ವಾರ ಪೂರ್ತಿ ಆಫೀಸಿನಲ್ಲಿ ಬಿಡುವಿಲ್ಲದ ಕೆಲಸ, ಟ್ರಾಫಿಕ್ ಜಂಜಾಟ, ವಾಹನಗಳ ಕಿರಿಕಿರಿ ಸಮಸ್ಯೆ ಒಂದಾ ಎರಡಾ… ಇದೆಲ್ಲದರ ನಡುವೆ ನಮ್ಮ ಮನಸ್ಸಿನ ನೆಮ್ಮದಿಗಾಗಿ ಎಲ್ಲಿಯಾದರೂ ಒಳ್ಳೆಯ ಜಾಗಕ್ಕೆ ಹೋಗಿ ಒಂದೆರಡು ದಿನ ಹಾಯಾಗಿ ಇದ್ದು ಬರೋಣ ಎಂದು ಎಲ್ಲರೂ ಬಯಸುತ್ತಾರೆ.
ಅದಕ್ಕಾಗಿಯೇ ಈಗಿನ ಜಮಾನದ ಯುವಕರು ಟ್ರಕ್ಕಿಂಗ್, ಸೋಲೋ ಬೈಕ್ ರೈಡಿಂಗ್, ಅಡ್ವೆಂಚರ್, ಹೊಸ ಹೊಸ ಜಾಗಗಳ ಅನ್ವೇಷಣೆ ಹೀಗೆ ನಾನಾ ವಿಚಾರಗಳ ಆಸಕ್ತಿ ಮೈಗೂಡಿಸಿಕೊಳ್ಳುತ್ತಿದ್ದಾರೆ.
ವೀಕೆಂಡ್ ಬಂದರೆ ಸಾಕು ಕೆಲವರು ಸೋಲೋ ಬೈಕ್ ರೈಡಿಂಗ್ ಮಾಡಲು ಹೋಗುತ್ತಾರೆ, ಇನ್ನು ಕೆಲವರು ಗೆಳೆಯರ ಜೊತೆಗೂಡಿ ತಿರುಗಾಟ ಕೈಗೊಳ್ಳುತ್ತಾರೆ, ಮತ್ತೆ ಕೆಲವರು ಟ್ರಕ್ಕಿಂಗ್… ಒಟ್ಟಿಗೆ ಮನಸ್ಸಿಗೆ ನೆಮ್ಮದಿ ಬೇಕು ಅಷ್ಟೇ…ನೀವೆಲ್ಲಾದರೂ ಟ್ರಕ್ಕಿಂಗ್ ಹೋಗುವ ಲೆಕ್ಕಾಚಾರ ಮಾಡಿಕೊಂಡಿದ್ದರೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪ ಇರುವ ಕ್ಯಾತನಮಕ್ಕಿಗೆ ಒಮ್ಮೆ ಭೇಟಿ ಕೊಡಿ..
ಕ್ಯಾತನಮಕ್ಕಿ ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ, ಮುಂಜಾನೆ ಬೇಗ ಇಲ್ಲಿಗೆ ಭೇಟಿ ನೀಡಿದರೆ ಒಂದರಿಂದ ಎರಡು ಕಿಲೋಮೀಟರ್ ಟ್ರಕ್ಕಿಂಗ್ ಮಾಡಿದರೆ ಕ್ಯಾತನಮಕ್ಕಿ ಬೆಟ್ಟದ ತುದಿ ತಲುಪುತ್ತೀರಿ.
ಅಂದಹಾಗೆ ಹೊರನಾಡು ದೇವಸ್ಥಾನದ ದಾರಿಯಿಂದ ಶೃಂಗೇರಿ ಮಾರ್ಗವಾಗಿ ಸಾಗಿದರೆ ಕ್ಯಾತನಮಕ್ಕಿ ಗಿರಿಯ ಪ್ರವೇಶ ದ್ವಾರ ಸಿಗುತ್ತದೆ. ಅಲ್ಲಿಂದ ಟ್ರಕ್ಕಿಂಗ್ ಮೂಲಕ ಸಾಗುವುದಾದರೆ ಸಾಗಬಹುದು ಇಲ್ಲವಾದರೆ ಜೀಪ್ ಮೂಲಕ ಸಾಗಬಹುದು, ಕಾರು ತೆಗೆದುಕೊಂಡು ಹೋಗುವ ಹಾಗಿಲ್ಲ ಯಾಕೆಂದರೆ ದುರ್ಗಮವಾದ ಹಾದಿ ಇಲ್ಲಿ ವಾಹನದಲ್ಲಿ ಸಾಗಬೇಕಾದರೆ ಫೋರ್ ವೀಲ್ ಡ್ರೈವಿಂಗ್ ವಾಹನಗಳೇ ಬೇಕಾಗುತ್ತದೆ. ಹಾಗೆ ದ್ವಾರದಿಂದ ಮುಂದೆ ಸಾಗಿದರೆ ಅರಣ್ಯ ಇಲಾಖೆ ಗೇಟ್ ಸಿಗುತ್ತದೆ ಅಲ್ಲಿ ಪ್ರತಿಯೊಬ್ಬ ಪ್ರವಾಸಿಗನಿಗೆ ಐವತ್ತು ರೂಪಾಯಿ ಟಿಕೆಟ್ ಪಡೆದು ಮುಂದೆ ಸಾಗಬೇಕು. ಟ್ರಕ್ಕಿಂಗ್ ಮಾಡುವವರೂ ಟಿಕೆಟ್ ಮಾಡಿ ಸಾಗಬೇಕು. ಕಡಿದಾದ ಹಾದಿಯಲ್ಲಿ ಸಾಗುತ್ತಾ ಮುಂದೆ ಹೋಗುತ್ತಿದ್ದಂತೆ ಕ್ಯಾತನಮಕ್ಕಿ ಗಿರಿ ಶಿಖರದ ತುತ್ತ ತುದಿ ಕಾಣುತ್ತದೆ.
ಮಳೆಗಾಲದಲ್ಲಿ ಈ ಹಾದಿಯಲ್ಲಿ ಸಾಗುವುದೇ ಸವಾಲಿನ ಕೆಲಸ, ದಾರಿಯುದ್ದಕ್ಕೂ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಇದರ ಮೇಲೆಯೇ ವಾಹನ ಸವಾರಿ, ನಿಜಕ್ಕೂ ವಾಹನಗಳಲ್ಲಿ ಸವಾರಿ ಮಾಡಲು ಗುಂಡಿಗೆ ಗಟ್ಟಿ ಇರಬೇಕು, ಒಂದೆಡೆ ದುರ್ಗಮ ಹಾದಿ, ಇನ್ನೊಂದೆಡೆ ಕಡಿದಾದ ಇಳಿಜಾರು ಇಲ್ಲಿ ಸವಾರಿ ಮಾಡುವುದು ಒಂದು ರೋಚಕ ಅನುಭವ, ಕೊಡಚಾದ್ರಿಗೆ ವಾಹನದಲ್ಲಿ ಪ್ರಯಾಣಿಸಿದ ಅನುಭವವೇ ಇಲ್ಲಿ ಕೂಡಾ…
ಟ್ರಕ್ಕಿಂಗ್ ಮಾಡುವವರೂ ಇದೆ ರಸ್ತೆಯಲ್ಲಿ ಸಾಗಬೇಕು ಕೇವಲ ಎರಡು ಕಿಲೋಮೀಟರ್ ನಡೆದು ಸಾಗಿದರೆ ಕ್ಯಾತನಮಕ್ಕಿ ಬೆಟ್ಟದ ಬುಡಕ್ಕೆ ಸಾಗಬಹುದು, ಈ ಹಿಂದೆ ಕ್ಯಾತನಮಕ್ಕಿ ಬೆಟ್ಟದ ತುದಿಗೆ ವಾಹನಗಳು ಹೋಗಲು ಅನುಮತಿ ಇತ್ತು ಆದರೆ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ಚಲಾಯಿಸಿ, ಬೆಟ್ಟದ ಸೌಂದರ್ಯವನ್ನೇ ಹಾಳು ಮಾಡಿದ್ದಾರೆ ಹಾಗಾಗಿ ಅರಣ್ಯ ಇಲಾಖೆ ಪ್ರವಾಸಿಗರಿಗೆ ಕ್ಯಾತನಮಕ್ಕಿ ಬೆಟ್ಟದ ಬುಡದವರೆಗೆ ಮಾತ್ರ ವಾಹನದ ಮೂಲಕ ತೆರಳಲು ಅವಕಾಶ ನೀಡಿದ್ದು ಬೆಟ್ಟದ ಬುಡದಲ್ಲಿ ತಂತಿ ಬೇಲಿ ನಿರ್ಮಿಸಿ ಅಲ್ಲಿಂದ ಪ್ರತಿಯೊಬ್ಬರೂ ನಡೆದೇ ಸಾಗಬೇಕು.
ಕ್ಯಾತನಮಕ್ಕಿಗೆ ಬರಲು ಜೀಪ್ ವ್ಯವಸ್ಥೆ ಇದೆ ಬೆಳಿಗ್ಗೆ 5;30 ರಿಂದ ಸಂಜೆ 5;30ರವರೆಗೆ ಭೇಟಿ ನೀಡಲು ಅವಕಾಶವಿದೆ. ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹಲವಾರು ಹೋಮ್ ಸ್ಟೇ ನಿರ್ಮಿಸಲಾಗಿದೆ, ಅಲ್ಲದೆ ಅರಣ್ಯ ಇಲಾಖೆಯ ಅನುಮತಿ ಪಡೆದು ಟೆಂಟ್ ಹೌಸ್ ನಿರ್ಮಿಸಿ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯೂ ಇತ್ತು.
ಟ್ರಕ್ಕಿಂಗ್ ಮಾಡಿ ಬಂದವರಿಗೆ ದಾರಿ ನಡಿಗೆ ಸುಸ್ತಾದರೂ ಬೆಟ್ಟದ ತುದಿಗೆ ಹೋದ ಮೇಲೆ ನಿಮ್ಮ ಆಯಾಸ ಪ್ರಕೃತಿಯ ಸೌಂದರ್ಯದ ನಡುವೆ ಮಂಜಿನಂತೆ ಕರಗಿಹೋಗುತ್ತದೆ, ಸುತ್ತಲೂ ಕಾಣುವ ಹಚ್ಚ ಹಸಿರಿನ ಬೆಟ್ಟ, ತಂಪಾದ ಗಾಳಿ, ಮಂಜು ಮುಸುಕಿದ ಮೋಡ, ಮಂಜಿನ ನಡುವೆ ಕಣ್ಣ ಮುಚ್ಚಾಲೆ ಆಡುವ ಬೆಟ್ಟಗಳು ಇವೆಲ್ಲವೂ ಪ್ರವಾಸಿಗರ ಮನಸ್ಸಿನಲ್ಲಿದ್ದ ನೋವುಗಳನ್ನು ಕ್ಷಣಮಾತ್ರದಲ್ಲಿ ಕರಗಿಸಿಬಿಡುತ್ತದೆ.
ಹೊರನಾಡಿನಿಂದ ಕ್ಯಾತನಮಕ್ಕಿಗೆ 7ಕಿಲೋ ಮೀಟರ್ ದೂರವಿದೆ, ಕಳಸ ಮೂಲಕ ಹೊರನಾಡು ದೇವಸ್ಥಾನದ ಮಾರ್ಗವಾಗಿ ಬಂದು ಅಲ್ಲಿಂದ ಶೃಂಗೇರಿ ಮಾರ್ಗವಾಗಿ ಸಾಗಿದರೆ ಕ್ಯಾತನಮಕ್ಕಿ ಪ್ರವೇಶ ದ್ವಾರ ಸಿಗುತ್ತದೆ. ಅಲ್ಲಿಂದ ಹೋಗಲು ಜೀಪ್ ವ್ಯವಸ್ಥೆ ಇದೆ, ಬೈಕ್ ಮೂಲಕ ಹೋಗುವವರು ಹೋಗಬಹುದು, ಸಾಮಾನ್ಯ ಬೈಕ್ ನಲ್ಲಿ ಹೋಗುವುದು ಕಷ್ಟಸಾಧ್ಯ.
ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನು ಈ ಪರಿಸರದ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ, ಹಾಗಾಗಿ ತಾವು ತಂದ ಆಹಾರದ ಪೊಟ್ಟಣ, ನೀರಿನ ಬಾಟಲಿ, ಇನ್ಯಾವುದೇ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಪರಿಸರ ಹಾಳು ಮಾಡದೆ ನಿಸರ್ಗದ ಕಾಳಜಿ ವಹಿಸಿ.
– ಸುಧೀರ್ ಆಚಾರ್ಯ