ಮಹಾಲಿಂಗಪುರ: ರಾಜ್ಯವಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಲ್ಲೇ ಪಾರಿಜಾತ ಪಸರಿಸಿದ ಖ್ಯಾತಿ ಜಾನಪದ ರಂಗಭೂಮಿ ಕಲಾವಿದೆ ದಿ| ಕೌಜಲಗಿ ನಿಂಗಮ್ಮಳಿಗೆ ಸಲ್ಲುತ್ತದೆ. ಇಂತಹ ಮೇರುಕಲೆಯ ಮೂಲಕ ಮಹಾಲಿಂಗಪುರದ ಕೀರ್ತಿಯನ್ನು ದೇಶ್ಯಾದ್ಯಂತ ಪಸರಿಸಿದ ಕಲಾದೇವತೆಯ ಸ್ಮಾರಕ ಸಾಂಸ್ಕೃತಿಕ ಭವನ ಕಾಮಗಾರಿ ಆರಂಭವಾಗಿ ಸುದೀರ್ಘ 5 ವರ್ಷ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ.
ಆಮೆಗತಿಯಲ್ಲಿ ಕಾಮಗಾರಿ: ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ 24-4-2014ರಂದು 1.10 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೌಜಲಗಿ ನಿಂಗಮ್ಮ ಸ್ಮಾರಕ ಭವನ ಕಾಮಗಾರಿ ಇಲಾಖೆ ಅಧಿಕಾರಿಗಳ ಬದಲಾವಣೆ, ಮಳೆಯ ನೈಸರ್ಗಿಕ ತೊಂದರೆ, ಮರಳಿನ ಅಭಾವ, ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿ ಮೂರು ವರ್ಷ ಹಿಡಿಯಿತು. (2017 ಜುಲೈ). ಕಾಮಗಾರಿ ಕಟ್ಟಡ ಮಾತ್ರ ಮುಗಿದು, ಕೆಲಸ ಅರ್ಧಕ್ಕೆ ನಿಂತ ಕಾರಣ ಅಂದಿನ ಶಾಸಕಿ, ಸಚಿವೆ ಉಮಾಶ್ರೀ ಬಾಕಿ ಉಳಿದ ಕಾಮಗಾರಿಗೆ ಹೆಚ್ಚುವರಿ ಎರಡು ಕೋಟಿ ಮಂಜೂರಿ ಮಾಡಿಸಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು (13-9-2017) ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಕಾಮಗಾರಿ ಗುತ್ತಿಗೆ ಪಡೆದು 1 ವರ್ಷ 9 ತಿಂಗಳು ಕಳೆದರೂ ಇಂದಿಗೂ ಕಾಮಗಾರಿ ಪೂರ್ಣವಾಗಿಲ್ಲ. ಕಾಮಗಾರಿ ಪೂರ್ಣಗೊಂಡು ಈ ಭವನ ಯಾವಾಗ ಉದ್ಘಾಟನೆಗೊಳ್ಳುವುದೋ ಕಾಯಬೇಕಿದೆ.
Advertisement
ಅರ್ಧಕ್ಕೆ ನಿಂತ ಸ್ಮಾರಕ ಭವನ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಭವನದ ಸುತ್ತಲೂ ಗಿಡಗಂಟಿಗಳು ಬೆಳೆದಿರುವುದರಿಂದ ಸುತ್ತಲಿನ ಜಾಗೆ ಬಯಲು ಶೌಚವಾಗಿ ಮಾರ್ಪಾಡಾಗಿದೆ.
ದಶಕಗಳ ಕನಸು ನನಸು:
ತನ್ನ ಕಲಾ ಪ್ರತಿಭೆಯಿಂದ ಪಟ್ಟಣ ಹೆಸರನ್ನು ಎಲ್ಲೆಡೆ ಬೆಳಗಿಸಿದ ಕೌಜಲಗಿ ನಿಂಗಮ್ಮಳ ಮರಣಾ ನಂತರ ಪಟ್ಟಣದಲ್ಲಿ ಅವಳ ಹೆಸರಿನಲ್ಲಿ ಸ್ಮಾರಕ ಭವನ ಆಗಬೇಕೆಂದು ಕಲಾವಿದರ, ಸಾಹಿತಿಗಳ ಎರಡು ದಶಕಗಳ ಕನಸನ್ನು ಮಾಜಿ ಸಚಿವೆ ಉಮಾಶ್ರೀ ನನಸಾಗಿಸಿದರು. ತಮ್ಮ ಅಧಿಕಾರವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.10 ಕೋಟಿ ರೂ. ಮಂಜೂರಿ ಮಾಡಿಸಿ 22-12-2014ರಂದು ಭವನ ಕಾಮಗಾರಿಗೆ ಚಾಲನೆ ನೀಡಿದ್ದರು.
•ಚಂದ್ರಶೇಖರ ಮೋರೆ