ನವದೆಹಲಿ: ಈ ವರ್ಷದ ಐಪಿಎಲ್ ಪ್ಲೇಆಫ್ ಟಿಕೆಟ್ ಪಡೆಯಲು ವಿಫಲವಾದರೂ ಮುಂದಿನ ಋತುವಿನಲ್ಲಿ ಕೆ.ಎಲ್.ರಾಹುಲ್ ಮತ್ತು ಅನಿಲ್ ಕುಂಬ್ಳೆ ಅವರ ನೇತೃತ್ವ ಉಳಿಸಿಕೊಳ್ಳಲು ಪಂಜಾಬ್ ಫ್ರಾಂಚೈಸಿ ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಆದರೆ ನಿರೀಕ್ಷೆಯನ್ನು ಸಂಪೂರ್ಣ ಹುಸಿಗೊಳಿಸಿದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಶೆಲ್ಡನ್ ಕಾಟ್ರೆಲ್ ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಒತ್ತಡದ ನಡುವೆಯೂ 670 ರನ್ ಪೇರಿಸಿ ಗಮನ ಸೆಳೆದಿದ್ದರು. ಕೋಚ್ ಆಗಿರುವ ಕುಂಬ್ಳೆ ಅವರಿಗೆ ಇದು ಮೊದಲ ವರ್ಷದ ಒಡಂಬಡಿಕೆ ಆಗಿದೆ. ಹೀಗಾಗಿ ಇನ್ನು ಆರು ತಿಂಗಳೊಳಗೆ ನಡೆಯುವ ಸಾಧ್ಯತೆ ಹೊಂದಿರುವ 2021ರ ಐಪಿಎಲ್‌ನಲ್ಲಿ ಕರ್ನಾಟಕದ ಈ ಜೋಡಿಯನ್ನು ಮುಂದು ವರಿಸುವುದು ಫ್ರಾಂಚೈಸಿಯ ಉದ್ದೇಶವಾಗಿದೆ.
ಇದನ್ನೂ ಓದಿ:ಐಪಿಎಲ್ 2020: ಪಡಿಕ್ಕಲ್, ಇಶಾನ್, ನಟರಾಜನ್.. ಪ್ರತಿಭೆಗಳ ಮಹಾ ಸಂಗಮ
ಈ ಬಾರಿಯ ಐಪಿಎಲ್ ನಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮೊಹಮ್ಮದ್ ಶಮಿ, ರವಿ ಬಿಶ್ನೋಯಿ ಅವರಂಥಹ ಅನುಭವಿ ಹಾಗೂ ಪ್ರತಿಭಾನ್ವಿತರ ಪಡೆಯನ್ನು ಹೊಂದಿಯೂ ತಂಡವಾಗಿ ಆಡದಿದ್ದುದು ಪಂಜಾಬ್‌ಗ ಹಿನ್ನಡೆಯಾಗಿ ಪರಿಣಮಿಸಿತ್ತು.
ಆದರೆ ನಾಯಕ, ಕೋಚ್ ಬಗ್ಗೆ ಮಾಲಿಕರು ಖುಷಿಯಾಗಿದ್ದಾರೆ. ದ್ವಿತೀಯಾರ್ಧದಲ್ಲಿ ತಂಡ ಉತ್ತಮ ಪ್ರಯತ್ನವನ್ನು ಮಾಡಿತ್ತು. ತಂಡಕ್ಕೆ ಪವರ್ ಹಿಟ್ಟರ್, ವಿಶ್ವ ದರ್ಜೆಯ ವೇಗಿಯೊಬ್ಬರು ಬೇಕಾಗಿದ್ದಾರೆ’ ಎಂದು ಮೂಲವೊಂದು ಹೇಳಿದ್ದಾರೆ.