Advertisement

­1989-90ರ ಬಿಕಾಂ ಸಹಪಾಠಿಗಳ ಭೇಟಿ ಕಾರ್ಯಕ್ರಮ ನಾಳೆ

04:18 PM Feb 27, 2021 | Ganesh Hiremath |

ಸಾಗರ: ನಗರದ ಪ್ರತಿಷ್ಠಿತ ಎಲ್‌ಬಿ ಕಾಲೇಜಿನ 1989-90ರ ಸಾಲಿನ ಬಿಕಾಂನ ಸುಮಾರು 146 ವಿದ್ಯಾರ್ಥಿಗಳು ಸುಮಾರು 30 ವರ್ಷಗಳ ನಂತರ ಸ್ನೇಹ ಸಮ್ಮಿಲನದ ಮೂಲಕ ಕಾಲೇಜಿನ ದೇವರಾಜ ಅರಸು ಸಭಾಂಗಣದಲ್ಲಿ ಮತ್ತೂಮ್ಮೆ ಒಬ್ಬರನ್ನೊಬ್ಬರು ಭೇಟಿ ಆಗುವ ಕಾರ್ಯಕ್ರಮ ಫೆ. 28ರಂದು ನಡೆಯಲಿದೆ.

Advertisement

ಸಿನೆಮಾಗಳಲ್ಲಿ ಕಾಣುವ ದೃಶ್ಯವೊಂದು ನಿಜವಾಗಿಯೂ ಸಾಕಾರಗೊಳ್ಳಲಿದೆ. ಕಳೆದ ವರ್ಷ ಮಾರ್ಚ್‌ನ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕೇವಲ ಕಾಮರ್ಸ್‌ ವಿಭಾಗದ ಮೂರು ವಿಭಾಗಗಳ ವಿದ್ಯಾರ್ಥಿಗಳು ವಾಟ್ಸ್‌ ಆ್ಯಪ್‌ ಗುಂಪನ್ನು ರೂಪಿಸಿಕೊಂಡರು. ಮಾಹಿತಿಗಳನ್ನು ಸಂಗ್ರಹಿಸುವ ಸಮಯದಲ್ಲಿ ತಮ್ಮೊಂದಿಗೆ ಕಲಿತ ಏಳು ಸಹಪಾಠಿಗಳು ಇಹದ ವ್ಯವಹಾರವನ್ನೇ ಮುಗಿಸಿರುವುದು ಕೂಡ ಗಮನಕ್ಕೆ ಬಂದಿತು. ಆಗ ನಡೆಯುತ್ತಿದ್ದ ಸಂಭಾಷಣೆಗಳ ಫಲವಾಗಿ, ಕೊರೊನಾ ಇಳಿಕೆಯಾದ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಲು ತೀರ್ಮಾನಿಸಿರುವುದರ ಪರಿಣಾಮವಾಗಿ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಏರ್ಪಾಟಾಗಿದೆ. ಕೇವಲ ವಿದ್ಯಾರ್ಥಿಗಳು ಮಾತ್ರ ಸಮ್ಮಿಲನಗೊಳ್ಳದೆ, ತಮಗೆ ಪಾಠ ಮಾಡಿದ ಆ ಕಾಲದ ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ಗುರುಗಳಿಗೆ ಗುರುವಂದನೆ ಮಾಡಲು ಕೂಡ ತೀರ್ಮಾನಿಸಿದ್ದಾರೆ. ಆ ದಿನ ಕುಟುಂಬ ಸಮೇತ ಪಾಲ್ಗೊಳ್ಳಲು 110 ವಿದ್ಯಾರ್ಥಿಗಳು ಈಗಾಗಲೇ ಖಚಿತಪಡಿಸಿದ್ದಾರೆ. ಪುಣೆ, ಮುಂಬೈ, ಚೆನ್ನೈ, ಮಂಗಳೂರು ಮೊದಲಾದೆಡೆ ನೆಲೆಸಿರುವವರು ಆ ದಿನ ಒಂದೆಡೆ ಸೇರಲಿದ್ದಾರೆ, ಕುಳಿತು ಊಟ ಮಾಡಲಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗುಂಪಿನ ದಿನೇಶ್‌ ಹುಲಿಮನೆ, ಇಲ್ಲಿ ಪದವಿ ಮುಗಿಸಿದ ನಂತರ ಸಾಗರಕ್ಕೆ ಒಮ್ಮೆಯೂ ಕಾಲಿಡದವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈವರೆಗೆ ಕಾಲೇಜಿನ ಇತಿಹಾಸದಲ್ಲಿ ಇಂತಹ ಹಳೆಯ ವಿದ್ಯಾರ್ಥಿಗಳ ಸಮ್ಮಿಲನದಂತಹ ಕಾರ್ಯಕ್ರಮ ನಡೆದಿರಲಿಲ್ಲ ಎಂದೂ ಹೇಳಲಾಗುತ್ತಿದೆ. ನಾವು ಕೂಡ ಕೇವಲ ಕಾಮರ್ಸ್‌ ವಿದ್ಯಾರ್ಥಿಗಳು ಸೇರುತ್ತಿದ್ದೇವೆಯೇ ವಿನಃ ಸಂಸ್ಕೃತ, ಕನ್ನಡ ಭಾಷಾ ವಿದ್ಯಾರ್ಥಿಗಳನ್ನು ಒಳಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇಂತಹ ಪ್ರಯತ್ನ ಮುಂದಿನ ದಿನಗಳಲ್ಲಿ ಇತರ ವಿಭಾಗ, ವರ್ಷಗಳ ಹಳೆಯ ವಿದ್ಯಾರ್ಥಿಗಳಿಗೆ ಇಂತಹ ಸಮಾಗಮದ ಯೋಜನೆ ಹಾಕಿಕೊಳ್ಳಲು ಸ್ಫೂರ್ತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಸಾವಿರಾರು ವಿದ್ಯಾರ್ಥಿಗಳಿಂದ ಸುವರ್ಣ ಕಾಲ ಕಂಡ ಎಲ್‌ಬಿ ಕಾಲೇಜು ಇಂತಹ ಪ್ರಯತ್ನಗಳ  ಪ್ರಭಾವದಿಂದ ಮತ್ತೂಮ್ಮೆ ತನ್ನ ವೈಭವದ ದಿನಗಳನ್ನು ಕಾಣುವಂತಾಗಬೇಕು ಎಂದು ಸಮಾಗಮ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಗಣಪತಿ ಬ್ಯಾಂಕ್‌ನ ಸರಸ್ವತಿ ನಾಗರಾಜ್‌, ಎಸ್‌ಆರ್‌ಎಸ್‌ ಗುರುಲಿಂಗಯ್ಯ, ಯಾಗೈನ್‌ ಶಶಿಧರ್‌, ನಾರಾಯಣ ಜೋಗ್‌, ಸುರೇಶ್‌ ಮುಂಗರವಳ್ಳಿ, ವೆಂಕಟೇಶ್‌ ರಾವ್‌, ತಾರಾನಾಥ ಶೆಟ್ಟಿ ಆಶಯ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next