ನವದೆಹಲಿ: ದಾಂಪತ್ಯ ಎನ್ನುವುದು ಇತ್ತೀಚೆಗಿನ ವರ್ಷಗಳಲ್ಲಿ ಹೊಂದಾಣಿಕೆಯಿಲ್ಲದೆ ಸಾಗುವ ಬಂಧವಾಗಿ ಮಾರ್ಪಟ್ಟಿದೆ. ಮೊದಲಿನ ಹಾಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಕೊನೆಯವರೆಗೂ ಇರುವ ಸಂಬಂಧಗಳು ಇತ್ತೀಚೆಗಿನ ವರ್ಷಗಳಲ್ಲಿ ಕಾಣಸಿಗವುದು ಕಡಿಮೆಯೇ ಆಗಿದೆ.
ಕ್ಷುಲಕ ಕಾರಣಗಳಿಂದಾಗಿ ದಂಪತಿಗಳ ನಡುವೆ ಉಂಟಾಗುವ ಕಲಹ ವಿಚ್ಚೇದನ ಹಂತದವರೆಗೂ ಬರುವುದನ್ನು ನೋಡಿದ್ದೇವೆ. ಅಂಥದ್ದೇ ಒಂದು ವಿಚ್ಚೇದನ ಪ್ರಸಂಗ ಕುವೈತ್ ನಲ್ಲಿ ನಡೆದಿದೆ.
ಅಚ್ಚರಿ ಎಂದರೆ ಇವರು ಮದುವೆ ಆಗಿ ಆಗಿರುವುದು ಬರೀ ಮೂರೇ ನಿಮಿಷ.! ಮೂರೇ ನಿಮಿಷದಲ್ಲಿ ವಿಚ್ಚೇದನ (Divorce) ಪಡೆದಿದ್ದಾರೆ.!
ಕುವೈತ್ ನ ಫ್ಯಾಮಿಲಿ ಕೋರ್ಟಿನಲ್ಲಿ ವಿವಾಹವಾಗಿದೆ. ನ್ಯಾಯಾಧೀಶರು ಇಬ್ಬರ ಸಮ್ಮತಿಯ ಮೇರೆಗೆ ವಿವಾಹ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಮದುವೆ ಆಗಿ ವಧು – ವರ ಖುಷಿಯಿಂದ ಕೋರ್ಟಿನ ಹೊರಗೆ ಬರುತ್ತಿರುವಾಗ ವಧುವಿನ ಕಾಲು ಜಾರಿ ಆಕೆ ವರನತ್ತ ವಾಲಿದ್ದಾಳೆ. ಆದರೆ ವರ ಆಕೆಯನ್ನು ಹಿಡಿಯುವ ಬದಲು ಆಕೆಯ ಮೇಲೆ ರೇಗಾಡಿದ್ದಾನೆ. ʼಮೂರ್ಖಿʼ ಎಂದು ಆಕೆಗೆ ಬೈದಿದ್ದಾನೆ.
ಇದರಿಂದ ಕೋಪಗೊಂಡ ವಧು ಕೋರ್ಟಿನೊಳಗೆ ಹೋಗಿ ನ್ಯಾಯಾಧೀಶರ ಮುಂದೆ ವಿಚ್ಚೇದನ ಬೇಕೆಂದು ಕೋರಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡಿದ್ದ ನ್ಯಾಯಾಧೀಶರು ಆಕೆಯ ಮನವಿಗೆ ಸಮ್ಮತಿಸಿ ವಿಚ್ಚೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಮದುವೆಯಾಗಿ ಮೂರೇ ನಿಮಿಷದಲ್ಲಿ ದಂಪತಿಗಳು ದೂರವಾಗಿದ್ದಾರೆ.
ಇದು ಕುವೈತ್ ದೇಶದ ಇತಿಹಾಸದಲ್ಲೇ ಕನಿಷ್ಠ ಅವಧಿಯ ಮದುವೆಯೆಂದು ʼಇಂಡಿಪೆಂಡೆಂಟ್ಸ್ ಇಂಡಿʼ ವರದಿ ಮಾಡಿದೆ.
ಈ ಘಟನೆ ನಡೆದಿರುವುದು 2019ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಮ್ಮೆ ಸುದ್ದಿ ಎಲ್ಲೆಡೆ ಹರಡಿದ್ದು, ಹೆಣ್ಣಿನ ನಡೆಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.