ಲುಸೈಲ್: ಕತಾರ್ ದೇಶದ ಲುಸೈಲ್ ನಲ್ಲಿ ರವಿವಾರ ರಾತ್ರಿ ಕಿಕ್ಕಿರಿದ ಜನಸ್ತೋಮದ ನಡುವೆ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಗೆದ್ದು ಬೀಗಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಅವರು ಕೊನೆಗೂ ವಿಶ್ವಕಪ್ ಗೆ ಮುತ್ತಿಕ್ಕಿ ಗೆಲುವಿನ ನಗೆ ಬೀರಿದರು.
ಆದರೆ ಫೈನಲ್ ಪಂದ್ಯದಲ್ಲಿ ಎಲ್ಲರಿಕ್ಕಿಂತಲೂ ಹೆಚ್ಚು ಮಿಂಚಿದ್ದು 23 ವರ್ಷದ ಕಿಲಿಯನ್ ಎಂಬಪ್ಪೆ.
ಫೈನಲ್ ಪಂದ್ಯಕ್ಕೂ ಮೊದಲು ಈ ಪಂದ್ಯ ಮೆಸ್ಸಿ ವರ್ಸಸ್ ಫ್ರಾನ್ಸ್ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಆದರೆ ಇದನ್ನೆಲ್ಲಾ ಬುಡಮೇಲು ಮಾಡಿ ಮೆಸ್ಸಿ ಎಂಬ ಸೂರ್ಯಪ್ರಕಾಶದ ಎದುರು ಮಿಂಚಿದ್ದ ಕಿಲಿಯನ್ ಎಂಬಪ್ಪೆ. ಫ್ರಾನ್ಸ್ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಎಂಬಪ್ಪೆ ಕೊನೆಯ ಕ್ಷಣದವರೆಗೂ ಭರವಸೆ ಮೂಡಿಸಿದ್ದರು.
ಪಂದ್ಯದ ಮೊದಲ ಅವಧಿಯಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿತ್ತು. 80 ನೇ ನಿಮಿಷದವರೆಗೂ ಅರ್ಜೆಂಟೀನಾವೇ ಮುಂದಿತ್ತು. ಆದರೆ 80ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಬಳಸಿ ಮೊದಲ ಗೋಲು ಗಳಿಸಿದರು. ಇದರಿಂದ ಅರ್ಜೆಂಟೀನಾ ಆಟಗಾರರು ಹೊರ ಬರುವ ಮೊದಲೇ ಅಂದರೆ 81 ನೇ ನಿಮಿಷದಲ್ಲಿ ಅದ್ಭುತ ಮತ್ತೊಂದು ಗೋಲು ಹೊಡೆದು ಸಮಬಲ ಮಾಡಿದರು. ಕೇವಲ 97 ಸೆಕೆಂಡ್ ಗಳ ಅಂತರದಲ್ಲಿ ಎರಡು ಗೋಲು ಗಳಿಸಿದ ಎಂಬಪ್ಪೆ ಸಂಪೂರ್ಣ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು.
ಇದನ್ನೂ ಓದಿ:ಸಚಿವ ಸ್ಥಾನ ಕೊಟ್ಟಿಲ್ಲ- ಅಧಿವೇಶನಕ್ಕೆ ಹೋಗಲ್ಲ: ಸಿಎಂ ಬೊಮ್ಮಾಯಿ ವಿರುದ್ದ ಈಶ್ವರಪ್ಪ ಅಸಮಾಧಾನ
ಮತ್ತೆ ಹೆಚ್ಚುವರಿ ಸಮಯದಲ್ಲಿ ಮತ್ತೊಂದು ಗೋಲು ಗಳಿಸಿದ ಮೆಸ್ಸಿ ಅರ್ಜೆಂಟೀನಾಗೆ ಮತ್ತೆ ಗೆಲುವಿನ ಭರವಸೆ ತುಂಬಿದರು. ಆದರೆ ಪಂದ್ಯ ಇನ್ನೇನು ಮುಗಿಯಬೇಕು, ಅರ್ಜೆಂಟೀನಾ ಗೆದ್ದಿತು ಎಂಬ ಸ್ಥಿತಿಯಲ್ಲಿ ಮತ್ತೆ ಮೇಲೆದ್ದು ಬಂದ ಎಂಬಪ್ಪೆ 118ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮತ್ತೆ ಪಂದ್ಯ ಡ್ರಾ. ಮುಂದೆ ಪೆನಾಲ್ಟಿ ಶೂಟೌಟ್ ನಲ್ಲೂ ಎಂಬಪ್ಪೆ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು.
ಮೂರು ಗೋಲು ಬಾರಿಸಿದರೂ, ಫ್ರಾನ್ಸ್ ಸೋಲನ್ನು ತಡೆಯಲು ಕಿಲಿಯನ್ ಎಂಬಪ್ಪೆಗೆ ಆಗಲಿಲ್ಲ. ಈ ನೋವಿನಲ್ಲಿ ಕಣ್ಣೀರು ಹಾಕಿದ ಅವರಿಗೆ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರಾನ್ ಸಮಾಧಾನ ಮಾಡಿದರು. ಈ ದೃಶ್ಯ ಗಮನ ಸೆಳೆಯಿತು.
ಗೋಲ್ಡನ್ ಬೂಟ್: ಫೈನಲ್ ನಲ್ಲಿನ ಮೂರು ಸೇರಿ ಒಟ್ಟು ಎಂಟು ಗೋಲು ಬಾರಿಸಿದ ಎಂಬಪ್ಪೆಗೆ ಗೋಲ್ಡನ್ ಬೂಟ್ ಪ್ರಶಸ್ತಿ ಸಿಕ್ಕಿತ್ತು. ಇದನ್ನು ಗರಿಷ್ಠ ಗೋಲು ಬಾರಿಸಿದ ಆಟಗಾರನಿಗೆ ನೀಡಲಾಗುತ್ತದೆ.
ಇದನ್ನೂ ಓದಿ:ವಿಶ್ವಕಪ್ ನೊಂದಿಗೆ ಅರ್ಜೆಂಟೀನಾ ಗೆದ್ದ ಹಣವೆಷ್ಟು ಗೊತ್ತಾ? ಫ್ರಾನ್ಸ್ ಗೆ ಸಿಕ್ತು 248 ಕೋಟಿ!