Advertisement

Labor department 9 ಲಕ್ಷ ಕಾರ್ಮಿಕ ಮಕ್ಕಳಿಗೆ ಸ್ಕಾಲರ್‌ಶಿಪ್‌: ಸಚಿವ ಸಂತೋಷ್‌ ಲಾಡ್‌

01:20 AM Nov 21, 2023 | Team Udayavani |

ಉಡುಪಿ: ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ರಾಜ್ಯದ ಕಾರ್ಮಿಕ ಮಕ್ಕಳಿಗೆ ವಿತರಿಸಲಾಗುವ ಸ್ಕಾಲರ್‌ಶಿಪ್‌ಗೆ ಈ ಬಾರಿ 13 ಲಕ್ಷ ಅರ್ಜಿಗಳು ಬಂದಿದ್ದು, ಇವುಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸುತ್ತಿದ್ದೇವೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.

Advertisement

ಮಣಿಪಾಲದಲ್ಲಿರುವ ಜಿ.ಪಂ.ನ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರಕಾರದ ಅಧಿಕಾರದ ಅವಧಿಯಲ್ಲಿ ರಾಜ್ಯದ ಮೂರು ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗಿತ್ತು. ಕಾಂಗ್ರೆಸ್‌ ಆಡಳಿತಕ್ಕೆ ಬಂದ ಬಳಿಕ ಈಗ ಅದನ್ನು 9 ಲಕ್ಷಕ್ಕೆ ಏರಿಸಲಾಗಿದೆ ಎಂದರು.

ಬಿಜೆಪಿ ಆಡಳಿತದಲ್ಲಿ ಕೋವಿಡ್‌ ಸಂದರ್ಭದ ಕಿಟ್‌ ವಿತರಣೆಯಲ್ಲಿ ಕಾರ್ಮಿಕ ನಿಧಿಯ ದುರ್ಬಳಕೆಯ ಆರೋಪ ಕೇಳಿಬಂದಿದ್ದು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿದ್ದ 13,000 ಕೋಟಿ ರೂ.ನಿಧಿ ಏಕಾಏಕಿ 6,500 ಕೋಟಿ ರೂ.ಗೆ ಇಳಿದಿತ್ತು. ಕೇವಲ 2,500ದಿಂದ 3000 ಕೋಟಿ ರೂ.ಮಾತ್ರ ಸೆಸ್‌ ಸಂಗ್ರಹವಾಗಿತ್ತು. ಅವೈಜ್ಞಾನಿಕವಾಗಿ 39 ಲಕ್ಷ ಕಾರ್ಡ್‌ಗಳನ್ನು ಹೆಚ್ಚುವರಿಯಾಗಿ ಹಂಚಲಾಗಿತ್ತು. ಇದರಲ್ಲಿ ಸಾಕಷ್ಟು ನಕಲಿ ಕಾರ್ಡ್‌ಗಳ ಆರೋಪವೂ ಕೇಳಿಬಂದಿತ್ತು ಎಂದರು.

2008ರಿಂದ ನಿರ್ಮಿಸಿದ ಹೊಸ ಕಟ್ಟಡಗಳ ಜಿಯೋ ಮ್ಯಾಪಿಂಗ್‌ ಮೂಲಕ ಹೆಚ್ಚುವರಿಯಾಗಿ 3,000 ಕೋಟಿ ರೂ. ಸೆಸ್‌ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜಿಯೋ ಮ್ಯಾಪಿಂಗ್‌ ನೆರವಿನಿಂದ ಕೇಂದ್ರ ಸಹಿತ ಕಟ್ಟಡ ನಿರ್ಮಾಣದಾರರು ನೀಡಬೇಕಾದ ಬಾಕಿ ಸೆಸ್‌ ವಸೂಲಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇಶದಲ್ಲಿ ಶೇ.90ರಷ್ಟು ಹಾಗೂ ರಾಜ್ಯದಲ್ಲಿ ಶೇ.85ರಷ್ಟು ಅಸಂಘಟಿತ ಕಾರ್ಮಿಕರಿದ್ದು, ರಾಜ್ಯದಲ್ಲಿ ಸುಮಾರು 1.80 ಕೋಟಿ ಜನರು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿ ಅಸಂಘಟಿತ ವಲಯದಲ್ಲಿದ್ದಾರೆ ಎಂದರು.

Advertisement

ಇ -ಕಾಮರ್ಸ್‌ನಲ್ಲಿ 5 ಲಕ್ಷ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 45ರಿಂದ 50 ಲಕ್ಷ, ಸಿನಿಮಾರಂಗದಲ್ಲಿ 5 ಲಕ್ಷ, ಮನೆಗೆಲಸದಲ್ಲಿ 20 ಲಕ್ಷ ಮಂದಿ ತೊಡಗಿಸಿಕೊಂಡಿದ್ದು ಇವರೆಲ್ಲರೂ ಅಸಂಘಟಿತ ಕ್ಷೇತ್ರದಲ್ಲಿದ್ದಾರೆ ಎಂದರು.

ಕಾರ್ಮಿಕ ಇಲಾಖೆ ಸಂಗ್ರಹಿಸುತ್ತಿರುವ ಸೆಸ್‌ ಆದಾಯದಲ್ಲಿ 1.20 ಕೋಟಿಯಷ್ಟು ಅಸಂಘಟಿತ ಕಾರ್ಮಿಕರನ್ನು ಸಾಮಾಜಿಕ ಭದ್ರತೆ ಯೋಜನೆಗೊಳಪಡಿಸುವ ಗುರಿಯಿದೆ. ಸೆಸ್‌ ಆದಾಯ ಸಂಗ್ರಹ ಹೆಚ್ಚಿದರೆ ಮತ್ತಷ್ಟು ಜನರಿಗೆ ಸೌಲಭ್ಯ ಒದಗಿಸಲಾಗುವುದು. ಇವರಿಗೆ ಯುನಿವರ್ಸಲ್‌ ಕಾರ್ಡ್‌ ಕೊಡಲೂ ಉದ್ದೇಶಿಸಲಾಗಿದೆ ಎಂದರು.

ಇಎಸ್‌ಐ ಆಸ್ಪತ್ರೆಗೆ ಜಾಗ
ಉಡುಪಿ ಜಿಲ್ಲೆಗೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಗಾಗಿ ಜಮೀನನ್ನು ಗುರುತಿಸಿದ್ದು, ಎಲ್ಲ ದಾಖಲೆಗಳ ಸಹಿತ ಮರು ಪ್ರಸ್ತಾವನೆಯನ್ನು ಕೇಂದ್ರ ಕಾರ್ಮಿಕ ಇಲಾಖೆಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಇಎಸ್‌ಐ ಚಂದಾದಾರರಿಗೆ ರೆಫ‌ರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವಾರ್ಷಿಕ 44 ಕೋಟಿ ರೂ. ವ್ಯಯವಾಗುತ್ತಿದೆ. ರಾಜ್ಯದಲ್ಲಿ 19 ಆಸ್ಪತ್ರೆ ಹಾಗೂ ನಾಲ್ಕು ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಿವೆ. ಇವುಗಳಿಗೆ ರಾಜ್ಯ ಸರಕಾರ 450 ಕೋಟಿ ರೂ.ನೀಡಿದೆ ಎಂದು ಸಂತೋಷ್‌ ಲಾಡ್‌ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ನೀಡಿದ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದು ಪಡಿಸಲಾಗುತ್ತಿದೆ. ಟೈಲರ್‌ಗಳಿಗೂ ಸಾಮಾಜಿಕ ಭದ್ರತೆ ಯೋಜನೆ ಒದಗಿಸಲು ಬೇಡಿಕೆಯಿದೆ ಎಂದು ಹೇಳಿದರು.

ಆನ್‌ಲೈನ್‌ ಸೇವಾದಾರರಿಗೆ ಪ್ರತ್ಯೇಕ ಮಸೂದೆ
ಉಡುಪಿ: ಆನ್‌ಲೈನ್‌ ಮೂಲಕ ಆಹಾರ ಪದಾರ್ಥ ಅಥವಾ ಇನ್ಯಾವುದೋ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಮಿಕ ವರ್ಗದ ಶ್ರೇಯಾಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಮಸೂದೆ ಯೊಂದನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಸೋಮವಾರ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಿಗ್ಗಿ, ಅಮೆಜಾನ್‌, ಝೋಮೋಟೊ ಸಹಿತ ಆನ್‌ಲೈನ್‌ ಸೇವಾದಾರರಿಗೆ ಅಗತ್ಯ ಭದ್ರತೆ ಒದಗಿಸಲು ಕಾನೂನು ರೂಪಿಸುತ್ತಿದ್ದೇವೆ. ಇದಕ್ಕೆ ಸ್ಟೇಕ್‌ ಹೋಲ್ಡರ್‌ಗಳಿಂದ ದತ್ತಾಂಶ ಪಡೆದು ನೋಂದಣಿ ಮಾಡಿಸಲಿದ್ದೇವೆ. ರಾಜ್ಯದ 4ರಿಂದ 5 ಲಕ್ಷ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ. ರಾಜಸ್ಥಾನ ಮಾದರಿಯೂ ಇದೆ. ಅದಕ್ಕಿಂತಲೂ ಸುಧಾರಿತ ಕಾನೂನು ತರಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಬಿಜೆಪಿಗೆ ಕೇವಲ 4-5 ಸೀಟು: 2024ರ ಲೋಕಸಭೆ ಚುನಾವಣೆಯ ಅನಂತರದಲ್ಲಿ ಮೋದಿ ಸರಕಾರ ಇರುವುದಿಲ್ಲ. ಇಡೀ ದಕ್ಷಿಣ ಭಾರತದಲ್ಲಿ ಅವರಿಗೆ 4ರಿಂದ 5 ಸೀಟು ಬರಬಹುದು. ಇದಕ್ಕೆ ಕಾರಣವೂ ಹಲವಿದೆ ಮತ್ತು ಬಹಿರಂಗ ಚರ್ಚೆಗೂ ಸಿದ್ಧರಿದ್ದೇವೆ ಎಂದರು.

ಶೀಘ್ರವೇ ನೂತನ ಸಾರಿಗೆ ಮಸೂದೆ
ಮಂಗಳೂರು: ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಅತಿ ಶೀಘ್ರದಲ್ಲಿ ನೂತನ ಸಾರಿಗೆ ಮಸೂದೆ ತರಲಾಗುವುದು ಎಂದು ರಾಜ್ಯ ಕಾರ್ಮಿಕ ಖಾತೆ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.
ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕಾರ್ಮಿಕ ಇಲಾಖೆಯ ಅಧಿಕಾರಿ ಗಳು ಹಾಗೂ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ ನೂತನ ಸಾರಿಗೆ ಮಸೂದೆ ಜಾರಿಗೆ ತರಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಸಾರಿಗೆ ಸಚಿವರ ಜತೆಗೂ ಮಾತುಕತೆ ನಡೆಸಲಾಗಿದೆ. ಇನ್ನು 2-3 ವಾರದೊಳಗೆ ಸಚಿವ ಸಂಪುಟದ ಒಪ್ಪಿಗೆ ಯೊಂದಿಗೆ ಮಸೂದೆ ಬರಲಿದೆ ಎಂದರು.

ಪ್ರಸ್ತುತ ಶೇ.11ರಷ್ಟು ಸಾರಿಗೆ ಸೆಸ್‌ ಸಂಗ್ರಹವಾಗುತ್ತಿದೆ. ಅದರಲ್ಲಿ ಶೇ.27ರಷ್ಟು ಮೊತ್ತವನ್ನು ಪಡೆದು ರಾಜ್ಯಾದ್ಯಂತ ಇರುವ 40-50 ಲಕ್ಷದಷ್ಟು ಸಾರಿಗೆ ವ್ಯವಸ್ಥೆಯ ಕಾರ್ಮಿಕರಿಗೆ (ಗ್ಯಾರೇಜ್‌ ಕಾರ್ಮಿಕರು ಸೇರಿ) ಗುರುತಿನ ಚೀಟಿಯ ಜತೆಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವುದು ಸಹಿತ ಅನೇಕ ಅಂಶಗಳು ನೂತನ ಸಾರಿಗೆ ಮಸೂದೆಯಲ್ಲಿ ಇರಲಿವೆ ಎಂದರು.

ಚಿತ್ರರಂಗದ ಕಾರ್ಮಿಕರಿಗೆ ಭದ್ರತೆ
ಸಿನಿಮಾ ಹಾಲ್‌ಗ‌ಳ ಟಿಕೆಟ್‌ ಮೊತ್ತದಿಂದ ಶೇ.1ರಷ್ಟು ಭಾಗ ಪಡೆದು, ಸರಕಾರದ ಪಾಲು ಸೇರಿಸಿಕೊಂಡು ಚಿತ್ರರಂಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಯೋಜನೆ ಹಾಕಿ ಕೊಂಡಿದ್ದೇವೆ ಎಂದವರು ತಿಳಿಸಿದರು.
ಸಭೆಯಲ್ಲಿ ಕಾರ್ಮಿಕ ಮುಂದಾಳು ವಸಂತ ಶೆಟ್ಟಿ ಮಾತನಾಡಿ, ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ 2 ವರ್ಷಗಳದ್ದು ಬಾಕಿ ಇದೆ. ಅಲ್ಲದೆ, ಅದರ ಮೊತ್ತವನ್ನೂ ಕಡಿಮೆ ಮಾಡಲಾಗಿದೆ. ಕಾರ್ಮಿಕರ ಪಿಂಚಣಿಗೆ 60 ವರ್ಷಕ್ಕಿಂತ ಒಂದು ದಿನ ಮೊದಲು ಅರ್ಜಿ ಹಾಕಿದರೂ ನಂತರ ಅರ್ಜಿ ಹಾಕಲು ಅವಕಾಶ ವಿಲ್ಲದೆ ಪಿಂಚಣಿ ಸಿಗದಂತಾಗಿದೆ ಎಂದರು.

ಬೀಡಿ ಕಾರ್ಮಿಕರ ಸಮಸ್ಯೆ ಕುರಿತು ಮಾತನಾಡಿದ ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ, ಜಿಲ್ಲೆಯಲ್ಲಿ 3 ಲಕ್ಷ ಬೀಡಿ ಕಾರ್ಮಿಕರಿದ್ದು, ಅವರಿಗೆ ತುಟ್ಟಿಭತ್ತೆ ಮತ್ತು ಕನಿಷ್ಠ ಕೂಲಿಯನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಗಮನ ಸೆಳೆದರು. ಇನ್ನೊಂದು ವಾರದೊಳಗೆ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.

ಜಿಲ್ಲಾಸ್ಪತ್ರೆ ವೆನ್ಲಾಕ್‌ ನ ಹೊರಗುತ್ತಿಗೆ ಕಾರ್ಮಿಕರಿಗೆ ಪಿಎಫ್‌, ಇಎಸ್‌ಐ ಸೌಲಭ್ಯ ನೀಡುತ್ತಿಲ್ಲ ಎಂದು ಮುಖಂಡ ಲಾರೆನ್ಸ್‌ ಡಿ’ಸೋಜಾ ತಿಳಿಸಿದರು. ಪ್ರತಿಕ್ರಿಯಿಸಿದ ಸಚಿವ ಲಾಡ್‌, ಗುತ್ತಿಗೆದಾರರಿಗೆ ಈ ಕುರಿತು ಕಾರಣ ಕೇಳಿ ನೋಟಿಸ್‌ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಮೊಹಿಸೀನ್‌, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ಭಾರತಿ ಡಿ., ಅಪರ ಕಾರ್ಮಿಕ ಆಯುಕ್ತ ಮಂಜುನಾಥ್‌, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ ಅಪರ ನಿರ್ದೇಶಕ ನಂಜಪ್ಪ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿದ್ದರು.

ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್‌ ಕಾರ್ಡ್‌
ಮಂಗಳೂರು: ಅಸಂಘಟಿತ ಕಾರ್ಮಿಕರಿಗೆ ಯುನಿವರ್ಸಲ್‌ ಕಾರ್ಡ್‌ ತರುವ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಹೊಸ ಕಾಯ್ದೆ ಜಾರಿಗೊಳಿಸುವ ನಿರ್ಧಾರ ಸರಕಾರದ ಮುಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.

ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನಕ್ಕೆ ಸೋಮವಾರ ಭೇಟಿ ನೀಡಿ ಕಾರ್ಯಕರ್ತರ ಜೊತೆ ಅವರು ಮಾತನಾಡಿದರು.
ವಾಣಿಜ್ಯ ಸಾರಿಗೆ ಇಲಾಖೆಯಲ್ಲಿ ಪರವಾನಗಿ ಹೊಂದಿವವರಿಗೆ, ಚಾಲಕರು, ಕ್ಲೀನರ್‌, ಮೆಕ್ಯಾನಿಕಲ್‌ ಕೆಲಸಗಾರರು ಸೇರಿದಂತೆ ಸುಮಾರು 50 ಲಕ್ಷ ಮಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಜನವರಿ-ಫೆಬ್ರವರಿ ಒಳಗಾಗಿ ಟ್ರಾನ್ಸ್‌ಪೊàರ್ಟ್‌ ಬೋರ್ಡ್‌ ರಚಿಸುತ್ತೇವೆ. ಹೆಚ್ಚು ಸೆಸ್‌ ಸಂಗ್ರಹವಾದರೆ ಟೈಲರ್‌, ನೇಕಾರರು, ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲಕರವಾಗಲಿದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next