ರಾಯಚೂರು: ಕಾನೂನುಬದ್ಧ ಕಾರ್ಮಿಕ ಕಲ್ಯಾಣ ಮಂಡಳಿ ಉಳಿಸಬೇಕು, ಕಟ್ಟಡ ಉದ್ಯಮವನ್ನು ರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಡಳಿತದ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿ, ದೇಶದ ಕಟ್ಟಡ ನಿರ್ಮಾಣ ವಲಯವು ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯಿàಕರಣ ಬಳಿಕ ಜಾರಿ ಮಾಡಿದ ಸರಕು ಸೇವಾ ತೆರಿಗೆ ನೀತಿಯಿಂದ ತೀವ್ರ ಬಿಕ್ಕಟ್ಟಿಗೆ ಸಿಲುಕಿತ್ತು. ಕೊರೊನಾ ಬಿಕ್ಕಟ್ಟಿಗೆ ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಕೊರೊನಾ ಮುಗಿದ ವರ್ಷ ಕಳೆಯುತ್ತ ಬಂದರೂ ಕಾರ್ಮಿಕರ ಸಂಕಷ್ಟಗಳು ಮಾತ್ರ ಈಡೇರಿಲ್ಲ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾನೂನು 1996 ಹಾಗೂ ಸೆಸ್ ಕಾನೂನನ್ನು ಪುನಃ ಸ್ಥಾಪಿಸಬೇಕು. ಅರ್ಜಿ ಹಾಕಿದ ಎಲ್ಲರಿಗೂ ಕೂಡಲೇ 3,000 ರೂ. ಲಾಕ್‌ಡೌನ್ ನಗದು ಪರಿಹಾರ ಪಾವತಿಸಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಶೈಕ್ಷಣಿಕ ಸಹಾಯಧನ ತಂತ್ರಾಂಶ ಕೂಡಲೇ ಆರಂಭಿಸಿ ಅರ್ಜಿಗಳ ವಿಳಂಬ ವಿಲೇವಾರಿ ನಿಲ್ಲಿಸಬೇಕು. ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಿ ಸಹಜ ಮರಣ ಪರಿಹಾರದ ಮೊತ್ತವನ್ನು 2 ಲಕ್ಷ ರೂ. ಗೆ ಹೆಚ್ಚಿಸಬೇಕು. ಅಪಘಾತ ಮರಣ ಪರಿಹಾರದ ಮೊತ್ತವನ್ನು 10 ಲಕ್ಷ ರೂ. ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ತೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ಜಾರಿಗೊಳಿಸಬೇಕು. ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈದ್ಯಕೀಯ ಅರ್ಜಿಗಳು ಇತ್ಯರ್ಥಗೊಳಿಸಬೇಕು. ರೇಷನ್ ಕಿಟ್, ಟೂಲ್‌ಕಿಟ್, ಸುರಕ್ಷ ಕಿಟ್, ಬೂಸ್ಟರ್‌ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದಿರುವುದು ಹಾಗೂ ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆ ಈ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ನೋಂದಣಿಗೆ ಪ್ರತ್ಯೇಕ ಐಡಿ ಜಾರಿಗೊಳಿಸಬೇಕು. ಕಲ್ಯಾಣ ಮಂಡಳಿಯಲ್ಲಿ ಸಿಐಟಿಯುಗೆ ಕಾರ್ಮಿಕ ಪ್ರಾತಿನಿಧ್ಯ ನೀಡಬೇಕು. ಮಂಡಳಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ಡಿ.ಎಸ್. ಶರಣ ಬಸವ, ಸಿಐಟಿಯು ಜಿಲ್ಲಾಧ್ಯಕ್ಷ ವರಲಕ್ಷ್ಮೀ, ಮುಖಂಡರಾದ ರಂಗಮ್ಮ ಅನ್ವರ್, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಲಕ್ಷ್ಮೀ, ಮುನಿಯಮ್ಮ, ಮಾರೆಮ್ಮ, ತಿಮಲಮ್ಮ, ಬಸಮ್ಮ, ಪುಷ್ಪ, ಪದ್ದಮ್ಮ, ಸುಲೋಚನಾ ಸೇರಿದಂತೆ ಇತರರಿದ್ದರು.