Advertisement

ಹಳಿಯ ಮೇಲೆ ಮಹಿಳೆ

08:57 AM Jul 25, 2019 | Team Udayavani |

ಕೆಲವೊಂದಷ್ಟು ಉದ್ಯೋಗಗಳು ಪುರುಷರಿಗಷ್ಟೇ ಸೀಮಿತ ಎಂಬ ಭಾವನೆ ನಮ್ಮಲ್ಲಿದೆ. ಮಹಿಳೆಯರು ಅದೆಷ್ಟೇ ಸಶಕ್ತರಿದ್ದರೂ, ಕೆಲವು ಕೆಲಸಗಳು ಅವರಿಂದ ಸಾಧ್ಯವಿಲ್ಲ ಎಂಬುದು ಸಮಾಜ ನಂಬಿರುವ ಮಾತು. ಅದನ್ನು ಸುಳ್ಳು ಮಾಡುತ್ತಿದೆ, ಕೇರಳದ ಎಲ್‌ ಟೀಮ್‌. ಇದು, ರೈಲುಗಳ ಸುರಕ್ಷತೆ ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿರುವ ಮೊದಲ ಸಂಪೂರ್ಣ ಮಹಿಳಾ ತಂಡ!

Advertisement

ಬಸ್‌ ಡ್ರೈವರ್‌, ಮೆಟ್ರೋ ಚಾಲಕಿ, ಆಟೋ ಚಾಲಕಿ, ಅಷ್ಟೇ ಅಲ್ಲದೆ ವಿಮಾನ, ಯುದ್ಧ ವಿಮಾನದ ಚಾಲಕಿಯಾಗಿಯೂ ಮಹಿಳೆ ದುಡಿಯುತ್ತಿದ್ದಾಳೆ. ಅಡುಗೆಮನೆಯಿಂದ, ಅಂತರಿಕ್ಷಕ್ಕೆ ಹಾರಿದರೂ; ಕೆಲವೊಂದು ಕೆಲಸಗಳನ್ನು ಆಕೆ ಮಾಡಲಾರಳು ಎಂಬ ಅಭಿಪ್ರಾಯ ಸಮಾಜದ್ದು. ಅಂಥ ಕೆಲಸಗಳಲ್ಲಿ, ರೈಲುಗಳ ಸುರಕ್ಷತೆ-ನಿರ್ವಹಣೆಯೂ ಒಂದು.

ಬೃಹದಾಕಾರದ ರೈಲ್ವೆ ಎಂಜಿನ್‌, ರೈಲ್ವೆ ಬೋಗಿ ಮತ್ತು ಹಳಿಗಳಲ್ಲಿ ಚೂರು ದೋಷ ಕಂಡುಬಂದರೂ ಅದು ಸಾವಿರಾರು ಪ್ರಯಾಣಿಕರ ಜೀವ ತೆಗೆಯಬಹುದು. ಹಾಗಾಗಿ, ಹಳಿಗಳ ಉದ್ದಕ್ಕೂ ಓಡಾಡಿ, ನಿಂತಿರುವ ರೈಲು ಗಾಡಿಯ ಅಡಿ ನುಗ್ಗಿ, ಪ್ರತಿಯೊಂದು ನಟ್‌-ಬೋಲ್ಟ್ಅನ್ನೂ ಗಮನಿಸಿ, ಯಾಂತ್ರಿಕ ದೋಷಗಳನ್ನು ಸರಿಪಡಿಸುವುದು ಪುರುಷರಿಗಷ್ಟೇ ಸಾಧ್ಯ ಅಂತ ಈವರೆಗೂ ನಂಬಲಾಗಿತ್ತು. ಆದರೀಗ ಆ ಮಾತನ್ನು, ಕೇರಳದ ಮಹಿಳೆಯರು ಸುಳ್ಳು ಮಾಡಿದ್ದಾರೆ.

ಎಲ್‌ ಟೀಮ್‌
ಕೇರಳದ ತಿರುವನಂತಪುರದಲ್ಲಿ, ಮಹಿಳೆಯರ ತಂಡವೊಂದು, ರೈಲಿನ ಸುರಕ್ಷತೆ ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿದೆ. 14 ಮಹಿಳೆಯರು ಇರುವ ಈ ತಂಡಕ್ಕೆ ಎಲ್‌ (ಲೇಡಿಸ್‌) ಟೀಮ್‌ ಎಂದು ಹೆಸರು. ತಂಡದ ಮೇಲ್ವಿಚಾರಕಿಯೂ ಮಹಿಳೆಯೇ. ರೈಲಿನ ತಾಂತ್ರಿಕ ವಿಭಾಗದಲ್ಲಿ 12 ವರ್ಷಗಳ ಅನುಭವ ಹೊಂದಿರುವ ಶ್ರೀಕಲಾ ವಿ.ಎಂ., ಈ ತಂಡಕ್ಕೆ ತರಬೇತು ನೀಡಿ, ತಂಡದ ಮುಂದಾಳತ್ವ ವಹಿಸಿದ್ದಾರೆ. ಒಟ್ಟು ನಾಲ್ಕು ರೇಕ್‌ (rಚkಛಿs) ಅಥವಾ 80 ರೈಲು ಬೋಗಿಗಳ ಸಂಪೂರ್ಣ ಸುರಕ್ಷತೆ ಮತ್ತು ನಿರ್ವಹಣೆಯ ಜವಾಬ್ದಾರಿ ಈ ತಂಡದ್ದಾಗಿದೆ. ಪ್ರತಿ 3,500 ಕಿ.ಮೀ.ಗೊಮ್ಮೆ ಎಲ್ಲ ಬೋಗಿಯನ್ನೂ ಸಂಪೂರ್ಣವಾಗಿ ಪರಿಶೀಲಿಸುವುದು ಈ ತಂಡದ ಕೆಲಸ.

ದೈಹಿಕ ಶಕ್ತಿ ಬೇಕು
ರೈಲಿನ ಸಂಪೂರ್ಣ ಯಾಂತ್ರಿಕ‌ ಚೆಕ್‌ಅಪ್‌ ಅಂದ್ರೆ, ಸುಲಭದ ವಿಷಯವಲ್ಲ. ಅತ್ಯಂತ ದೈಹಿಕ ಶ್ರಮವನ್ನು ಬೇಡುವ ಕೆಲಸವದು. ಹಳಿಗಳ ಮೇಲೆ ಓಡಾಡಬೇಕು, ರೈಲು ಎಂಜಿನ್‌, ಕಿಟಕಿ, ಬಾಗಿಲು, ಬೋಗಿ ಹೀಗೆ ಎಲ್ಲಿಯೂ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. “ರೈಲು ಮತ್ತು ಪ್ರಯಾಣಿಕರ ಸಂಪೂರ್ಣ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ, ಲೋಪದೋಷಗಳು ಕಂಡು ಬರದಂತೆ ಕೆಲಸ ಮಾಡುವುದು ನಮ್ಮ ಗುರಿ ಅಂತಾರೆ’ ಮೇಲ್ವಿಚಾರಕಿ ಶ್ರೀಕಲಾ.

Advertisement

ತಂಡದ ಹದಿನಾಲ್ಕು ಸದಸ್ಯೆಯರೂ, ಕಠಿಣ ಕೆಲಸಗಳನ್ನು ಮಾಡುವಲ್ಲಿ ಸಮರ್ಥರಿದ್ದಾರೆ. ಅವರಲ್ಲಿ 28 ವರ್ಷದ ಕೃಷ್ಣೇಂದು, ಅತಿ ಕಿರಿಯರು. ತಾನು ಮಾಡುತ್ತಿರುವ ಕೆಲಸದ ಬಗ್ಗೆ ತನಗೆ ಬಹಳ ಹೆಮ್ಮೆಯಿದೆ ಅನ್ನುವ ಅವರು- ಮೊದಮೊದಲು ನನಗೆ ಬಹಳ ಹೆದರಿಕೆಯಾಗಿತ್ತು. ಆದರೆ, ಈಗ ಸತತ ಅಭ್ಯಾಸದಿಂದ ಎಲ್ಲವನ್ನೂ ಕಲಿತುಕೊಂಡಿದ್ದೇನೆ. ಇಲ್ಲಿಯವರೆಗೆ ಇಂಥ ಕೆಲಸಗಳನ್ನೆಲ್ಲ ಮಹಿಳೆಯರು ಮಾಡಿದ್ದೇ ಇಲ್ಲ. ಇಷ್ಟು ಕಠಿಣ ಕೆಲಸವನ್ನು ನಮ್ಮ ತಂಡ ಮಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ. ನನಗಷ್ಟೇ ಅಲ್ಲ, ನನ್ನ ಕುಟುಂಬಕ್ಕೋ ಬಗ್ಗೆ ಬಹಳ ಹೆಮ್ಮೆ ಇದೆ ಅಂತಾರೆ.

ಕೃಪೆ: ಎನ್‌ಡಿ ಟಿವಿ

Advertisement

Udayavani is now on Telegram. Click here to join our channel and stay updated with the latest news.

Next