ಬಾಳ ಗ್ರಾ.ಪಂ. ಆದಾಯದಲ್ಲಿ ಶ್ರೀಮಂತ ಪಂಚಾಯತ್ ಆದರೂ, ಮೂಲ ಸೌಲಭ್ಯಗಳಿಲ್ಲದೆ ಬಡವಾಗಿದೆ. ಈ ಗ್ರಾಮದಲ್ಲಿ ಸುವ್ಯವಸ್ಥಿತ ರಸ್ತೆ ನಿರ್ಮಾಣ ಪ್ರಥಮ ಆದ್ಯತೆಯಾಗಬೇಕಿದೆ. ಅಂತೆಯೇ ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಿದೆ.
ಸುರತ್ಕಲ್: ಬಾಳ ಗ್ರಾಮ ಮಂಗಳೂರು ಮಹಾನಗರ ಪಾಲಿಕೆಯ ಗಡಿ ಭಾಗದಲ್ಲಿದೆ. ಇಲ್ಲಿ ಬೃಹತ್ ಮಿನಿರತ್ನ ಕಂಪೆನಿಗಳಾದ ಎಂಆರ್‌ಪಿಎಲ್, ಎಚ್‌ಪಿಸಿಎಲ್, ಮತ್ತಿತರ ಕಂಪೆನಿಗಳು ನೆಲೆ ಕಂಡಿವೆ. ಆದರೆ ದೊಡ್ಡ ಕಂಪೆನಿಗಳಿಗೆ ಬರುವ ಸಾವಿರಾರು ವಾಹನಗಳಿಗೆ ಬೇಕದ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿಲ್ಲ. ಹಳೆಯ ರಸ್ತೆಯಲ್ಲೇ ಓಡಾಡುವಂತಾಗಿದೆ.
ಸುರತ್ಕಲ್ ಸಮೀಪ ಪಂಚಾಯತ್ ವ್ಯಾಪ್ತಿಯ ಕಂಪೆನಿ ಇರುವ ಪ್ರದೇಶ ಧೂಳುಮಯವಾಗಿರುವುದು ಇನ್ನೊಂದು ಸಮಸ್ಯೆ. ಶ್ರೀಮಂತ ಪಂಚಾಯತ್ ಎಂದು ಪರಿಗಣಿಸಿದರೂ ಚತುಷ್ಪಥ ರಸ್ತೆ ಆಗದಿವುದಕ್ಕೆ ಕಂಪೆನಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ತಮ್ಮ ಸಂಸ್ಥೆಯೊಳಗೆ ಉತ್ತಮ ರಸ್ತೆ ಮಾಡಿಕೊಂಡ ಕಂಪೆನಿಗಳು ಸಾರ್ವಜನಿಕರು ಓಡಾಟ ನಡೆಸುವ ರಸ್ತೆಯನ್ನು ಮರೆತುಬಿಟ್ಟಿವೆ. ಸರಕಾರವೋ ಅಥವಾ ಕಂಪೆನಿಗಳು ರಸ್ತೆ ಒದಗಿಸಬೇಕೋ ಎಂಬ ಗೊಂದಲು ಸಾರ್ವಜನಿಕರಲ್ಲೂ ಇದೆ.
ಪಾರ್ಕಿಂಗ್ ಸಮಸ್ಯೆ:
ನಿತ್ಯ ನೂರಾರು ಟ್ಯಾಂಕರ್‌ಗಳು ಇಲ್ಲಿ ಓಡಾಡುತ್ತವೆ. ಇವುಗಳ ಒತ್ತಡಕ್ಕೆ ರಸ್ತೆಗಳು ಗುಂಡಿ ಬಿದ್ದಿವೆ. ವಾಹನ ದಟ್ಟಣೆ ತಡೆದುಕೊಳ್ಳುವ ಶಕ್ತಿ ಈಗಿನ ಏಕಮುಖ ಸಂಚಾರದ ರಸ್ತೆಗಿಲ್ಲ. ಇಲ್ಲಿ ಬರುವ ವಾಹನಗಳಿಗೆ ಕಂಪೆನಿಗಳು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ರಸ್ತೆ ಬದಿ ಬೀಡು ಬಿಡುತ್ತಿದ್ದು ನಿತ್ಯ ಓಡಾಟ ನಡೆಸುವವರಿಗೆ ಸಮಸ್ಯೆಯಾಗಿದೆ. ನಿಂತ ವಾಹನಗಳಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿ, ಜೀವ ಹಾನಿಯಾಗಿವೆ. ಎಲ್ಲೆಂದರಲ್ಲಿ ಲಾರಿಗಳು, ಟ್ಯಾಂಕರ್‌ಗಳು ಬೀಡು ಬಿಡುತ್ತಿದ್ದು, ಸಮೀಪದಲ್ಲೇ ರಿಪೇರಿ ಮಾಡುವ ಕೆಲಸವೂ ನಡೆಯುತ್ತದೆ. ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ಘನ ವಾಹನಗಳು ಇಳಿದು ನಿಲ್ಲಿಸಿ ಓಡಿಸುವ ಕಾರಣ ಧೂಳುಮಯ ವಾತವಾರಣ ಇಲ್ಲಿ ಕಂಡುಬರುತ್ತದೆ. ಮುಖ್ಯ ರಸ್ತೆಯಲ್ಲಿ ಬೃಹತ್ ಹೊಂಡಗಳಾಗಿ ದ್ವಿಚಕ್ರ ಸವಾರರು ಸ್ವಲ್ಪ ಎಡವಟ್ಟು ಮಾಡಿಕೊಂಡರೂ ಅಪಘಾತ ಖಚಿತ.
ಇತರ ಸಮಸ್ಯೆ ಗಳೇನು? :
- ಜ ಕಾನ ಬಾಳ ರಸ್ತೆಯ ಉದ್ದಕ್ಕೂ ಚರಂಡಿ ವ್ಯವಸ್ಥೆಯ ಅಗತ್ಯವಿದೆ.
- ಬೃಹತ್ ವಾಹನಗಳ ಓಡಾಟವಿರುವುದರಿಂದ ಸುಸಜ್ಜಿತ ಫುಟ್‌ಪಾತ್ ಬೇಕಿದೆ.
- ಸುತ್ತಮುತ್ತ ಕಂಪೆನಿಗಳಿಂದ ಹೊರ ಸೂಸುವ ದುರ್ವಾಸನೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಅಗತ್ಯ
- ನೀರಿನ ಸಂಗ್ರಹಕ್ಕೆ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಬೇಕಿದೆ
- ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕೃತ ಪಾರ್ಕಿಂಗ್ ಸೌಲಭ್ಯವನ್ನು ಕಂಪೆನಿಗಳು ನೀಡಬೇಕಿದೆ.
- ರಸ್ತೆ ಬದಿ ವಾಹನ ನಿಲ್ಲಿಸುವ, ರಿಪೇರಿ ಮಾಡುವ ಕಾರ್ಯವನ್ನು ನಿಲ್ಲಿಸಲು ಕ್ರಮ ಕೈಗೊಳ್ಳ ಬೇಕಿದೆ.
- ಬಾಡಿಗೆ ಮನೆ ನಿವಾಸಿಗಳು ಎಸೆಯುವ ತ್ಯಾಜ್ಯಕ್ಕೆ ಸೂಕ್ತ ವ್ಯವಸ್ಥೆಯಾಗಬೇಕಿದೆ.
-ಲಕ್ಷ್ಮೀನಾರಾಯಣ ರಾವ್