ಸೈದಾಪುರ: ಶಾಲಾ-ಪೂರ್ವ ಹಂತದಲ್ಲಿನ ಮಕ್ಕಳಲ್ಲಿ ಅಡಕವಾಗಿರುವ ಮೂರು ವರ್ಷ ಬುದ್ಧಿ, ಅವರನ್ನು ಮುಂದಿನ ನೂರು ವರ್ಷದವರೆಗೆ ಕಾಪಾಡುತ್ತದೆ ಎಂದು ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಅನಿತಾ ಅವರು ಅಭಿಪ್ರಾಯಪಟ್ಟರು.
ಸಮೀಪದ ಕ್ಯಾತನಾಳ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಆಶ್ರಯದಲ್ಲಿ ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿರಿಗೆ ಹಮ್ಮಿಕೊಂಡಿದ್ದ 4 ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2022-23ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯ ಚಾಲೆಂಜಿಂಗ್ ಫಂಡ್ ಅನುದಾನದಲ್ಲಿ ಗಣಿತ ಪೂರ್ವ ತಯಾರಿ ಚಟುವಟಿಕೆ ತರಬೇತಿಯಲ್ಲಿ ಮಕ್ಕಳಿಗೆ ಗಣಿತದ ಬಗ್ಗೆ ಆಸಕ್ತಿ ಮತ್ತು ಜ್ಞಾನ ಮೂಡಿಸುವ ಉದ್ದೇಶವಾಗಿದೆ. ಈ ತರಬೇತಿಯಲ್ಲಿ 3ರಿಂದ 6 ವರ್ಷದ ಮಕ್ಕಳಿಗೆ ವಸ್ತುವಿನ ಗಾತ್ರ, ಆಕಾರ, ಬಣ್ಣ, ಚಿಕ್ಕದು-ದೊಡ್ಡದು, ಅಂಕಿ-ಸಂಖ್ಯೆಗಳ ಪರಿಚಯವನ್ನು ಮಾಡುವುದಾಗಿದೆ. ಇದರಿಂದ ಮಕ್ಕಳು ಭವಿಷ್ಯದ ಜೀವನದಲ್ಲಿ ಗಣಿತ ವಿಷಯ ಕಠಿಣತೆಯಾಗದೇ ಸರಳ ಕಲಿಕೆ ಸಹಾಯಕವಾಗುವುದು.
ಆದ್ದರಿಂದ ತರಬೇತುದಾರರು ಇದರ ಸದ್ಬಳಕೆ ಪಡೆದುಕೊಂಡು ನಿಮ್ಮ ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಗಣಿತ ಕಲಿಸಿ ಸಮಾಜ ಮತ್ತು ಸಮುದಾಯಕ್ಕೆ ಉತ್ತಮ ಸಂಪನ್ಮೂಲ ವ್ಯಕ್ತಿಯನ್ನಾಗಿಸಿ ಎಂದರು.
ಕಾರ್ಯಕ್ರಮ ಉದ್ಘಾಟಕರಾಗಿ ಸೈದಾಪುರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮುಕುಂದರಾವ್ ಕುಲಕರ್ಣಿ, ಅಂಗನವಾಡಿ ಸಂಪನ್ಮೂಲ ಮೇಲ್ವಿಚಾರಕಿ ನಾಗಮ್ಮ, ಬಾಲ ವಿಕಾಸ ಸಲಹಾ ಸಮಿತಿ ಅಧ್ಯಕ್ಷೆ ಕಮಲಮ್ಮ, ಮುಖ್ಯ ಗುರು ಮಹಾದೇವಪ್ಪ, ಮಲ್ಲಿಕಾರ್ಜುನ, ಕಡೇಚೂರು, ರಾಚನಳ್ಳಿ, ರಾಂಪೂರು ಕೆ., ಸೈದಾಪುರ, ದದ್ದಲ, ಬಾಲಚೇಡ, ದುಪ್ಪಲ್ಲಿ, ಬದ್ದೇಪಲ್ಲಿ, ಕ್ಯಾತನಾಳ, ಇಂದಿರಾ ನಗರದ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಇತರರಿದ್ದರು.