Advertisement

ಕ್ಯಾಂಪಸ್‌ನಲ್ಲಿರೋರು ಸುಖವಾಗಿರಿ

03:45 AM Jan 24, 2017 | |

ಅವರಿಬ್ಬರೂ ಒಂದೇ ಮನೆಯ ಮಕ್ಕಳಂತೆ ಬೆಳೆದವರು. ಊರಿನ ಜನರೆಲ್ಲ ಕೃಷ್ಣ ಸುಧಾಮನಿಗೆ ಹೋಲಿಸುತ್ತಿದ್ದರು ಅವರ ಗಟ್ಟಿ ಸ್ನೇಹಕ್ಕೆ. ಒಂದೇ ಮರದಡಿ ಮಳೆಯಲ್ಲಿ ಮಿಂದವರು, ಒಂದೇ ರಬ್ಬರ್‌ ಅನ್ನು ತುಂಡರಿಸಿ ಉಪಯೋಗಿಸುತ್ತಿದ್ದರು. ಒಂದೇ ತಟ್ಟೆಯಲ್ಲಿ ಪೇರಳೆ, ಎಳಚಿ, ಕಬಳೆ ಹಣ್ಣುಗಳನ್ನು ಬಕಾಸುರರಂತೆ ಮೆದ್ದವರು.

Advertisement

ಒಂದು ಚೊಂಬು ಹಿಡಿದು ಕೆರೆ ಕಡೆ ಹೋಗುತ್ತಿದ್ದರು. ಹೀಗೆ ಬೆಳೆದವರು ಅದೇ ಊರಿನಲ್ಲಿ ಉದ್ಯೋಗವನ್ನು ಹುಡುಕಿಕೊಂಡು ತಮ್ಮ ಜೀವನವನ್ನು ಸಾಗಿಸಲು ಸಮರ್ಥರಾದವರು. ಹೀಗಿದ್ದಾಗ ಒಬ್ಬನಿಗೆ ಮೂರಂಕಿಯ ಹಣದ ಅವಶ್ಯಕತೆ ಹುಡುಕಿ ಬಂತು. ತುಸು ಹಿಂಜರಿಕೆಯಿಂದಲೇ ತನ್ನ ಆತ್ಮೀಯ ಗೆಳೆಯನನ್ನ ಕೇಳಿದ. ನನ್ನ ಹತ್ತಿರ ಏನೋ ಸಾಲ ಕೇಳಲು ಮುಜುಗರ. ಇಷ್ಟೇನಾ ನಮ್ಮ ಪ್ರಂಡ್‌ಶಿಪ್‌, ತಗೊಳ್ಳೋ ಎಂದು ಹೃದಯದಿಂದ ನೀಡಿದ. 

ಹೀಗೆ ಸ್ವಲ್ಪ ದಿನಗಳು ಕಳೆದರೂ ತಾನು ತೆಗೆದುಕೊಂಡ ಹಣವನ್ನು ವಾಪಸ್‌ ನೀಡಲಿಲ್ಲ. ನಾನೇನೋ ಅವನನ್ನು ಕೇಳಲಾಗುವುದಿಲ್ಲ. ಅದನ್ನ ಅರಿತಾದರು ತಾನೇ ಬಂದು ಹಣ ನೀಡಬಹುದಿತ್ತಲ್ಲ ಎಂದುಕೊಂಡ. ಇತ್ತ ಹಣ ಪಡೆದ ಸ್ನೇಹಿತ ಇಷ್ಟು ಸಣ್ಣ ಹಣವನ್ನು ಹಿಂತಿರುಗಿಸಲು ಹೊರಟರೆ ನಮ್ಮ ಗೆಳೆತನಕ್ಕೆ ಮಾಡಿದ ಅಪಮಾನ ಎಂದು ಅವನು ತನ್ನ ಸಂಬಂಧವನ್ನು ಕಡಿದುಕೊಂಡರೆ ಎಂದು ಚಿಂತಿಸಿದ. ಅಂತೂ ಇವನು ಹಣ ಕೇಳುವುದು ತರವಲ್ಲ ಎಂದು ಕೇಳಲಿಲ್ಲ, ಅವನು ಕೇಳದೆ ಕೊಡುವುದು ಹೇಗೆಂದು ಚಿಂತಿಸಿ ಚಿಂತಿಸಿ ಸಾಯುವವರೆಗೂ ಇಬ್ಬರು ಕೊರಗಿದರು. ಒಬ್ಬರೂ ಸಹ ಮನಬಿಚ್ಚಿ ಮಾತನಾಡದೆ ಸ್ನೇಹವನ್ನು ಕಳೆದುಕೊಂಡರು. 

ಈ ಕಥೆಯನ್ನು ನೀವು ಕೇಳಿರಬಹುದು, ಇದೇ ಕಥಾ ವಸ್ತುವನ್ನು ತುಸು ಬದಲಿಸಿ ಪ್ರೀತಿಗೆ ಅನುಕರಿಸಿದರೆ ಹೀಗಿರುತ್ತದೆ. 

ಆ ಎರಡು ಹದಿಹರೆಯದ ಮನಸ್ಸುಗಳು. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುತ್ತಾರೆ. ಮೊದ ಮೊದಲು ಅನುಕ್ಷಣವು ಅವಳಿಗಾಗಿ ಕಾತರಿಸುತ್ತಿದ್ದವ ಈಗೀಗ ಕಡೆಗಣಿಸುತ್ತಿದ್ದಾನೆ ಎನಿಸುತ್ತದೆ. ಅವನಿಗೆ/ಳಿಗೆ ಬಿಡುವಿಲ್ಲದ ಕೆಲಸ, ಜವಾಬ್ದಾರಿಗಳು ತಲೆಯಲ್ಲಿ ಕೂತಿವೆ. ಅವನು ಕರೆ ಮಾಡಲು ಬ್ಯುಸಿ ಇರುತ್ತಾನೆಂದು ಇವಳು, ಇವಳೇ ವಿಚಾರಿಸಲಿ ಮೊದಲು ಎಂದು ಅವನು. 

Advertisement

ಅವನಿಗೆ ನನ್ನ ನೆನಪಾಗಿದ್ದಿದ್ದರೆ ಭೇಟಿ ಮಾಡುತ್ತಿದ್ದ, ನಾನೇ ಏಕೆ ಮೊದಲು ಮಾತನಾಡಿಸಲಿ ಅಥವಾ ಮರೆತು ಮತ್ತೂಬ್ಬರೊಂದಿಗೆ ಖುಷಿಯಾಗಿರುವವನನ್ನು ನಾನೇಕೆ ಡಿಸ್ಟರ್ಬ್ ಮಾಡಲಿ ಎಂದು ಇವಳ ಹಠ. ಪ್ರೀತಿಯಿಂದ ಒಂದೆರಡು ಮೆಸೇಜ್‌ ಹಾಕಿದ್ದರೆ ನಾನೇ ಓಡಿ ಹೋಗಿ ಅಪ್ಪುಗೆ ನೀಡುತ್ತಿದ್ದೆ. ಅವಳು ನನ್ನ ಮರೆತು ಹಾಯಾಗಿರುವಾಗ ನಾನೇ ಏಕೆ ಭಾವನೆಗಳನ್ನು ಭಿತ್ತಿ ನೆಮ್ಮದಿಯನ್ನು ಹಾಳು ಮಾಡಲಿ ಎಂದು ಇವನ ಅಳಲು. 

ಅದರ ಬದಲು ನನ್ನ ಪಾಡಿಗೆ ನಾನು ಇದ್ದು ಅವಳ/ನ ಸಂತೋಷವೇ ನನ್ನ ಸಂತಸ ಎಂದು ಮನದಲ್ಲಿ ನೋವುಂಡು ತಾವೇ ಸಂಬಂಧಕ್ಕೆ ಒಂದು ಚೌಕಟ್ಟು ನಿರ್ಮಿಸಿ ಹಣೆಬರಹವನ್ನು ಮತ್ತು ತಮ್ಮ ಲಕ್‌ ಅನ್ನು ದೂಷಿಸುತ್ತಾ ಕೊರಗುತ್ತಾರೆ. 

ಈ ಕತೆಯ ನೀತಿ-
ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಪ್ರಯತ್ನಿಸದೆ ಅಂಗೈಯಲ್ಲೇ ಸಿಕ್ಕುವ ಹಾಲಿನಂಥ ಸಂಬಂಧವನ್ನು ದೂರಾಗಿಸಿಕೊಂಡು ಮನದ ಮೂಲೆಯಲ್ಲಿ ವ್ಯಥೆ ಪಡುವುದೇಕೆ? ತುಸು ಅಹಂನನ್ನು ಬಿಟ್ಟು ಒಬ್ಬರು ಒಂದಡಿ ಹೆಜ್ಜೆ ಇಟ್ಟರೆ ಮತ್ತೂಬ್ಬರು ಎರಡು ಹೆಜ್ಜೆ ಮುಂದಿಡಲು ಸಿದ್ಧರಿರುತ್ತಾರೆ. ಮಾತುಗಳಲ್ಲಿ ಹೇಳದಿದ್ದರು ನಿಮ್ಮ ಸಾಮಿಪ್ಯಕ್ಕೆ, ಒಲವಿನ ದನಿಗಾಗಿ ಹಾತೊರೆಯುತ್ತಿರುತ್ತಾರೆ. ತೃಪ್ತಿ ತರದ, ಏನೋ ಕಳೆದುಕೊಂಡ ನೋವನ್ನು ನೀಡುವ ಅಹಂ ಬಿಟ್ಟು ನಿಮ್ಮ ಪ್ರೀತಿಯನ್ನು ಎಕ್ಸ್‌ಪ್ರೆಸ್‌ ಮಾಡಿ ಮತ್ತೂಂದು ಹೃದಯವು ಸ್ಪಂದಿಸುತ್ತದೆ. ಅಷ್ಟೇ ಸಡಗರದ ಅನುರಾಗವನ್ನು ಹೊತ್ತು ತರುತ್ತದೆ. ಸೋ ಬೀ ಎಕ್ಸ್‌ಪ್ರೆಸ್ಸಿವ್‌ ಇನ್‌ ಲವ್‌ ರಿಲೇಷನ್‌ಶಿಪ್‌.

– ಮಲ್ಲಿಗೆ 

Advertisement

Udayavani is now on Telegram. Click here to join our channel and stay updated with the latest news.

Next