Advertisement

ಕೆವಿಜಿ ಸಂಸ್ಥೆಗೆ ಅವಹೇಳನ: ಸಿಡಿದೆದ್ದ ವಿದ್ಯಾರ್ಥಿಗಳು

12:40 PM Sep 07, 2018 | |

ಸುಳ್ಯ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸುಳ್ಯದ ಕೆವಿಜಿ ವಿದ್ಯಾಸಂಸ್ಥೆ ಕುರಿತು ಅವಹೇಳನ ನಡೆಸುತ್ತಿರುವುದನ್ನು ಖಂಡಿಸಿ ಕೆವಿಜಿ ಕ್ಯಾಂಪಸ್‌ ಹಿತರಕ್ಷಣ ವೇದಿಕೆ ವತಿಯಿಂದ ಬೃಹತ್‌ ಪ್ರತಿಭಟನೆ ಗುರುವಾರ ನಡೆಯಿತು. ಸಹಸ್ರಾರು ವಿದ್ಯಾರ್ಥಿಗಳು ಬೀದಿಗಿಳಿದು ಕಿಡಿಕಾರಿದ್ದಾರೆ. ಕೆವಿಜಿ ವಿದ್ಯಾಸಂಸ್ಥೆಯ ಮುಂಭಾಗದ ಕುರುಂಜಿ ವೆಂಕಟ್ರಮಣ ಗೌಡರ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ ಮೆರವಣಿಗೆ ಆರಂಭಗೊಂಡಿತು. ಸುಳ್ಯದ ಮುಖ್ಯ ಪೇಟೆಯಲ್ಲಿ ತೆರಳಿದ ಮೆರವಣಿಗೆ ಗಾಂಧಿನಗರದ ತನಕ ತೆರಳಿ ಹಿಂದಿರುಗಿ ಬಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡಿತು.

Advertisement

ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ಕಿಚ್ಚು ಹಚ್ಚಿಸಿದ ಕಲ್ಯಾಣಪ್ಪ ಜನ್ಮ ತಾಳಿದ ಪುಣ್ಯಭೂಮಿ ಸುಳ್ಯ. ಈ ನೆಲದಲ್ಲಿ ಶಿಕ್ಷಣದ ಮೂಲಕ ಸಹಸ್ರಾರು ಮಂದಿಗೆ ಶಿಕ್ಷಣದ ಸಂಜೀವಿನಿಯನ್ನು ಕುರುಂಜಿ ವೆಂಕಟ್ರಮಣ ಗೌಡರು ನೀಡಿದ್ದಾರೆ. ಸಾವಿರಾರು ಮಂದಿಯ ಬದುಕಿಗೆ ಬೆಳಕು ನೀಡಿದ ಅವರು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆ ವಿರುದ್ಧ ಒಬ್ಬ ವ್ಯಕ್ತಿಯಷ್ಟೇ ಅಪಪ್ರಚಾರ ನಡೆಸುತ್ತಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕುರುಂಜಿ ಸಂಸ್ಥೆ ಸಹಿತ ಶಿಕ್ಷಣ ಸಂಸ್ಥೆಗಳ ಮೇಲೆ ದಬ್ಟಾಳಿಕೆ ಹಲವು ರೂಪಗಳಲ್ಲಿ ಮತೀಯರು ನಡೆಸುತ್ತಿದ್ದಾರೆ ಎಂದರು.  ಶಿಕ್ಷಣ ಸಂಸ್ಥೆಯ ಶಕ್ತಿ ದೊಡ್ಡದಿದೆ. ಎದುರಿಸುವ ತಾಕತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಇದೆ ಎಂದರು.

ಸಹಿಸಲು ಸಾಧ್ಯವಿಲ್ಲ
ಸುಳ್ಯದ ಮುಸಲ್ಮಾನ ಸಮುದಾಯ ಕುರುಂಜಿ ಸಂಸ್ಥೆಯ ಪರವಾಗಿ ಬರುತ್ತದೆ ಎಂದು ತಾ| ಅಲ್ಪಸಂಖ್ಯಾಕರ ವಿ.ವಿ. ಸಹಕಾರಿ ಸಂಘದ ಅಧ್ಯಕ್ಷ ಆರ್‌.ಕೆ. ಮಹಮ್ಮದ್‌ ಹೇಳಿದರು. ಅಪಪ್ರಚಾರ ನಿಲ್ಲಿಸದಿದ್ದರೆ ನ.ಪಂ. ಒಳಗೆ ಪ್ರತಿಭಟಿಸುವುದು ಅನಿವಾರ್ಯ ಎಂದು ತಾ| ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್‌ ರೈ ಮೇನಾಲ ಹೇಳಿದರು. ಪ್ರಚಾರಕ್ಕಾಗಿ ಸಭೆಯಲ್ಲಿ ಸುಳ್ಳು ಮಾತನಾಡುತ್ತಾರೆ ಎಂದು ಗೌಡ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್‌ ಮಡಪ್ಪಾಡಿ ಹೇಳಿದರು. ಕುರುಂಜಿ ಸಂಸ್ಥೆ ವಿರುದ್ಧ ಅಪಪ್ರಚಾರ ನಡೆಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗೌಡ ಮಹಿಳಾ ಘಟಕದ ವಿನುತಾ ಪಾತಿಕಲ್ಲು ಹೇಳಿದರು.

ಸುಳ್ಯದ ಪ್ರತಿಯೊಬ್ಬರಿಗೂ ಕುರುಂಜಿಯವರ ಋಣ ಇದೆ. ಈ ಪ್ರತಿಭಟನೆಯಲ್ಲಿ ಉಪಸ್ಥಿತರಿರುವ ಮೂಲಕ ಎಲ್ಲರೂ ಈ ಋಣ ಸಂದಾಯ ಮಾಡಬೇಕಿತ್ತು. ನ.ಪಂ.ನಲ್ಲಿ 19 ಮಂದಿ ಸದಸ್ಯರಿದ್ದಾರೆ. ಇವತ್ತು ಒಬ್ಬ ಸದಸ್ಯ ಬಾರದಿದ್ದರೆ ಕ್ಷಮೆ ಇತ್ತು. ನ.ಪಂ. ಸದಸ್ಯರು ಬಂದಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನ.ಪಂ. ವಿರುದ್ಧವಲ್ಲ: ವಳಲಂಬೆ
ನ.ಪಂ. ಸದಸ್ಯರೊಬ್ಬರ ವಿರುದ್ಧ ನಮ್ಮ ಹೋರಾಟವೇ ಹೊರತು ಇಡೀ ಆಡಳಿತದ ವಿರುದ್ಧವಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್‌ ವಳಲಂಬೆ ಹೇಳಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ (ಕೆವಿಜೆಪಿ) ಶೈಲೇಶ್‌ ಅಂಬೆಕಲ್ಲು ಕಾರ್ಯಕ್ರಮ ನಿರ್ವಹಿಸಿದರು. ಕೆವಿಜಿ ಕ್ಯಾಂಪಸ್‌ ಹಿತರಕ್ಷಣ ಸಮಿತಿ ಸಂಚಾಲಕ ನಿಕೇಶ್‌ ಉಬರಡ್ಕ, ಅಧ್ಯಕ್ಷ ಕೌಶಲ್‌ ಪಿ.ಆರ್‌., ಉಪಾಧ್ಯಕ್ಷ ದುಷ್ಯಂತ್‌ ಶೀರಡ್ಕ, ಪ್ರಧಾನ ಕಾರ್ಯದರ್ಶಿಮುಖೇಶ್‌ ಬಳ್ಳಡ್ಕ, ಚಂದನ ಕೆ.ಎಸ್‌. ವೇದಿಕೆಯಲ್ಲಿದ್ದರು.

Advertisement

ಹಲವು ಗಣ್ಯರ ಉಪಸ್ಥಿತಿ
ಪ್ರತಿಭಟನೆಯಲ್ಲಿ ಪ್ರಮುಖರಾದ ವೆಂಕಟ್‌ ದಂಬೆಕೋಡಿ, ಪಿ.ಕೆ. ಉಮೇಶ್‌, ಸಿದ್ದಿಕ್‌ ಕೊಕ್ಕೊ, ಹರೀಶ್‌ ಕಂಜಿಪಿಲಿ, ಪಿ.ಎ. ಮಹಮ್ಮದ್‌, ರಫೀಕ್‌ ಪಡು, ಪಿ.ಎಸ್‌. ಗಂಗಾಧರ್‌, ಚಂದ್ರಶೇಖರ ಚೋಡಿಪನೆ, ನವೀನ್‌ ರೈ ಮೇನಾಲ, ಎ.ವಿ. ತೀರ್ಥರಾಮ, ಶ್ರೀನಾಥ್‌ ಆಲೆಟ್ಟಿ, ಸಂತೋಷ್‌ ಮಡ್ತಿಲ, ಸತೀಶ್‌ ಕೆ.ಜಿ., ಮೋಹನ್‌ ರಾಮ್‌ ಸುಳ್ಳಿ, ಸುರೇಶ್‌ ಕಣೆಮರಡ್ಕ, ಹರೀಶ್‌ ರೈ ಉಬರಡ್ಕ, ದೀಪಕ್‌ ಕುತ್ತಮೊಟ್ಟೆ, ಚಂದ್ರಶೇಖರ್‌ ಪನ್ನೆ, ಶೈಲೇಂದ್ರ ಸರಳಾಯ, ಪ್ರೀತಂ ಬಿ.ಕೆ., ಪ್ರಭಾಕರ್‌ ನಾಯರ್‌, ಕೆವಿಜಿ ಸಂಸ್ಥೆಯ ಉದ್ಯೋಗಿಗಳು ಭಾಗವಹಿಸಿದ್ದರು.

ತೆರಿಗೆ ಮನ್ನಾ ಮಾಡಿ
ಪ್ರಾಸ್ತಾವಿಕ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್‌ ಸುಳ್ಯ ಇಷ್ಟೊಂದು ಅಭಿವೃದ್ಧಿ ಹೊಂದಬೇಕಿದ್ದರೆ ಅದಕ್ಕೆ ಕಾರಣ ಕುರುಂಜಿ. ಇಲ್ಲಿ ಶಿಕ್ಷಣ ಪಡೆದ ಅದೆಷ್ಟೋ ಮಂದಿ ಉನ್ನತ ಉದ್ಯೋಗ ಪಡೆದಿದ್ದಾರೆ. ನಗರ ಬೆಳೆದು ಹಲವು ಮಂದಿಅನನ್ಯ ಕಸುಬು ಮಾಡಿಕೊಂಡು ಜೀವನದ ದಾರಿ ಕಂಡುಕೊಂಡಿದ್ದಾರೆ. ಶಿಕ್ಷಣ ಸಂಸ್ಥೆ ವಿರುದ್ಧ ಅಪಪ್ರಚಾರ ಮಾಡಬಾರದು. ಸಂಸ್ಥೆಯವರು ತೆರಿಗೆ ಪಾವತಿ ಮಾಡುತ್ತಿದ್ದಾರೆ. ನ.ಪಂ. ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಕೆವಿಜಿ ಶಿಕ್ಷಣ ಸಂಸ್ಥೆಯ ತೆರಿಗೆಯನ್ನು ವಿನಾಯಿತಿ ನೀಡಿ ಸಂಪೂರ್ಣ ಮನ್ನಾ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next