ಕುವೈಟ್ : ಸಿರಿಯಾ, ಇರಾಕ್, ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಇರಾನ್ ಒಳಗೊಂಡಂತೆ ಐದು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನೀಡಿಕೆಯನ್ನು ಕುವೈಟ್ ಅಮಾನತುಗೊಳಿಸಿದೆ.
ಕಳೆದ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಸ್ಲಿಂ ಬಾಹುಳ್ಯವಿರುವ ಏಳು ದೇಶಗಳ ಮೇಲೆ ವಲಸೆ ನಿಷೇಧ ಹೇರಿರುವುದನ್ನು ಅನುಸರಿಸಿ ಇದೀಗ ಕುವೈಟ್ ಐದು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ವೀಸಾಗೆ ಅರ್ಜಿ ಹಾಕದಂತೆ ಸೂಚಿಸಿದೆ.
ಕಟ್ಟಾ ಇಸ್ಲಾಮಿಕ್ ಉಗ್ರರು ತನ್ನ ದೇಶಕ್ಕೆ ವಲಸೆ ಬರುವ ಭೀತಿ ಇರುವುದರಿಂದ ಕುವೈಟ್ ಐದು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನೀಡದಿರಲು ನಿರ್ಧರಿಸಿರುವುದಾಗಿ ಸ್ಪುಟ್‌ನಿಕ್ ಇಂಟರ್‌ನ್ಯಾಶನಲ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಶೇಷವೆಂದರೆ ಟ್ರಂಪ್ ನಿಷೇಧಕ್ಕೆ ಸಾಕಷ್ಟು ಮುನ್ನವೇ ಕುವೈಟ್, 2011ರಷ್ಟು ಹಿಂದೆಯೇ ಎಲ್ಲ ಸಿರಿಯನ್ನರಿಗೆ ವೀಸಾ ನೀಡುವುದನ್ನು ಅಮಾನತು ಮಾಡಿತ್ತು. ಕುವೈಟ್‌ನಲ್ಲಿ ಸಾಂಸ್ಕೃತಿಕ ಕಾಯಿದೆ ಕಾನೂನುಗಳು ಅತ್ಯಂತ ಕಟ್ಟುನಿಟ್ಟಾಗಿರುವುದೇ ಇದಕ್ಕೆ ಕಾರಣವೆಂದು ತಿಳಿಯಲಾಗಿದೆ.
2015ರಲ್ಲಿ ಇಸ್ಲಾಮಿಕ್ ಉಗ್ರರು ಶಿಯಾ ಮಸೀದಿಯೊಂದರ ಮೇಲೆ ಬಾಂಬ್ ದಾಳಿ ನಡೆಸಿ 27 ಕುವೈಟೀ ಪ್ರಜೆಗಳನ್ನು ಕೊಂದಿದ್ದರು. ಹೊರ ದೇಶಗಳಿಂದ ವಲಸೆ ಬರುವವರಿಗೆ ಅತ್ಯಂತ ಕಠಿನ ಕಾನೂನನ್ನು ಹೊಂದಿರುವ ಕುವೈಟ್ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುತ್ತಿದೆ.