ಮಂಗಳೂರು: ಕೋವಿಡ್ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಮಾತ್ರ ವಿಮಾನ ಏರಬಹುದು ಎಂದು ಕರ್ನಾಟಕ ಸರಕಾರವು ಪರಿಷ್ಕೃತ ಆದೇಶ ಹೊರಡಿಸಿರುವುದು ಕುವೈಟ್‌ನಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಉದ್ದೇಶಿಸಿರುವ ಕನ್ನಡಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕುವೈಟ್‌ನಿಂದ ಕರ್ನಾಟಕಕ್ಕೆ ಕೇಂದ್ರ ಸರಕಾರದ ವಂದೇ ಭಾರತ್ ಮಿಶನ್ ಅಡಿಯಲ್ಲಿ ಒದಗಿಸಿರುವ ವಿಮಾನಗಳ ಸಂಖ್ಯೆ ಬಹಳಷ್ಟು ಕಡಿಮೆ; ಅದರಲ್ಲೂ ಮಂಗಳೂರಿಗೆ ತೀರಾ ಕಡಿಮೆ. ಖಾಸಗಿ ವಿಮಾನಗಳಲ್ಲಿ ಕನ್ನಡಿಗರನ್ನು ಕರೆತರಲು ಅನುಮತಿಸಲೂ ರಾಜ್ಯ ಸರಕಾರ ಹಿಂದೆಮುಂದೆ ನೋಡುತ್ತಿದೆ. ಜೂನ್ 27 ರಂದು ದಿಢೀರನೆ ರದ್ದಾಗಿದ್ದ ಕುವೈಟ್-ಮಂಗಳೂರು ಖಾಸಗಿ ವಿಮಾನಕ್ಕೆ ಜು. 4 ರಂದು ಪ್ರಯಾಣಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.
ಕುವೈಟ್‌ನಲ್ಲಿ ಪರೀಕ್ಷಾ ವ್ಯವಸ್ಥೆಯೇ ಇಲ್ಲದಿರುವಾಗ ಪ್ರಮಾಣ ಪತ್ರ ತರುವುದೆಲ್ಲಿಂದ ಎಂಬುದು ಕುವೈಟ್ ಕನ್ನಡಿಗರ ಪ್ರಶ್ನೆ. ಕೇರಳ ಸರಕಾರವು ಕೊರೊನಾ ನೆಗೆಟಿವ್ ಪ್ರಮಾಣ ಹೊಂದಿರ ಬೇಕೆಂಬ ನಿಯಮದಿಂದ ಕೇರಳ ಸರಕಾರ ತನ್ನ ರಾಜ್ಯದ ಪ್ರಯಾಣಿಕರಿಗೆ ವಿನಾಯಿತಿ ನೀಡಿದೆ. ಅದೇ ರೀತಿ ಕರ್ನಾಟಕವೂ ಈ ನಿಯಮವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕುವೈಟ್‌ನಲ್ಲಿರುವ ಮಂಗಳೂರಿನ ಎಂಜಿನಿಯರ್ ಒಬ್ಬರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಅವರನ್ನು ಸಂಪರ್ಕಿಸಿ ತಮ್ಮ ಬೇಡಿಕೆಯನ್ನು ಕರ್ನಾಟಕ ಸರಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಇಕ್ಕಟ್ಟಿನಲ್ಲಿ ಪ್ರಯಾಣಿಕರು
ವಿಶೇಷ ಎಂದರೆ ಕುವೈಟ್‌ನಲ್ಲಿ ಹೊರದೇಶಗಳ ಯಾವುದೇ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡಿ ಕಳುಹಿಸುವ ವ್ಯವಸ್ಥೆಯೇ ಇಲ್ಲ. ಕುವೈಟ್ ಏರ್‌ವೆಸ್ ವಿಮಾನಕ್ಕೆ ಮಾತ್ರ ಈ ಸೌಲಭ್ಯವಿದೆ. ಇಷ್ಟೇ ಅಲ್ಲದೆ ಕುವೈಟ್ ಏರ್‌ವೆಸ್ ವಿಮಾನಗಳಿಗೆ ಪ್ರತ್ಯೇಕ ಟರ್ಮಿನಲ್ ಇದ್ದು, ಅಲ್ಲಿಗೆ ಹೊರ ದೇಶಗಳ ವಿಮಾನಗಳಿಗೆ ಪ್ರವೇಶವಿಲ್ಲ. ಇದು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.