟಿ ರೋಗಿಗಳಿಗೆ ವಿತರಿಸಲಾಗುತ್ತದೆ. ಹೀಗೆ ಪ್ರತಿದಿನ ಅಂದಾಜು 10 ರಿಂದ 15 ಯೂನಿಟ್‌ ರಕ್ತ ಅಗತ್ಯವಿದೆ. ಈಗ ಉದ್ಭವಿಸುವ ರಕ್ತದ ಕೊರತೆ ಮುಂದಿನ ದಿನಗಳಲ್ಲಿ ಇಂಥ ರೋಗಿಗಳನ್ನು ಕಾಡುವ ಆತಂಕವಿದೆ. ಜಿಲ್ಲಾ ರಕ್ತ ವಿದಳನ ಘಟಕಕ್ಕೆ ಉಂಟಾಗುವ ರಕ್ತದ ಕೊರತೆ ನೀಗಿಸಲು ಜಿಲ್ಲಾಡಳಿತ ಈಗಲೇ ಎಚ್ಚೆತ್ತು ಪೂರಕ ಕ್ರಮ ಕೈಗೊಳ್ಳಬೇಕಾಗಿದೆ. ರಕ್ತದಾನಿಗಳು ಸಹ ಸ್ವಯಂಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಿ ರಕ್ತದಾನ ಮಾಡಬೇಕಾಗಿದೆ.

ರಕ್ತದಾನ ಶಿಬಿರಗಳನ್ನು ಬಂದ್‌ ಮಾಡಿರುವುದರಿಂದ ರಕ್ತದ ಕೊರತೆ ಉಲ್ಬಣಿಸಿದೆ. ಪ್ರಸ್ತುತ ರಕ್ತದ ಅಗತ್ಯವಿರುವ ರೋಗಿಗಳ ಪೋಷಕರು ಇಲ್ಲವೇ ಕುಟಂಬದವರ ಆಪ್ತಸಮಾಲೋಚನೆ ಮಾಡಿ ಅವರಿಂದಲೇ ಎರವಲು ರಕ್ತ ಪಡೆಯಲಾಗುತ್ತಿದೆ. ಆದರೆ, ಇದು ರಕ್ತದ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸುವುದಿಲ್ಲ. ಆದ್ದರಿಂದ ಆರೋಗ್ಯವಂತ ಯುವಕ-ಯುವತಿಯರು, ಸಂಘ-ಸಂಸ್ಥೆಯವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಹಕಾ ನೀಡಬೇಕು.  –ಡಾ| ಬಸವರಾಜ ತಳವಾರ, ಅಧಿಕಾರಿ, ಜಿಲ್ಲಾ ರಕ್ತ ವಿದಳನ ಘಟಕ.

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next