Advertisement

ವೇತನಕ್ಕಾಗಿ ಕಾರ್ಮಿಕರ ಧರಣಿ

06:12 PM Jan 02, 2020 | Team Udayavani |

ದೊಡ್ಡಬಳ್ಳಾಪುರ: ನಗರದ ಹೊರ ವಲಯದ ಕೈಗಾರಿಕಾ ಪ್ರದೇಶದ ಅಪೇರೆಲ್‌ ಪಾರ್ಕ್‌ನ ಜೀನ್ಸ್‌ ನಿಟ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯಿಂದ ಕಾರ್ಮಿಕರಿಗೆ ಬಲವಂತದ ಒತ್ತಡದ ಕೆಲಸ ಮಾಡಿಸುವುದು,ವೇತನ ಹೆಚ್ಚಿಸದಿರುವುದನ್ನು ಪ್ರತಿಭಟಿಸಿದರೆ, ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಹೊರಹಾಕಿ 3 ತಿಂಗಳ ವೇತನ ನೀಡುತ್ತಿಲ್ಲ. ಇದರಿಂದ ಕಾರ್ಮಿಕರು ತೀವ್ರ ಆರ್ಥಿಕ ಸಮಸ್ಯೆ ಅನುಭವಿಸುವಂತಾಗಿದೆ. ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಬೇಕೆಂದು ನಗರದ ತಾಲೂಕು ಕಚೇರಿ ಆವರಣದಲ್ಲಿ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಜೀನ್ಸ್‌ ನಿಟ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಕೆ.ವೆಂಕಟೇಶ್‌, ಕಂಪನಿಯ ನಿಯಮಗಳನ್ನು ನಾವು ಪಾಲಿಸುತ್ತಾ ಬಂದಿದ್ದೇವೆ. ಆದರೂ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಹೆಚ್ಚಿನ ಕೆಲಸದ ಒತ್ತಡ ಹಾಕ್ತಿದ್ದು,ಮೂರ್‍ನಾಲ್ಕು ಮಂದಿ ಮಾಡುವ ಕೆಲಸವನ್ನು ಒಬ್ಬರೇ ಮಾಡಿ ಎಂದು ಉದ್ದೇಶ ಪೂರ್ವಕವಾಗಿ ಮಾನಸಿಕ ಕಿರುಕುಳ ನೀಡುತ್ತಿದೆ.

ವಿನಾಕಾರಣ 100 ಜನ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಭಾನವಾರ ಹಾಗೂ ರಜಾ ದಿನಗಳಲ್ಲಿಯೂ ಸಹ ಕೆಲಸ ಮಾಡಿ ಎಂದು ಒತ್ತಡ ಹೇರುತ್ತಾರೆ. ಆದರೆ ಇದಕ್ಕಾಗಿ ಹೆಚ್ಚಿನ ವೇತನ ನೀಡುತ್ತಿಲ್ಲ. ಮೂರು ವರ್ಷಗಳಿಂದ ಕಾರ್ಮಿಕರಿಗೆ ವೇತನ ಹೆಚ್ಚಳ,ಹೆಚ್ಚುವರಿ ಭತ್ಯೆ ಯಾವುದನ್ನೂ ನೀಡಿಲ್ಲ.ಇತರೆ ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಿ ಕಾರ್ಮಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾರ್ಮಿಕರನ್ನು ಮೇಲಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ.ಕಂಪನಿಯ ಆಡಳಿತ ಮಂಡಳಿಗೆ ಈ ಬಗ್ಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕಾರ್ಖಾನೆಯ ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗವಿಲ್ಲದೇ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಹಶೀಲ್ದಾರ್‌ ಹಾಗೂ ಉಪವಿಭಾಗಧಿಕಾರಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸ ಬೇಕೆಂದು ಒತ್ತಾಯಿಸಿದರು.

ಆದೇಶ ಪಾಲನೆ ಮಾಡುತ್ತಿಲ್ಲ: ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್‌ ಮಾತನಾಡಿ, ಜೀನ್ಸ್‌ ನಿಟ್‌ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೇ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಸಿಐಟಿಯು ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದನ್ನು ಪರಿಗಣಿಸಿ ಲೇಬರ್‌ ಕಮಿಷನರ್‌ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿದ್ದರೂ, ಪಾಲಿಸದೆ ಕೆಲಸಬಿಡುವಂತೆ ಕಾರ್ಮಿಕರನ್ನು ಒತ್ತಾಯಿಸಿಸುತ್ತಿದ್ದಾರೆ. ಸ್ಥಳೀಯ ಹೊರ ರಾಜ್ಯದ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಹೊರಹಾಕಿ 3 ತಿಂಗಳ ವೇತನವನ್ನು ನೀಡದೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಮುಷ್ಕರದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪ್‌ ಸಿಂಹ,ಜೀನ್ಸ್‌ ನಿಟ್‌ ಪ್ರೈವೇಟ್‌ ಲಿಮಿಟೆಡ್‌ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಪುನೀತ್‌,ಖಜಾಂಚಿ ಅನಂತ್‌ ಗೌಡ, ಭರತ್‌ ಬೋಸ್ಲೆ,ಮನೀಶ್‌ ಶರ್ಮ, ಗೋಪಾಲ್‌ ಕುಮಾರ್‌ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next