ಬೀದರ್: ಹೆಮ್ಮಾರಿ ಕೋವಿಡ್ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡು ಗಲ್ಫ್ ರಾಷ್ಟ್ರ ಕುವೈತ್‌ನಲ್ಲಿ ಸಿಲುಕಿದ್ದ ಬೀದರ ಮತ್ತು ಕಲಬುರಗಿಯ ಕನ್ನಡಿಗರು ಜಿಲ್ಲೆಯ ಜನಪ್ರತಿನಿಧಿಗಳ ಪ್ರಯತ್ನದಿಂದ ನಿರಾಳರಾಗಿದ್ದು, ಬುಧವಾರ ಮೊದಲ
ಹಂತದಲ್ಲಿ 98 ಜನ ಸ್ವದೇಶಕ್ಕೆ ಮರಳಿದ್ದಾರೆ.
ಉದ್ಯೋಗಕ್ಕೆಂದು ಕರೆದೊಯ್ದ ಕಂಪೆನಿ ಅರ್ಧದಲ್ಲೇ ಕೈ ಕೊಟ್ಟಿದ್ದರಿಂದ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಕಾರಣ ಬೀದರ, ಕಲಬುರಗಿ ಜಿಲ್ಲೆಯ 200 ಯುವಕರು ಕುವೈತ್‌ನಲ್ಲಿ ಸಿಲುಕಿದ್ದರು. ಉದ್ಯೋಗಕ್ಕೆಂದು ಕರೆದೊಯ್ದಿದ್ದ ಹೈದರಾಬಾದನ ಮೆಗಾ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಕೋವಿಡ್ ಆರ್ಥಿಕ ಹೊಡೆತ ಕಾರಣಕ್ಕೆ ನೌಕರರನ್ನು ಕೈಬಿಟ್ಟಿತ್ತು. ಇದರಿಂದ ಹಲವು ತಿಂಗಳಿಂದ ವೇತನವಿಲ್ಲದೆ, ಕೆಲಸವೂ ಇಲ್ಲದೆ ಪರದಾಡುತ್ತಿದ್ದರು. ಈ ಸಮಸ್ಯೆ ಬಗ್ಗೆ ಕೆಲ ದಿನಗಳ ಹಿಂದೆ ಅಲ್ಲಿನ ಕನ್ನಡಿಗರು ವಿಡಿಯೋ ಸಂದೇಶ ಕಳೆಸಿದ್ದರು. ಈ ಕುರಿತು ಉದಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟಗೊಂಡಿತ್ತು.
ವಿದೇಶಗಳಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆತಂದಂತೆ ನಮ್ಮನ್ನೂ ಸಹ ಕರೆತರಬೇಕು. ಇದಕ್ಕಾಗಿ ಸಿಎಂ ಯಡಿಯೂರಪ್ಪ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ ಮತ್ತು ಸಂಸದ ಭಗವಂತ ಖೂಬಾ ಪ್ರಯತ್ನಿಸಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದರು. ಕೂಡಲೇ ಎಚ್ಚೆತ್ತ ಜಿಲ್ಲೆಯ ಪ್ರತಿನಿಧಿಗಳು ಕುವೈತ್ ಕನ್ನಡಿಗರನ್ನು ವಾಪಸ್ ಕರೆಯಿಸಿಕೊಳ್ಳಲು ಶ್ರಮಿಸಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ ಅವರು ಕುವೈತ್‌ನಿಂದ ಹೈದ್ರಾಬಾದ್‌ಗೆ 98 ಜನರ ವಿಮಾನ ಟಿಕೆಟ್ ಮಾಡಿಸಿದ್ದರೆ, ಮಾಜಿ ಸಚಿವ ಬೇಗಾನೆ ರಾಮಯ್ಯ ಪುತ್ರಿ, ಭಾರತೀಯ ವಿದೇಶಾಂಗ ಸಚಿವಾಲಯದ ಮಾಜಿ ಸಲಹೆಗಾರರಾದ ಆರತಿ ಕೃಷ್ಣ ರಾಯಭಾರಿ ಕಚೇರಿಯಲ್ಲಿನ ತೊಂದರೆಗಳನ್ನು ಪರಿಹರಿಸುವಲ್ಲಿ ಶ್ರಮಿಸಿದ್ದಾರೆ. ಬುಧವಾರ ಮಧ್ಯಾಹ್ನ ಹೈದ್ರಾಬಾದ್‌ಗೆ ಆಗಮಿಸಿರುವ ಕನ್ನಡಿಗರು ಈಗ ಕೋವಿಡ್ ನಿಯಮದಂತೆ ಅಲ್ಲಿಯೇ ಕ್ವಾರಂಟೈನ್‌ನಲ್ಲಿ ಉಳಿದಿದ್ದಾರೆ. ಇನ್ನುಳಿದ 100 ಜನರು ಸಹ ಕೆಲ ದಿನಗಳಲ್ಲೇ ಪರಿವಾನಗಿ, ಟಿಕೆಟ್ ವ್ಯವಸ್ಥೆ ಆಗುತ್ತಿದ್ದಂತೆ ತಾಯ್ನಾಡಿಗೆ ಮರಳಲಿದ್ದಾರೆ.