Advertisement

ಲ್ಯಾಬ್‌ ಸಂಖ್ಯೆ 82ಕ್ಕೇರಿಕೆ: ಸಚಿವ ಕೋಟ

11:56 PM Jul 08, 2020 | Sriram |

ಉಡುಪಿ: ರಾಜ್ಯದಲ್ಲಿ ಕೋವಿಡ್‌ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಲ್ಯಾಬ್‌ ಮಾತ್ರ ಇತ್ತು. ಆದರೆ ಈ ಲ್ಯಾಬ್‌ನೊಂದಿಗೆ ರಾಜ್ಯದಲ್ಲಿನ ಕೋವಿಡ್‌ ಪರೀಕ್ಷಾ ಲ್ಯಾಬ್‌ಗಳ ಸಂಖ್ಯೆ 82ಕ್ಕೇರಿದೆ ಎಂದು ರಾಜ್ಯದ ಧಾರ್ಮಿಕ ದತ್ತಿ ಮತ್ತು ಬಂದರು, ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್‌-19 ಸರಕಾರಿ ಪರೀಕ್ಷಾ ಲ್ಯಾಬ್‌ನ್ನು ಶ್ರೀನಿವಾಸ ಪೂಜಾರಿ ಬುಧವಾರ ಉದ್ಘಾಟಿಸಿ ಮಾತನಾಡಿದರು.

1,390ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣ
ಜಿಲ್ಲೆಯಲ್ಲಿ ಮೊದಲು ಟೆಸ್ಟಿಂಗ್‌ಗಾಗಿ ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳನ್ನು ಅವಲಂಬಿಸಬೇಕಿತ್ತು. ಈಗ ಇಲ್ಲಿಯೇ ಲ್ಯಾಬ್‌ ಆರಂಭಿಸಿರುವುದರಿಂದ ಇನ್ನು ಮುಂದೆ ಇಲ್ಲಿಯೇ ಶೀಘ್ರದಲ್ಲಿ ವರದಿ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 1,390ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಬಂದಿದ್ದು, ಅದರಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ 1,100 ಮೀರಿದೆ. ಹೊರ ರಾಜ್ಯ, ದೇಶಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವವರಿಗಾಗಿ, ಇಲ್ಲಿ ಲ್ಯಾಬ್‌ ಆರಂಭಿಸಬೇಕಾದ ಆವಶ್ಯಕತೆ ಮನಗಂಡು ಮುಖ್ಯಮಂತ್ರಿಗಳು ಲ್ಯಾಬ್‌ನ್ನು ಉಡುಪಿ ಜಿಲ್ಲೆಗೆ ವಿಶೇಷವಾಗಿ ಮಂಜೂರು ಮಾಡಿದ್ದಾರೆ ಎಂದು ಸಚಿವ ಕೋಟ ತಿಳಿಸಿದರು.

ಜಿಲ್ಲಾಡಳಿತಕ್ಕೆ ಮೆಚ್ಚುಗೆ
ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಕುರಿತಂತೆ ಉಡುಪಿ ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಮತ್ತು ವಿಶೇಷವಾಗಿ ಜಿಲ್ಲಾಧಿಕಾರಿಗಳಿಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶ್ರೀನಿವಾಸ ಪೂಜಾರಿ ಹೇಳಿದರು.

ಮೊದಲ ಆ್ಯಂಬುಲೆನ್ಸ್‌
ಮಾನಿಟರಿಂಗ್‌ ಸಿಸ್ಟಮ್‌
ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗದಂತೆ ರೂಪಿಸಿರುವ ಆ್ಯಂಬುಲೆನ್ಸ್‌ ಮಾನಿಟರಿಂಗ್‌ ಸಿಸ್ಟಂ ಯೋಜನೆ ಯನ್ನು ಶಾಸಕ ಸುನೀಲ್‌ ಕುಮಾರ್‌ ಉದ್ಘಾಟಿಸಿ ದರು. ಈ ಯೋಜನೆಯಡಿ ಜಿಲ್ಲೆಯ ಎಲ್ಲ ಸರಕಾರಿ ಆ್ಯಂಬುಲೆನ್ಸ್‌ಗಳಿಗೆ ಜಿ.ಪಿಎಸ್‌. ಅಳವಡಿಸಿದ್ದು, ಇವುಗಳು ಯಾವ ಸ್ಥಳದಲ್ಲಿವೆ ಎಂಬ ಮಾಹಿತಿ ಬೆರಳ ತುದಿಯಲ್ಲಿಯೇ ದೊರೆಯಲಿದೆ. ಇದರಿಂದ ಕೋವಿಡ್‌ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬಕ್ಕೆ ಆಸ್ಪದ ನೀಡದಂತೆ ಸಮೀಪದ ಆ್ಯಂಬುಲೆನ್ಸ್‌ ಬಳಸಿಕೊಳ್ಳಬಹುದಾಗಿದೆ. ರಾಜ್ಯದಲ್ಲಿಯೇ ಈ ಯೋಜನೆ ಪ್ರಥಮವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ , ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ, ಕೋವಿಡ್‌-19 ಜಿಲ್ಲಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌
ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಬೆಡ್‌ಗಳ ಕುರಿತು ಮಾಹಿತಿ ನೀಡಲು ರೂಪಿಸಿರುವ ಬೆಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂನ್ನು ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು. ಈ ಯೋಜನೆಯ ಪ್ರಕಾರ ಜಿಲ್ಲೆಯಲ್ಲಿನ ಕೋವಿಡ್‌ ರೋಗಿಗೆ ಸಮೀಪದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ, ಏನು ಅಗತ್ಯ ಸೌಲಭ್ಯಗಳಿವೆ ಎಂಬ ಮಾಹಿತಿ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next