Advertisement

ಕಾರ್ಕಳ ಹಿರ್ಗಾನದಲ್ಲಿ  ಕೋತಿ ಶವ ಪತ್ತೆ

05:02 AM Jan 11, 2019 | |

ಅಜೆಕಾರು: ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಚಿಕ್ಕಲ್‌ಬೆಟ್ಟು ತಿರುವಿನಲ್ಲಿ ಗುರುವಾರ ಕೋತಿಯ ಶವವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಮಂಗನ ಕಾಯಿಲೆಯ ಭೀತಿ ಮೂಡಿಸಿದೆ.

Advertisement

ಒಂದು ವರ್ಷದೊಳಗಿನ ಕೋತಿ ಇದಾಗಿದ್ದು, ಪಶು ವೈದ್ಯಾಧಿಕಾರಿ ಸುಬ್ರಹ್ಮಣ್ಯ ಪ್ರಸಾದ್‌ ಮರಣೋತ್ತರ ಪರೀಕ್ಷೆ ನಡೆಸಿದರು. ಪ್ರಾಥಮಿಕ ಪರೀಕ್ಷೆಯಲ್ಲಿ ಕಾಯಿಲೆಯ ಲಕ್ಷಣ ಕಂಡುಬಂದಿಲ್ಲ. ಹೆಚ್ಚಿನ ತಪಾಸಣೆಗಾಗಿ ದೇಹದ ಮಾದರಿಗಳನ್ನು ಶಿವಮೊಗ್ಗದ  ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುವುದು  ಎಂದು ಅವರು ಹೇಳಿದರು. ಪರಿಸರದಲ್ಲಿ ಜ್ವರದ ಪ್ರಕರಣಗಳು ಇಲ್ಲ. ಆದ್ದರಿಂದ ಭಯ ಬೇಡ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರ್ಗಾನ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ| ಶಮ ಶುಕುರ್‌ ಹೇಳಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ, ಅರಣ್ಯ ಇಲಾಖೆಯ ಆನಂದ, ಬಾಬು ಪೂಜಾರಿ, ಅನ್ವರ್‌, ಹಿರ್ಗಾನ ಗ್ರಾ.ಪಂ. ಆಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಮತ್ತಿತರರು ಸ್ಥಳಕ್ಕೆ  ಭೇಟಿ ನೀಡಿದರು.

ಹೊಸಂಗಡಿ: ಮತ್ತೂಂದು ಕೋತಿಯ ಮರಣೋತ್ತರ ಪರೀಕ್ಷೆ
ಸಿದ್ದಾಪುರ
: ಕುಂದಾ ಪುರ ತಾಲೂಕಿನ ಹೊಸಂಗಡಿ ಕೆಪಿಸಿ ವಸತಿ ಕಾಲನಿಯಲ್ಲಿ ಬುಧವಾರ ಮೃತಪಟ್ಟಿದ್ದ ಮತ್ತೂಂದು ಕೋತಿಯ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಿ ದಹಿಸಲಾಯಿತು. ಮಾದರಿಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಕೆಪಿಸಿ ಕಾಲನಿಯಲ್ಲಿ ಬುಧವಾರ 6 ವರ್ಷದ 2 ಕೋತಿಗಳು ಮೃತಪಟ್ಟಿದ್ದವು. ಒಂದರ ಶವ ಪರೀಕ್ಷೆ ನಿನ್ನೆಯೇ ಮಾಡಲಾಗಿತ್ತು.

ಎಚ್ಚರ ವಹಿಸಿ
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇದೆ. ಉಡುಪಿ ಜಿಲ್ಲೆಗೆ ವ್ಯಾಪಿಸಿರುವ  ಮಾಹಿತಿ ಇಲ್ಲ. ಆದರೂ 
ಎಚ್ಚರ ವಹಿಸುವುದು ಸೂಕ್ತ. ಕಾಡಿಗೆ ಹೋಗುವಾಗ ಉಣುಗು ನಿರೋಧಕ ಡಿಎಂಪಿ ತೈಲ ಮೈಗೆ ಸವರಿಕೊಂಡು ಹೋಗಬೇಕು. ಜಿಲ್ಲೆಯ ಗಡಿ ಭಾಗಗಳಲ್ಲಿ ವಿಶೇಷ ಗ್ರಾಮ ಸಭೆ ಕರೆದು ಜಾಗೃತಿ ಮೂಡಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ  ಡಾ| ಪ್ರಶಾಂತ ಭಟ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಸಾಗರ: ಮತ್ತಿಬ್ಬರಿಗೆ ಜ್ವರ; 4 ಮೃತ ಮಂಗ ಪತ್ತೆ
ಸಾಗರ: ಮಂಗನಕಾಯಿಲೆ ಹೆಚ್ಚುತ್ತಲೇ ಇದ್ದು, ಮತ್ತಿಬ್ಬರು ಜ್ವರಕ್ಕೆ ತುತ್ತಾಗಿದ್ದಾರೆ. ಗುರು ವಾರ ತಾಲೂಕಿನಲ್ಲಿ 4 ಮೃತ ಮಂಗಗಳು ಪತ್ತೆಯಾಗಿವೆ. ಕೊಳೆತ ಸ್ಥಿತಿಯಲ್ಲಿದ್ದು, ಪೋಸ್ಟ್‌ ಮಾರ್ಟ್‌ಂ ಸಾಧ್ಯವಾಗಿಲ್ಲ. ಜ್ವರಬಾಧಿತ ಅರಳಗೋಡು ಗಣಪತಿ ಭಟ್‌, ಕಾರ್ಗಲ್‌ ಪರಶುರಾಮ ಎಂಬವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಸವಿತಾ ಅವರ ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ ಎಂದು ತಿಳಿದು ಬಂದಿದೆ. ಕೆಎಫ್‌ಡಿ ಪ್ರತಿಬಂಧಕ ಘಟಕದ ಉಪ ನಿರ್ದೇಶಕ ಡಾ| ರವಿಕುಮಾರ್‌ ಮಾಹಿತಿ ನೀಡಿ, ಪರೀಕ್ಷಿಸಿದ 15 ಸ್ಯಾಂಪಲ್‌ಗ‌ಳಲ್ಲಿ 3 ಪಾಸಿಟಿವ್‌ ಬಂದಿದೆ. ಒಟ್ಟು 56 ಮಂದಿಗೆ ಕಾಯಿಲೆ ದೃಢಪಟ್ಟಂತಾಗಿದೆ ಎಂದಿದ್ದಾರೆ.

ಕೆಎಂಸಿಯಲ್ಲಿ  26 ಮಂದಿಗೆ ಚಿಕಿತ್ಸೆ
ಉಡುಪಿ: ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗಾಗಿ ಇದುವರೆಗೆ 59 ಮಂದಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದು ಅವರಲ್ಲಿ 33 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 26 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

 ಜ. 14ರಂದು ಸಮನ್ವಯ ಸಮಿತಿ ಸಭೆ
ಕುಂದಾಪುರ
: ಗಡಿ ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯಿಂದ 6 ಮಂದಿ ಮೃತಪಟ್ಟಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸಾವು ಸಂಭವಿಸುತ್ತಿರುವುದರಿಂದ ಜಿಲ್ಲೆಯಲ್ಲಿಯೂ ಮಂಗನ ಕಾಯಿಲೆಯ ಭೀತಿ ಆರಂಭವಾಗಿದೆ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜ. 14ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಕರೆಯ ಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರೋಹಿಣಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಸಿದ್ದಾಪುರ, ಹೊಸಂಗಡಿ, ಶಿರೂರು, ಹಳ್ಳಿಹೊಳೆ ಭಾಗದಲ್ಲಿ ಮೃತಪಟ್ಟ ಮಂಗಗಳ ದೇಹದ ಮಾದರಿಗಳನ್ನು ಶಿವಮೊಗ್ಗಕ್ಕೆ ಕಳುಹಿಸಿದ್ದು, ಅಲ್ಲಿಂದ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿ ದ್ದಾರೆ. ಒಂದು ಮಂಗ ಮೃತಪಟ್ಟು ಹಲವು ದಿನಗಳಾಗಿರುವುದರಿಂದ ಅದರ ಮಾದರಿ ತಿರಸ್ಕೃತ ಗೊಂಡಿದೆ. 4 ಮಂಗಗಳ ಸಾವಿನ ವರದಿ ಬರಬೇಕಿದ್ದು, ಬಳಿಕವಷ್ಟೇ ಮಂಗನಕಾಯಿಲೆ ಕುರಿತ ಅನುಮಾನ ಪರಿಹಾರವಾಗಬಹುದು. ಈ ವರದಿ ಬರಲು ಇನ್ನೂ 4-5 ದಿನ ಬೇಕಾದೀತು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next