Advertisement

“ದೇಶಾದ್ಯಂತ ಕಾರ್ಮಿಕ ಹಬ್ಬದ ವಾತಾವರಣ’

08:00 PM May 31, 2019 | mahesh |

ಬೆಳ್ತಂಗಡಿ: ಕಾರ್ಮಿಕ ವರ್ಗದ ಜೀವನಾಡಿಯಾಗಿರುವ ಸಿಐಟಿಯು ಹಲವಾರು ತ್ಯಾಗ – ಬಲಿದಾನದ ಮೂಲಕ ಐವತ್ತು ವರ್ಷ ಗಳನ್ನು ಪೂರೈಸಿದ್ದು, ಇಂದಿನಿಂದ ಒಂದು ವರ್ಷ ಕಾರ್ಮಿಕ ವರ್ಗದ ಹಬ್ಬದ ವಾತಾವರಣ ದೇಶಾದ್ಯಂತ ನಡೆಯಲಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌ ಹೇಳಿದರು.

Advertisement

ಬೆಳ್ತಂಗಡಿ ಅಂಬೇಡ್ಕರ್‌ ಭವನದಲ್ಲಿ ನಡೆದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು)ನ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕಾರ್ಮಿಕರು ವರ್ಗಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಅಗತ್ಯ ಎಂದೆಂದಿಗಿಂತಲೂ ಅಗತ್ಯವಿದೆ. ಕೇಂದ್ರ ಸರಕಾರ ಪ್ರತಿ ಕ್ಷಣಕ್ಷಣಕ್ಕೂ ಮಾಲಕರ ಪರವಾದ ಕಾನೂನಿನ ಮೂಲಕ ಕಾರ್ಮಿಕ ವರ್ಗವನ್ನು ಸರ್ವನಾಶ ಮಾಡಲು ಹೊರಟಿದೆ. ಬಿಜೆಪಿ ನೇತೃತ್ವದಲ್ಲಿ ಧರ್ಮ, ದೇವರ ಹೆಸರಿನಲ್ಲಿ ಕಾರ್ಮಿಕ ವರ್ಗವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ.

ಮುಂದಿನ ದಿನಗಳಲ್ಲಿ ಕಾರ್ಮಿಕರು ಗಂಭೀರ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದ್ದು, ಜಾತಿ, ಧರ್ಮ, ಭಾಷೆಯನ್ನು ಮರೆತು ನಾವೆಲ್ಲರೂ ಕಾರ್ಮಿಕರೆಂದು ತಿಳಿದು ಹೋರಾಟಕ್ಕೆ ಮುನ್ನುಗ್ಗುವ ಅಗತ್ಯವಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ, ಸಿಐಟಿಯು ತಾಲೂಕು ಅಧ್ಯಕ್ಷ ಶಿವಕುಮಾರ್‌ ಎಸ್‌.ಎಂ. ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕ ವರ್ಗದ ಸವಲತ್ತುಗಳನ್ನು ಹಿಂಪಡೆಯಲು ಕಾರ್ಮಿಕ ಇಲಾಖೆಯ ಮೂಲಕ ಪ್ರಯತ್ನಿಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಮಿಕ ವರ್ಗದ ಸಂವಿಧಾನಬದ್ಧ ಸವಲತ್ತುಗಳನ್ನು ಉಳಿಸಲು ಸಿಐಟಿಯು ಯಾವುದೇ ತ್ಯಾಗಕ್ಕೂ ಸಿದ್ಧವಿದೆ ಎಂದರು.

ವೇಣೂರು ವಲಯ ಸಿಐಟಿಯು ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯೆ ರೋಹಿಣಿ ಪೆರಾಡಿ, ವೇಣೂರು ವಲಯ ಅಧ್ಯಕ್ಷೆ ಜಯಂತಿ ನೆಲ್ಲಿಂಗೇರಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಹೊಸಂಗಡಿ, ಹೈದಾರ್‌ ಹಳ್ಳಿಮನೆ, ಕೋಶಾಧಿಕಾರಿ ಪ್ರಭಾಕರ್‌ ತೋಟತ್ತಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಶೇಖರ್‌ ಎಲ್‌. ಉಪಸ್ಥಿತರಿದ್ದರು.

ಸಿಐಟಿಯು ಕಚೇರಿಯಿಂದ ಅಂಬೇಡ್ಕರ್‌ ಭವನದ ತನಕ ಮೆರವಣಿಗೆ ಹಾಗೂ ಅಂಬೇಡ್ಕರ್‌ ಭವನದಲ್ಲಿ ಅಧ್ಯಕ್ಷ ಶಿವಕುಮಾರ್‌ ಎಸ್‌.ಎಂ. ಧ್ವಜಾರೋಹಣ ನೆರವೇರಿಸಿದರು. ಮೊದಲಿಗೆ ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ನಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶೇಖರ ಲಾೖಲ ವಂದಿಸಿದರು.

Advertisement

ಐತಿಹಾಸಿಕ ಚಳವಳಿ
ಸಿಐಟಿಯುನ ಸುವರ್ಣ ಮಹೋತ್ಸವ ಕಾರ್ಮಿಕ ವರ್ಗದ ಮಹತ್ವದ ದಿನವಾಗಿದೆ. ಕಳೆದ ಐವತ್ತು ವರ್ಷಗಳಿಂದ ಸಿಐಟಿಯು ಐತಿಹಾಸಿಕ ಚಳವಳಿಗಳನ್ನು ನಡೆಸಿ ಹಲವಾರು ಸೌಲಭ್ಯ, ಸವಲತ್ತುಗಳನ್ನು ಪಡೆದು ಕಾರ್ಮಿಕ ವರ್ಗ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ.
– ಸುನೀಲ್‌ ಕುಮಾರ್‌ ಬಜಾಲ್‌, ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next