ಕಲಬುರಗಿ: ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ಪತ್ತೆ ಪ್ರಯೋಗಾಲಯ ಆರಂಭ ನನೆಗುದಿಗೆ ಬಿದ್ದಿರುವ ಕುರಿತು ಸಂಸದ ಡಾ| ಉಮೇಶ್ ಜಾಧವ್ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪ್ರಯೋಗಾಲಯ ಸ್ಥಾಪನೆ ಕುರಿತು ದೆಹಲಿಯ ಕಾರ್ಮಿಕ ಮಂತ್ರಾಲಯ ಸೇರಿದಂತೆ ಇನ್ನಿತರರೊಂದಿಗೆ ನಡೆಸಲಾದ ಪತ್ರ ವ್ಯವಹಾರಗಳನ್ನು ಪರಿಶೀಲಿಸಿದರು.
ಜೂ.30ರೊಳಗೆ ಲ್ಯಾಬ್ ಆರಂಭವಾಗಬೇಕಿತ್ತು. ಆದರೆ, ಇನ್ನೂ ಯಾಕೆ ಶುರುವಾಗಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕ ಡಾ| ಇ.ಎಲ್.ನಾಗರಾಜ ಹಾಗೂ ವೈದ್ಯರನ್ನು ಸಂಸದರು ಪ್ರಶ್ನಿಸಿದರು. ಆಗ ಅಧಿಕಾರಿಗಳು ಕೊಠಡಿಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಯೋಗಾಲಯಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ, ಆರ್‌ಟಿ-ಪಿಸಿಆರ್ ಯಂತ್ರ ಸೇರಿದಂತೆ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸಲು ಗುತ್ತಿಗೆ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಲಾಕ್ ಡೌನ್, ಫ್ಯಾಕ್ಟರಿಗಳು ಬಂದ್ ಆಗಿವೆ ಎಂಬ ಮತ್ತಿತರ ಸಬೂಬು ಹೇಳುತ್ತಿದ್ದಾರೆ. ಕೇವಲ ಸಣ್ಣ-ಪುಟ್ಟ ಸಾಮಗ್ರಿಗಳಷ್ಟೆ ಪೂರೈಕೆಯಾಗಿವೆ. ಪ್ರಮುಖವಾದ ಆರ್‌ಟಿ-ಪಿಸಿಆರ್ ಯಂತ್ರ ಇನ್ನೂ ಬಂದಿಲ್ಲ. ಈ ಸಂಬಂಧ ದೆಹಲಿಯ ಗುತ್ತಿಗೆ ಸಂಸ್ಥೆಗೆ ಫೋನ್ ಮಾಡಿದರೂ, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಂಸದರ ಗಮನಕ್ಕೆ ತಂದರು.
ಈ ವೇಳೆ ಸ್ಥಳದಲ್ಲೇ ಸಂಸ್ಥೆಯವರಿಗೆ ಫೋನ್ ಮಾಡುವಂತೆ ಸಂಸದರು ಸೂಚಿಸಿದರು. ಆಗ ಫೋನ್ ಮಾಡಿ ಮಾತು ಆರಂಭಿಸುತ್ತಿದ್ದಂತೆ ಕರೆ ಸ್ಥಗಿತಗೊಳಿಸಲಾಯಿತು. ಹೀಗಾಗಿ ಸಂಸದರು, ಕಾರ್ಮಿಕ ಮಂತ್ರಾಲಯದ ಜಂಟಿ ನಿರ್ದೇಶಕಿ ಅನುರಾಧ ಪ್ರಸಾದ ಅವರಿಗೆ ´ೋನ್ ಮಾಡಿ ಪರಿಸ್ಥಿತಿ ವಿವರಿಸಿದರು. ಅಲ್ಲದೇ, ಪ್ರಯೋಗಾಲಯಕ್ಕೆ ಆರ್‌ಟಿ-ಪಿಸಿಆರ್ ಸಾಧನ ಪೂರೈಸದ ಗುತ್ತಿಗೆ ಸಂಸ್ಥೆಯನ್ನು ಕೂಡಲೇ ಬ್ಲಾಕ್ ಲಿಸ್ಟ್‌ಗೆ ಹಾಕುವಂತೆ ಸೂಚಿಸಿದರು.
ಆಗ ಅನುರಾಧ ಪ್ರಸಾದ್, ಈಗಾಗಲೇ ಕರ್ನಾಟಕದ ಕೆಲ ಜಿಲ್ಲೆಗಳು ಪ್ರಯೋಗಾಲಯಕ್ಕೆ ಬೇಕಾದ ಸಾಮಗ್ರಿಗಳನ್ನು ರಾಜ್ಯ ಸರ್ಕಾರದಿಂದಲೇ ಪಡೆದಿವೆ. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಪ್ರಯೋಗಾಲಯದ ಪರಿಕರಗಳನ್ನು ಶೀಘ್ರ ಪಡೆಯುವಂತೆ ಇಎಸ್‌ಐಸಿ ನಿರ್ದೇಶಕ ನಾಗರಾಜ್ ಅವರಿಗೆ ಸೂಚಿಸಿದರು. ಸಂಸದ ಜಾಧವ್ ಅವರು ಇಎಸ್‌ಐ ಅಧಿಕಾರಿಗಳು ಮೂಲಕ ಸ್ಥಳದಲ್ಲೇ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಸಿದ್ಧಪಡಿಸಿ ರವಾನಿಸಿದರು. ಡಾ| ಪ್ರಶಾಂತ, ಡಾ| ರವೀಶ್ ಉಪಸ್ಥಿತರಿದ್ದರು.