ಹೊಸದಿಲ್ಲಿ/ಮುಂಬಯಿ: “ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ವಿವರಗಳನ್ನು ಅಪ್‌ಡೇಟ್ ಮಾಡಲಾಗಿಲ್ಲ ಎಂಬ ಕಾರಣಕ್ಕೆ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ ಹಿರಿಯ ನಾಗರಿಕರಿಗೆ ಸಿಗಬೇಕಾಗಿದ್ದ ಪಿಂಚಣಿ ಪಾವತಿ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ಇಂಥ ಅನುಭವವಾಗುತ್ತಿದೆ.
ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಎಸ್‌ಬಿ ಖಾತೆ ಹೊಂದಿದ್ದ ವ್ಯಕ್ತಿಗೆ ತತ್‌ಕ್ಷಣವೇ ಕೆವೈಸಿ ವಿವರ ಅಪ್‌ಡೇಟ್ ಮಾಡಬೇಕು. ಇಲ್ಲದೇ ಇದ್ದರೆ ಖಾತೆ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು ಎಂದಿದ್ದಾರೆ. ಬ್ಯಾಂಕ್‌ನ ಸಿಬಂದಿ ತಮ್ಮನ್ನು ಹೈರಿಸ್ಕ್ ಕಸ್ಟಮರ್ ಎಂದು ವರ್ಗೀಕರಿಸಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾರೆ. ಕಚೇರಿಯೊಂದರದಲ್ಲಿ ವೇತನ ಪಡೆದು ಜೀವಿಸುತ್ತಿರುವ ತಾನು ಆ ವರ್ಗಕ್ಕೆ ಹೇಗೆ ಸೇರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಕೋಲ್ಕತಾದಲ್ಲಿನ ಸರಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಹಿರಿಯ ನಾಗರಿಕರೊಬ್ಬರು ಪಿಂಚಣಿ ಖಾತೆ ಹೊಂದಿದ್ದಾರೆ. 15 ವರ್ಷದಿಂದ ನಿಯಮಿತವಾಗಿ ಪಿಂಚಣಿ ಬರುತ್ತಿತ್ತು. ಕಳೆದ ತಿಂಗಳು ಕೆವೈಸಿ ಕಾರಣಕ್ಕಾಗಿ ಪಿಂಚಣಿ ಪಾವತಿಯಾಗಿರಲಿಲ್ಲ ಎಂದಿದ್ದಾರೆ. ಕೆವೈಸಿ ಅಪ್‌ಡೇಟ್ ಆಗದಿದ್ದರೆ ಖಾತೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಸುತ್ತೋಲೆ ಕೂಡ ಕಳುಹಿಸಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಕೆವೈಸಿ- ಯಾರಿಗೆ ಹೇಗೆ?
ಹೈರಿಸ್ಕ್ ಗ್ರಾಹಕರು: ಪ್ರತೀ 1-2 ವರ್ಷಗಳಲ್ಲಿ ಒಂದು ಬಾರಿ
ಮೀಡಿಯಂ ರಿಸ್ಕ್ ಗ್ರಾಹಕರು : ಪ್ರತೀ 8 ವರ್ಷಗಳಿಗೆ ಒಮ್ಮೆ
ಲೋ ರಿಸ್ಕ್ ಗ್ರಾಹಕರು: ಪ್ರತೀ ಹತ್ತು ವರ್ಷಗಳಿಗೆ ಒಂದು ಬಾರಿ