ಮಂಗಳೂರು: ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 33 ಮಂದಿ ಸೇರಿದಂತೆ ಒಟ್ಟು 72 ಮಂದಿಯಲ್ಲಿ 41 ಮಂದಿಗೆ ಸ್ವದೇಶಕ್ಕೆ ಮರಳುವ ಕುರಿತು ಜಿಪಿ (ಸರಕಾರಿ ಯೋಜನೆ) ಪತ್ರ ಹಾಗೂ ವಿಮಾನ ಟಿಕೇಟ್‌ನ್ನು 7 ದಿನಗಳೊಳಗೆ ಹಾಜರು ಪಡಿಸಿ ಸ್ವದೇಶಕ್ಕೆ ಮರಳಲು ಕ್ರಮ ಕೈಗೊಳ್ಳುವಂತೆ ಅವರು ಕಾರ್ಯನಿರ್ವಹಿಸುತ್ತಿರುವ ಕಂಪೆನಿ ಸೂಚಿಸಿದೆ.
ಸೋಮವಾರ ಶೋನ್‌ನಲ್ಲಿ (ಕಾರ್ಮಿಕ ಪರವಾದ ನ್ಯಾಯಾಲಯ ವ್ಯವಸ್ಥೆ)ಗೆ ಭಾರತೀಯ ದೂತಾವಾಸದ ಅಧಿಕಾರಿಗಳು, ಕಂಪೆನಿಯ ಪ್ರತಿನಿಧಿಗಳ ಒಳಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಟಿಕೇಟು ಖರೀದಿಸಲು ಸುಮಾರು 25,000 ರೂ. ಅಗತ್ಯವಿದ್ದು ಇದನ್ನು ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ನೌಕರರು ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಂಕಷ್ಟದಲ್ಲಿರುವ ಉದ್ಯೋಗಿಗಳು ಸರಕಾರಿ ಯೋಜನೆಯಲ್ಲಿ (ಜಿಪಿ) ಉದ್ಯೋಗ ಮಾಡುವ ವೀಸಾದಲ್ಲಿ ತೆರಳಿದ್ದರು. ಸರಕಾರದ ಪರವಾದ ಕೆಲಸಕ್ಕೆ ಎಂದು ಕರೆದುಕೊಂಡು ಬಂದು ಬೇರೆ ಖಾಸಗಿ ಕಂಪೆನಿ ಕೆಲಸಕ್ಕೆ ನಿಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ವೀಸಾ ರದ್ದಾಗಿ ಪಾಸ್‌ಪೋರ್ಟ್ ಲಭಿಸಬೇಕಾದರೆ ಜಿಪಿ ಲೆಟರನ್ನು ಕಡ್ಡಾಯವಾಗಿ ಶೋನ್‌ಗೆ ಸಲ್ಲಿಸಬೇಕಾಗಿದೆ. ಆದರೆ ಜಿಪಿ ಲೆಟರ್ ನೀಡುವುದು ಯಾರು ಎಂಬುದು ಪ್ರಶ್ನೆಯಾಗಿದೆ.
ಜಿಪಿ ಪತ್ರ ಹಾಗೂ ಸ್ವದೇಶಕ್ಕೆ ತೆರಳಲು ಖರೀದಿಸಿದ ವಿಮಾನ ಟಿಕೇಟ್‌ನ್ನು ತಂದೊಪ್ಪಿಸಿದರೆ ಶೋನ್ ನವರು ವೀಸಾ ರದ್ದುಪಡಿಸಿ ಪಾಸ್‌ಪೋರ್ಟ್‌ನ್ನು ಭಾರತೀಯ ದೂತವಾಸ ಕಚೇರಿಗೆ ನೀಡುತ್ತಾರೆ. ಅಲ್ಲಿಂದ ನೌಕರರಿಗೆ ನೀಡಲಾಗುವುದು. ಆದರೆ ಅರ್ಥಿಕ ಸಂಕಷ್ಟದಲ್ಲಿರುವ ನೌಕರರಿಗೆ ವಿಮಾನ ಟಿಕೇಟು ಖರೀದಿಸುವುದೇ ಸಮಸ್ಯೆಯಾಗಿದೆ. ಇದೇ ವೇಳೆ ಸಂತ್ರಸ್ತರಿಂದ ರಾಜೀನಾಮೆ ಪಡೆಯುವ ಮೂಲಕ ನಮಗೇನೂ ಸಂಬಂಧ ಇಲ್ಲ ಎಂದು ತೋರ್ಪಡಿಸಲು ರಾಜೀನಾಮೆ ಪತ್ರ ಸಿದ್ಧಪಡಿಸಿ, ಸಹಿ ಹಾಕುವಂತೆ ಕಂಪನಿ ಒತ್ತಡ ಹೇರುತ್ತಿದೆ ಎನ್ನಲಾಗಿದೆ.