Advertisement

ಪಶ್ಚಿಮ ಘಟ್ಟದ ತಪ್ಪಲು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಅಗತ್ಯ

01:20 AM Jan 23, 2022 | Team Udayavani |

ಕುಂದಾಪುರ: ಗಡಿ ಜಿಲ್ಲೆ ಶಿವಮೊಗ್ಗದಲ್ಲಿ ಈ ವರ್ಷದ ಮೊದಲ ಮಂಗನ ಕಾಯಿಲೆ (ಕೆಎಫ್‌ಡಿ) ಪ್ರಕರಣ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕಿನ ಕಾಡಂಚಿನ ಊರುಗಳಿಗೆ ಇದು ಎಚ್ಚರಿಕೆಯ ಕರೆಗಂಟೆ. ಈ ಊರುಗಳ ಜನತೆ ಆತಂಕಪಡದೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಸದ್ಯ ಅತ್ಯವಶ್ಯಕ.

Advertisement

ತೀರ್ಥಹಳ್ಳಿ ತಾಲೂಕಿನ ಮಾಳೂರು ಪ್ರಾ. ಆ. ಕೇಂದ್ರ ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನ ಕಾಯಿಲೆಯ ಲಕ್ಷಣ ಕಾಣಿಸಿಕೊಂಡಿದೆ. ಇದರಿಂದ ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಂತಿರುವ ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ಬುಡದಲ್ಲಿರುವ ಸಿದ್ದಾಪುರ, ಹೊಸಂಗಡಿ, ಕೊಲ್ಲೂರು, ಯಳಜಿತ್‌, ಅಮಾಸೆಬೈಲು, ಮಡಾಮಕ್ಕಿ, ಚಾರ, ಹೆಬ್ರಿ, ಕಬ್ಬಿನಾಲೆ, ಬೇಳಿಂಜೆ, ನಾಡಾ³ಲು, ಮಾಳ ಸಹಿತ ಹತ್ತಾರು ಊರುಗಳ ಜನ ಮುನ್ನೆಚ್ಚರಿಕೆ ವಹಿಸಬೇಕಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಂಗಗಳು ಆಕಸ್ಮಿಕವಾಗಿ ಸಾವನ್ನಪ್ಪಿದ ಅಥವಾ ಮನುಷ್ಯರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿರುವ ವರದಿಯಾಗಿಲ್ಲ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಂಗನಕಾಯಿಲೆ ಭೀತಿ ಇರುವ ತಾಲೂಕುಗಳಲ್ಲಿ ಈಗಾಗಲೇ ಆರೋಗ್ಯ ಇಲಾಖೆಯು ಸಂಬಂಧಪಟ್ಟ ಸ್ಥಳೀಯಾಡಳಿತ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಭೀತಿ ಇರುವ ಗ್ರಾಮಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಎಫ್‌ಡಿ ಲಸಿಕೆ ನೀಡಲು ಕಳೆದ ಸಪ್ಟೆಂಬರ್‌ನಲ್ಲೇ ಸೂಚಿಸಲಾಗಿದೆ.

ಲಕ್ಷಣಗಳೇನು?
ಕೆಎಫ್‌ಡಿ ಅಥವಾ ಮಂಗನ ಕಾಯಿಲೆಯಿಂದ ಸಾವನ್ನಪ್ಪುವ ಮಂಗಗಳ ಮೇಲಿರುವ ಉಣ್ಣಿಗಳು ಮನುಷ್ಯರನ್ನು ಕಡಿದಾಗ ಈ ಕಾಯಿಲೆ ಹರಡುತ್ತದೆ. ಕಾಡಿಗೆ ಮೇಯಲು ತೆರಳಿದ ಜಾನುವಾರುಗಳ ಮೂಲಕವೂ ಉಣ್ಣಿಗಳು ಮನುಷ್ಯರನ್ನು ಕಚ್ಚುವ ಸಾಧ್ಯತೆಗಳಿವೆ. ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು, ಬಾಯಿ ಅಥವಾ ದೇಹದ ಇತರ ಭಾಗಗಳಿಂದ ರಕ್ತಸ್ರಾವ ಆರಂಭಿಕ ಲಕ್ಷಣಗಳು. 1ರಿಂದ 2 ವಾರಗಳ ಅನಂತರ ಮತ್ತೆ ಮೆದುಳಿನ ಉರಿಯೂತ, ಜ್ವರ, ಕುತ್ತಿಗೆ ಬಿಗಿ ಹಿಡಿತ, ತಲೆನೋವು, ವಾಂತಿ ಕಾಣಿಸಿಕೊಳ್ಳುತ್ತದೆ.

2019ರಲ್ಲಿ ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿಲ್ಲ. 2019ರಲ್ಲಿ ವರದಿಯಾಗಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

Advertisement

2019ರಲ್ಲಿ ಉತ್ತುಂಗಕ್ಕೆ
2019ರಲ್ಲಿ ಶಿವಮೊಗ್ಗ ಜಿಲ್ಲೆಯ 343 ಮಂದಿಗೆ, ಉತ್ತರ ಕನ್ನಡ 93, ಉಡುಪಿ 2, ಬೆಳಗಾವಿ 2, ಮೈಸೂರು 3, ಚಿಕ್ಕಮಗಳೂರು 1, ಹಾಸನ ಒಬ್ಬರಿಗೆ ಸೇರಿ 445 ಮಂದಿಗೆ ಪಾಸಿಟಿವ್‌ ಬಂದಿತ್ತು. ಒಟ್ಟು 15 ಮಂದಿ ಮೃತಪಟ್ಟಿದ್ದರು. 2020ರಲ್ಲಿ 287 ಮಂದಿಗೆ ಪಾಸಿಟಿವ್‌ ಬಂದಿದ್ದು ಐವರು ಮೃತಪಟ್ಟಿದ್ದರು. 2021ರಲ್ಲಿ 23 ಮಂದಿಗೆ ಪಾಸಿಟಿವ್‌ ಬಂದಿದ್ದು ಶೂನ್ಯ ಮರಣ ದಾಖಲಾಗಿತ್ತು.

2.75 ಲಕ್ಷ ಜನಸಂಖ್ಯೆ
ಕೆಎಫ್‌ಡಿ ಪೀಡಿತ ಜಿಲ್ಲೆಗಳಲ್ಲಿ ಶಿವಮೊಗ್ಗ ಪ್ರಮುಖವಾಗಿದ್ದು, ಅನಂತರದ ಸ್ಥಾನದಲ್ಲಿ ಉತ್ತರಕನ್ನಡ ಜಿಲ್ಲೆ ಇದೆ. ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು ಭಾಗದ 2.75 ಲಕ್ಷ ಜನ ಕೆಎಫ್‌ಡಿ ಬಾಧಿತ ಗ್ರಾಮಗಳ ವ್ಯಾಪ್ತಿಗೆ ಬರುತ್ತಾರೆ.

ಜನ ಏನು ಮಾಡಬೇಕು?
– ಜ್ವರ ಇದ್ದಲ್ಲಿ ನಿರ್ಲಕ್ಷ é ಮಾಡದೆ ತತ್‌ಕ್ಷಣ ಸಮೀಪದ ಪ್ರಾ. ಆರೋಗ್ಯ ಕೇಂದ್ರ, ತಾಲೂಕು ಅಥವಾ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಿ.
– ಮಂಗಗಳಿಗೆ ಕಚ್ಚಿದ ಉಣ್ಣಿ ಮನುಷ್ಯರಿಗೆ ಕಚ್ಚಿದಾಗ ಈ ಕಾಯಿಲೆ ಬರುತ್ತದೆ., ಆದ್ದರಿಂದ ಉಣ್ಣಿ ಕಡಿತದಿಂದ ಪಾರಾಗಲು ಕಾಡಿಗೆ ಹೋಗುವಾಗ ಡಿಎಂಪಿ ಎಣ್ಣೆಯನ್ನು ಮೈಕೈ, ಕಾಲುಗಳಿಗೆ ಹಚ್ಚಿಕೊಂಡು ಹೋಗುವುದು ಉತ್ತಮ. ಜಾನುವಾರುಗಳನ್ನು ಕಾಡು, ಹಾಡಿಗೆ ಮೇಯಲು ಬಿಡುವಾಗ ಎಚ್ಚರಿಕೆ ಅಗತ್ಯ.
– ಮಂಗಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಕಂಡುಬಂದರೆ ಸ್ಥಳೀಯ ಗ್ರಾ.ಪಂ. ಪಿಡಿಒ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ.
– ಯಾವುದೇ ಕಾರಣಕ್ಕೂ ಮಂಗಗಳನ್ನು ಸಾಯಿಸಲು ಹೋಗಬೇಡಿ. ಅದು ಅನಾವಶ್ಯಕ ಗೊಂದಲವನ್ನು ಸೃಷ್ಟಿಸುತ್ತದೆ.
– ಯಾವುದೇ ಗೊಂದಲಗಳಿದ್ದರೆ ಆರೋಗ್ಯ ಇಲಾಖೆ, ಸ್ಥಳೀಯ ಗ್ರಾ.ಪಂ., ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿ, ಪರಿಹಾರ ಕಂಡುಕೊಳ್ಳಿ.

ಮಂಗನ ಕಾಯಿಲೆಯ ಸಂಭಾವ್ಯ ಸವಾಲು ಎದುರಿಸಲು ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ- ಮನೆ ಭೇಟಿ ವೇಳೆ ಅರಿವು ಮೂಡಿಸುತ್ತಿದ್ದಾರೆ. ಭಯ ಬೇಡ. ಆದರೆ ಕಾಡಿಗೆ ಹೋಗುವ ಜನರು, ಜಾನುವಾರುಗಳ ಬಗ್ಗೆ ಮುನ್ನೆಚ್ಚರಿಕೆ ಇರಲಿ.
– ಡಾ| ನಾಗಭೂಷಣ ಉಡುಪ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಮಂಗನ ಕಾಯಿಲೆ ಬಗ್ಗೆ ಭೀತಿ ಬೇಡ, ಆದರೆ ಮುಂಜಾಗ್ರತೆ ಇರಲಿ. ಮಂಗಗಳು ಅಸಹಜವಾಗಿ ಸಾವನ್ನಪ್ಪಿದರೆ ತತ್‌ಕ್ಷಣ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಿ. ಜ್ವರ, ವಿಪರೀತ ತಲೆನೋವಿನಂತಹ ಲಕ್ಷಣ ಕಂಡು ಬಂದರೆ, ನಿರ್ಲಕ್ಷ್ಯ ಮಾಡಬೇಡಿ. ಕಾಡಿಗೆ ಹೋಗುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಡಿಎಂಪಿ ಎಣ್ಣೆ ಹಚ್ಚಿಕೊಂಡು ಹೋದರೆ ಉತ್ತಮ.
– ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next