“ಮಿಸ್ಟರ್ ಎಲ್‌ಎಲ್‌ಬಿ’ ಚಿತ್ರತಂಡ ಕೊಂಚ ಟೆನ್ಷನ್ ಆಗಿತ್ತು. ಕಾರ್ಯಕ್ರಮ ಆಯೋಜನೆಯಾಗಿದ್ದು ಸಂಜೆ 5.30ಕ್ಕೆ. ಸುದೀಪ್ ಅತಿಥಿಯಾಗಿ ಬರಲು ಕೂಡಾ ಒಪ್ಪಿಕೊಂಡಿದ್ದರು. ಚಿತ್ರತಂಡ ಖುಷಿಯಾಗಿಯೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಡಿಯೋ ರಿಲೀಸ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಂಜೆ ಸುರಿದ ಜಡಿಮಳೆಯಿಂದಾಗಿ ಬರಬೇಕಾದವರೆಲ್ಲಾ ಮಳೆ, ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿದ್ದರು.
ಅದರಲ್ಲೂ ಅಂದಿನ ಮುಖ್ಯ ಆಕರ್ಷಣೆಯಾಗಿದ್ದ ಸುದೀಪ್ ಅವರು 7 ಗಂಟೆ ದಾಟಿದರೂ ಬಾರದಿರುವಾಗ ಟೆನ್ಸ್ ಆದ ಚಿತ್ರತಂಡ ಸ್ಟುಡಿಯೋ ದ್ವಾರದಲ್ಲಿ ಸುದೀಪ್‌ಗಾಗಿ ಎದುರು ನೋಡುತ್ತಿತ್ತು. ಕೊನೆಗೂ ಸುದೀಪ್ ಬಂದೇ ಬಿಟ್ಟರು. ಚಿತ್ರತಂಡದ ಮೊಗದಲ್ಲಿ ಹರ್ಷ. ಆಡಿಯೋ ಬಿಡುಗಡೆ ಮಾಡಿದ ಸುದೀಪ್ ಚಿತ್ರತಂಡಕ್ಕೆ ಶುಭಕೋರಿದರು. “ಚಿತ್ರದ ಟೈಟಲ್‌ಗೂ ನಾಯಕನ ಗೆಟಪ್‌ಗೂ ಸಂಬಂಧವೇ ಇಲ್ವಲ್ಲಾ ಎಂದು ಆರಂಭದದಲ್ಲಿ ನನಗೆ ಅನಿಸಿತು.
ಈಗ ಆ ಟೈಟಲ್ ಯಾಕಿಟ್ಟಿದ್ದಾರೆಂದು ಗೊತ್ತಾಗಿದೆ. ನಾಯಕ ಶಿಶಿರ್ ಅವರಲ್ಲಿ ಒಳ್ಳೆಯ ಪ್ರತಿಭೆ ಇದೆ. ಈ ಸಿನಿಮಾ ಅವರಿಗೆ ಯಶಸ್ಸು ಕೊಡಲಿ’ ಎಂದ ಸುದೀಪ್, “ಸಿನಿಮಾ ಮಾಡೋದು ದೊಡ್ಡದಲ್ಲ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯ ಚಿತ್ರಗಳು ನಿರ್ಮಾಣವಾಗುತ್ತಿವೆ. ಆದರೆ, ಅವೆಲ್ಲವೂ ಬಿಡುಗಡೆಯ ಹಂತದಲ್ಲಿ ಎಡವುತ್ತವೆ. ಈ ಟ್ರಾಫಿಕ್‌ನಲ್ಲಿ ಹುಷಾರಾಗಿ ಬರಬೇಕು’ ಎಂಬ ಸಲಹೆ ನೀಡಿದರು ಸುದೀಪ್.
ಚಿತ್ರದಲ್ಲಿ ಶಿಶರ್ ನಾಯಕರಾಗಿ ನಟಿಸಿದ್ದಾರೆ. ಚಿತ್ರದ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬರಬೇಕೆಂದು ಆಹ್ವಾನಿಸಲು ಸುದೀಪ್ ಅವರ ಮನೆಗೆ ಹೋದಾಗ, ಸುದೀಪ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಲ್ಲದೇ, ಚಿತ್ರರಂಗದಲ್ಲಿ ಹೇಗಿರಬೇಕು, ಯಾವ ತರಹದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಟಿಪ್ಸ್ ಕೂಡಾ ನೀಡಿದರಂತೆ. ಚಿತ್ರದ ಬಗ್ಗೆ ಮಾತನಾಡುವ ಶಿಶಿರ್, “ಇಲ್ಲಿ ಎಲ್‌ಎಲ್‌ಬಿ ಅಂದರೆ ಲ್ಯಾಂಡ್ ಲಾರ್ಡ್ ಭದ್ರ ಎಂದರ್ಥ.
ಆತ ಇಡೀ ಊರಿಗೇ ಕ್ವಾಟ್ಲೆ ಕೊಡುವಂಥ ವ್ಯಕ್ತಿಯಾಗಿರುತ್ತಾನೆ. ಆತನ ಜೀವನದಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ’ ಎಂದು ವಿವರ ಕೊಟ್ಟರು ಶಿಶಿರ್. ಈ ಚಿತ್ರವನ್ನು ರಘುವರ್ಧನ್ ನಿರ್ದೇಶಿಸಿದ್ದಾರೆ. ಇವರಿಗಿದು ಎರಡನೇ ಸಿನಿಮಾವಂತೆ. “ಗುಣವಂತ’ ಚಿತ್ರ ನನ್ನ ನಿರೀಕ್ಷೆಯ ಮಟ್ಟ ತಲುಪಲಿಲ್ಲ.
ಆಗ ಮುಂದೇನು ಎಂಬ ಗೊಂದಲದಲ್ಲಿದ್ದೆ. ಈಗ ಎಲ್ಲಾ ಸ್ನೇಹಿತರ ಸಹಕಾರ, ಪ್ರೋತ್ಸಾಹದಿಂದ ಈ ಚಿತ್ರವನ್ನು ಮಾಡಿದ್ದೇನೆ. ಚಿತ್ರ ಈಗ ರಿಲೀಸ್ ಹಂತಕ್ಕೆ ಬಂದಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ’ ಎಂದರು. ಚಿತ್ರಕ್ಕೆ ಮಂಜು ಚರಣ್ ಸಂಗೀತ, ಸುರೇಶ್ ಬಾಬು ಛಾಯಾಗ್ರಹಣವಿದೆ. ಲೇಖಾ ಚಂದ್ರ ಈ ಚಿತ್ರದ ನಾಯಕಿ.