ಪುತ್ತೂರು: ಮನೆಯ ಸಿಟೌಟ್‌ನ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮೇಲ್ಛಾವಣಿ ಕುಸಿದು ಬಿದ್ದು ಕಾರ್ಮಿಕ ಗಾಯಗೊಂಡ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಾದಲಾಡಿ ಎಂಬಲ್ಲಿ ಅ 25ರಂದು ಸಂಭವಿಸಿದೆ.
ಅರಿಯಡ್ಕ ಗ್ರಾಮದ ನಿವಾಸಿ ಶೇಖರ್ ಕುಲಾಲ್ (45) ಮೃತಪಟ್ಟವರು. ಘಟನೆಯಲ್ಲಿ ಸಂಜೀವ ಮೊಗೇರ ಗಾಯಗೊಂಡಿದ್ದಾರೆ. ಅರಿಯಡ್ಕ ಗ್ರಾಮದ, ಪಾದಲಾಡಿ ನಿವಾಸಿ ಕಮಲ ಅವರ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ನಡೆಯುತ್ತಿದ್ದು, ಇದರ ಕಾಮಗಾರಿಗೆ ಅ. 25ರಂದು ಸಂಜೀವ ಮೊಗೇರ ಹಾಗೂ ಶೇಖರ್ ಕುಲಾಲ್ ಬಂದಿದ್ದರು.
ಮೇಲ್ಛಾವಣಿ ಕುಸಿದು ಬಿದ್ದು ಶೇಖರ್‌ಕುಲಾಲ್ ಗಂಭೀರವಾಗಿ ಗಾಯಗೊಂಡರು.
ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ದಾರಿ ಮಧ್ಯೆ ಅವರು ಮೃತಪಟ್ಟರು. ಈ ಕುರಿತು ಮೃತರ ಸಹೋದರ ದೂರು ನೀಡಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.