Advertisement

ಆರೋಗ್ಯ ಸೌಲಭ್ಯಕ್ಕೆ ಕಾರ್ಮಿಕರ ಆಗ್ರಹ

11:19 AM Sep 14, 2017 | Team Udayavani |

ವಾಡಿ: ಅನಾರೋಗ್ಯ ಪೂರಿತ ಪರಿಸರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಒದಗಿಸುವಲ್ಲಿ ಕಂಪನಿ ಆಡಳಿತ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ, ಎಸಿಸಿ ಸಿಮೆಂಟ್‌ ಕಂಪನಿಯ ತಾಜ್‌ ಗ್ರೂಪ್‌ ಸಂಸ್ಥೆಯ ದಿನಗೂಲಿ ಕಾರ್ಮಿಕರು ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಕಂಪನಿ ನ್ಯೂ ಪ್ಲಾಂಟ್ ಮುಖ್ಯ ದ್ವಾರದ ಬಳಿ ಬೆಳಗ್ಗೆ ಜಮಾಯಿಸಿದ್ದ ಪ್ಯಾಕಿಂಗ್‌ ಹೌಸ್‌ ವಿಭಾಗದ ನೂರಾರು ಜನ ದಿನಗೂಲಿ ಕಾರ್ಮಿಕರು, ಎಸಿಸಿ ಕಂಪನಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಸಿಸಿಯ ನಾಲ್ಕನೇ ಘಟಕದ ಸಿಮೆಂಟ್‌ ಪ್ಯಾಕಿಂಗ್‌ ಹೌಸ್‌
ಕಾರ್ಮಿಕರನ್ನು ಕಂಪನಿ ಅತ್ಯಂತ ಕೀಳಾಗಿ ಕಾಣುತ್ತಿದೆ. ಕಾರ್ಮಿಕರಿಗೆ ನೀಡಬೇಕಾದ ಕಾನೂನು ಬದ್ಧ ವಿವಿಧ ಸೌಲಭ್ಯಗಳಿಂದ ವಂಚಿಸಿ ಮೋಸ ಮಾಡುತ್ತಿದೆ ಎಂದು ದೂರಿದರು.

ಕಳೆದ ಹಲವು ವರ್ಷಗಳಿಂದ ಕಂಪನಿಯೇ ಕಾರ್ಮಿಕರ ಇಎಸ್‌ಐ ಶುಲ್ಕ ಕಟ್ಟುತ್ತಿತ್ತು. ಈಗ ಏಕಾಏಕಿ ನಿಲ್ಲಿಸಿದೆ. ಎಸಿಸಿ ಆಧೀನದ ಆಸ್ಪತ್ರೆಯಲ್ಲಿ
ನೀಡಲಾಗುತ್ತಿದ್ದ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಸಿದುಕೊಳ್ಳಲಾಗಿದೆ. ಕಾರ್ಖಾನೆಯೊಳಗೆ ಕಾರ್ಮಿಕರಿಗೆ ಅಪಘಾತವಾದರೆ ಅಥವಾ ಆರೋಗ್ಯ ಹದಗೆಟ್ಟರೆ ಎಸಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕಾರ್ಖಾನೆ ಹೊರಗೆ ಆರೋಗ್ಯ ಹದಗೆಟ್ಟರೆ ಕಂಪನಿ ತನ್ನ ಜವಾಬ್ದಾರಿ ಕಳಚಿಕೊಳ್ಳುತ್ತದೆ. ಖಾಸಗಿ ಆಸ್ಪತ್ರೆಯತ್ತ ಬೆರಳು ಮಾಡುತ್ತದೆ. ಕಾರ್ಮಿಕರ ಆರೋಗ್ಯದೊಂದಿಗೆ ಎಸಿಸಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು. 

ಕೆಲಸದ ಜಾಗದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಅನ್ಯಾಯ ಪ್ರಶ್ನಿಸಿದ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಮಾನಸಿಕ
ಹಿಂಸೆಯಲ್ಲಿ ನಾವು ಕೆಲಸ ಮಾಡುವಂತಾಗಿದೆ. ಕಾರ್ಮಿಕರಿಗೆ ಇಎಸ್‌ಐ ಹಾಗೂ ಎಸಿಸಿ ಆರೋಗ್ಯ ಸೌಲಭ್ಯ ಖಾತ್ರಿಪಡಿಸುವ ವರೆಗೂ ಹೋರಾಟ
ಮುಂದುವರಿಸುತ್ತೇವೆ ಎಂದು ಮುಖಂಡ ಶರಣಬಸು ಸಿರೂರಕರ, ಅನೀಲ ಶಿಬೊ ಸೇರಿದಂತೆ ನೂರಾರು ಕಾರ್ಮಿಕರು ಎಚ್ಚರಿಸಿದರು.

ಕೋಟ್ಯಂತರ ರೂ. ನಷ್ಟ
ಕಂಪನಿಯಿಂದ ಯಾವೊಬ್ಬ ಕಾರ್ಮಿಕನಿಗೂ ಅನ್ಯಾಯವಾಗಿಲ್ಲ. ಅನ್ಯಾಯವಾಗಿದ್ದರೆ ಶಾಂತಿ, ಸಮಾಧಾನದಿಂದ ಪ್ರಶ್ನಿಸಬೇಕು. ಆದರೆ, ಇವರ ಹೋರಾಟ ಹುಡುಗಾಟದಿಂದ ಕೂಡಿದೆ. ಎರಡು ದಿನ ಪ್ಯಾಕಿಂಗ್‌ ಹೌಸ್‌ ಘಟಕದ ಕೆಲಸವನ್ನೇ ಸ್ಥಗಿತಗೊಳಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದರಿಂದ
ಕಂಪನಿಗೆ ಕೋಟ್ಯಂತರ ರೂ. ನಷ್ಟವಾಗಿದೆ. ಎಸಿಸಿ ಆಸ್ಪತ್ರೆಯ ವೈದ್ಯರ ಮೇಲೆ ದಾಳಿ ಪ್ರಕರಣಗಳು ನಡೆದಿದ್ದು, ವೈದ್ಯರು ಕೆಲಸಬಿಟ್ಟು ಹೋಗುತ್ತಿದ್ದಾರೆ. ಕಾರ್ಮಿಕರನ್ನು ತಪ್ಪು ದಾರಿಗೆಳೆದು ನಷ್ಟಕ್ಕೆ ಕಾರಣವಾದ ಕಾರ್ಮಿಕರ ಮೇಲ್ವಿಚಾರಕ ಶರಣಬಸು ಎನ್ನುವಾತನಿಗೆ ನೋಟಿಸ್‌ ನೀಡಿ ಎರಡು ದಿನ ಕೆಲಸದಿಂದ ವಜಾ ಮಾಡಿದ್ದೇವೆ. ಈ ಕಾರಣಕ್ಕೆಅವರು ಕಂಪನಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಜೆ.ಜೆ.ಎಸ್‌.ಪವಾರ, ಎಸಿಸಿ ಎಚ್‌ಆರ್‌ ಮುಖ್ಯಸ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next