ಬೆಂಗಳೂರು: ಐಷಾರಾಮಿ ಫೆರಾರಿ ಕಾರು ಇಟ್ಟುಕೊಂಡ ವರು, ದೊಡ್ಡ ಜಮೀನ್ದಾರರು, ಉಪನ್ಯಾಸಕರು, ಹೆಚ್ಚು ಜಿಎಸ್‌ಟಿ ಪಾವತಿಸುವವರೂ; ಕಾರ್ಮಿಕರ ಹೆಸರಲ್ಲಿ ನೋಂದಾಯಿಸಿಕೊಂಡು ಕಾರ್ಮಿಕ ಕಾರ್ಡ್ ಪಡೆದುಕೊಂಡಿದ್ದಾರೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 51 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 3.54 ಲಕ್ಷ ಅನರ್ಹ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಇದನ್ನು ಪತ್ತೆ ಹಚ್ಚಲು ರಾಜ್ಯಾ ದ್ಯಂತ ಆಡಿಟ್ ನಡೆಸಿದಾಗ, ಹಾವೇರಿ ಜಿಲ್ಲೆಯೊಂದರಲ್ಲೇ 2.70 ಲಕ್ಷ ಅನರ್ಹ ಕಾರ್ಮಿಕರು ನೋಂದಾಯಿಸಿಕೊಂಡಿರುವುದು ತಿಳಿದುಬಂತು ಎಂದರು.
ಅನರ್ಹ ಕಾರ್ಮಿಕರನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರತಿ ಜಿಲ್ಲೆಗೆ ಸರಾಸರಿ 2ರಿಂದ 3 ಲಕ್ಷ ಕಾರ್ಡುದಾರರು, ಪ್ರತಿ ತಾಲೂಕಿಗೆ 30 ಸಾವಿರ ಸಾವಿರ ಕಾರ್ಡುದಾರರಿದ್ದಾರೆ.
ಅನರ್ಹ ನೋಂದಣಿಗಳನ್ನು ರದ್ದುಪಡಿಸಿದ ಬಳಿಕ, ಈಗ 46 ಲಕ್ಷ ಕಾರ್ಡುದಾರರಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ನೋಂದಣಿಗಳನ್ನು ಪರಿಶೀಲಿಸಿ ಅನರ್ಹರನ್ನು ಗುರುತಿಸುವ ಕೆಲಸಕ್ಕೆ ಸಮಯ ಬೇಕಾಗುತ್ತದೆ. ನಮ್ಮಲ್ಲಿ ಸಿಬಂದಿ ಕೊರತೆ ಇರುವುದರಿಂದ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳ ಮೂಲಕ ಪತ್ತೆಕಾರ್ಯ ನಡೆಸಲಾಗುತ್ತಿದೆ. 6-7 ತಿಂಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಸಚಿವರು ಹೇಳಿದ್ದೇನು?
-ಐಷಾರಾಮಿ ಕಾರು ಮಾಲಕರು, ಜಮೀನ್ದಾರರು, ಗರಿಷ್ಠ ಜಿಎಸ್‌ಟಿ ಪಾವತಿದಾರರಲ್ಲೂ ಕಾರ್ಮಿಕ ಕಾರ್ಡ್
-ಒಟ್ಟು 51 ಲಕ್ಷ ಮಂದಿ ನೋಂದಣಿ, 3.54 ಲಕ್ಷ ಅನರ್ಹರ ಪತ್ತೆ, ಪ್ರಸ್ತುತ ಸಂಖ್ಯೆ 46 ಲಕ್ಷ ಕಾರ್ಡ್‌ದಾರರಿಗೆ ಇಳಿಕೆ